ಮಾಜಿ ಸಚಿವ ಬಿ.ನಾಗೇಂದ್ರ ಇ.ಡಿ. ವಶಕ್ಕೆ
ಬೆಂಗಳೂರು:ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ತೆಗೆದುಕೊಂಡಿದೆ.
ನಾಗೇಂದ್ರ ವಶಕ್ಕೆ ಪಡೆದ ಬೆನ್ನಲ್ಲೇ ನಿಗಮದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್, ಎಸ್‌ಐಟಿ ಕಚೇರಿಯಲ್ಲಿ ಅಡಗಿ ಕುಳಿತಿದ್ದಾರೆ.
ವಶಕ್ಕೆ ಪಡೆಯಲು ಯತ್ನ
ಇವರನ್ನು ವಶಕ್ಕೆ ಪಡೆಯಲು ಇಡಿ ಅಧಿಕಾರಿಗಳು ಮುಂಜಾನೆಯಿಂದಲೇ ನಡೆಸಿದ ಪ್ರಯತ್ನ ಫಲ ಕೊಟ್ಟಿಲ್ಲ.
ನಾಗೇಂದ್ರ ಅವರನ್ನು ನಗರದ ಡಾಲರ‍್ಸ್ ಕಾಲೋನಿ ನಿವಾಸದಲ್ಲಿ ವಶಕ್ಕೆ ಪಡೆದುಕೊಂಡ ನಂತರ ದದ್ದಲ್ ಅವರನ್ನು ಬಂಧಿಸಲು ಯಲಹಂಕಕ್ಕೆ ತೆರಳಿದ್ದರು.
ಇದರ ಸುಳಿವರಿತ ದದ್ದಲ್ ರಾಯಚೂರಿಗೆ ಹೊರಟವರು ನಗರಕ್ಕೆ ಸೀದಾ ಹಿಂತಿರುಗಿ ಎಸ್‌ಐಟಿ ಕಚೇರಿ ಒಳಹೊಕ್ಕು, ತಮ್ಮನ್ನು ಬಂಧಿಸುವಂತೆ ವಿಚಾರಣಾಧಿಕಾರಿ ಡಿವೈಎಸ್‌ಪಿ ಶ್ರೀನಿವಾಸ ಮುಂದೆ ಅವಲತ್ತುಕೊಂಡರು.
ಅಗತ್ಯ ಇದ್ದವರನ್ನಷ್ಟೇ ವಶಕ್ಕೆ
ನನ್ನನ್ನು ಬಂಧಿಸಿ ಎಂದು ಸ್ವಯಂಪ್ರೇರಿತವಾಗಿ ದದ್ದಲ್ ಮನವಿ ಮಾಡಿಕೊಂಡರೂ, ನಿಮ್ಮ ಬಂಧನದ ಅವಶ್ಯಕತೆ ಇಲ್ಲ, ನಾವು ಈಗಾಗಲೇ ತನಿಖೆ ನಡೆಸಿದ್ದೇವೆ, ನಮಗೆ ಅಗತ್ಯ ಇದ್ದವರನ್ನಷ್ಟೇ ವಶಕ್ಕೆ ಪಡೆಯುತ್ತೇವೆ ಎಂದು ಎಸ್‌ಐಟಿ ಹೇಳಿದರೂ ಮಹಾಶಯ ಅಲ್ಲೇ ಕುಳಿತಿದ್ದಾರೆ.
ಹಗರಣಕ್ಕೆ ಸಂಬಂಧಿಸಿದಂತೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಕರಣವನ್ನು ಸಿಬಿಐಗೆ ವಹಿಸಿದ ನಂತರ ಭಾರೀ ಮೊತ್ತದ ಹಣಕಾಸು ಅವ್ಯವಹಾರ ಆಗಿರುವುದರಿಂದ ಇಡಿ ತನಿಖೆಯನ್ನು ಕೈಗೆತ್ತಿಕೊಂಡಿದೆ.
ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೂ ನೀಡಿದ್ದರೂ ಸಿಬಿಐ ಮತ್ತು ಇಡಿ ಸಹಾ ತನಿಖೆ ಮುಂದುವರಿಸಿವೆ.
ಇದರ ಬೆನ್ನಲ್ಲೇ ಕಳೆದ ಎರಡು ದಿನಗಳ ಹಿಂದೆ ನಾಗೇಂದ್ರ ಮತ್ತು ದದ್ದಲ್ ಸೇರಿದಂತೆ ಹಗರಣದಲ್ಲಿ ಪಾಲುದಾರ ಆರೋಪ ಎದುರಿಸುತ್ತಿರುವ ವ್ಯಕ್ತಿಗಳ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿ ಕೆಲವರನ್ನು ವಶಕ್ಕೆ ಪಡೆದುಕೊಂಡಿತ್ತು.
ಬೆಳ್ಳಂಬೆಳಗ್ಗೆ ವಶಕ್ಕೆ ಯತ್ನ
ಇವರು ನೀಡಿದ ಮಾಹಿತಿ ಆಧಾರದ ಮೇಲೆ ಇಡಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಪ್ರಮುಖ ಆರೋಪಿಗಳಾದ ನಾಗೇಂದ್ರ ಮತ್ತು ದದ್ದಲ್ ಅವರನ್ನು ವಶಕ್ಕೆ ಪಡೆಯಲು ಮುಂದಾಯಿತು.
ಮಾಜಿ ಸಚಿವರನ್ನು ಇಡಿ ವಶಕ್ಕೆ ಪಡೆಯಿತಾದರೂ, ದದ್ದಲ್ ಕೇಂದ್ರದ ತನಿಖಾ ಸಂಸ್ಥೆ ಅಧಿಕಾರಿಗಳ ಕಣ್ತಪ್ಪಿಸಿ ಅಡಗಿ ಕುಳಿತಿದ್ದಾರೆ.
ಹಗರಣ ಬಯಲಾಗುತ್ತಿದ್ದಂತೆ ಇಲಾಖೆ ಹೊಣೆ ಹೊತ್ತಿದ್ದ ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು.
ಈ ಬೆಳವಣಿಗೆ ನಂತರ ರಾಜ್ಯ ಸರ್ಕಾರ ಪ್ರಕರಣವನ್ನು ಎಸ್‌ಐಟಿಗೆ ವಹಿಸಿತು.
ಅಧಿಕಾರಿಗಳ ಬಂಧನ
ನಿಗಮದ ಅಧಿಕಾರಿಗಳನ್ನು ಬಂಧಿಸಿದ ಎಸ್‌ಐಟಿ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತು. ಅಷ್ಟೇ ಅಲ್ಲ ಕಳೆದ ಮಂಗಳವಾರ ನಾಗೇಂದ್ರ ಮತ್ತು ದದ್ದಲ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.
ಎಸ್‌ಐಟಿಯಿಂದ ಪ್ರಮುಖ ಆರೋಪಿಗಳು ಹೊರಬರುತ್ತಿದ್ದಂತೆ ಎಚ್ಚೆತ್ತ ಇ.ಡಿ., ಸಂಬಂಧಪಟ್ಟವರ ಮನೆಗಳ ಮೇಲೆ ದಾಳಿ ನಡೆಸಿದ್ದಲ್ಲದೆ, ಇವರನ್ನು ವಶಕ್ಕೆ ಪಡೆಯಲು ಮುಂದಾಯಿತು.
ತನ್ನ ಮಾಜಿ ಸಹೋದ್ಯೋಗಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತುಟಿ ಬಿಚ್ಚುತ್ತಿಲ್ಲ. ಪತ್ರಕರ್ತರು ನಾಗೇಂದ್ರ ಅವರ ಬಗ್ಗೆ ಎಷ್ಟೇ ಪ್ರಶ್ನೆ ಕೇಳಿದರೂ ಪ್ರತಿಕ್ರಿಯೆಗೆ ನಿರಾಕರಿಸಿದರು.