ಬೆಂಗಳೂರು:ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಗಳಾದ ಬಳಿಕ ಕೆಪಿಸಿಸಿ ಕಚೇರಿಯಲ್ಲಿಂದು ಮೊದಲ ಕಾರ್ಯಕರ್ತರ ಅಹವಾಲು ಸ್ವೀಕಾರ ಅಭಿಯಾನ ಹುರುಪು-ನಿರೀಕ್ಷೆ-ಭರವಸೆಗಳೊಂದಿಗೆ ನಡೆಯಿತು.
ವಿಕಲಚೇತನರ ಬಳಿಗೇ ಹೋಗಿ ಅಹವಾಲುಗಳನ್ನು ಸ್ವೀಕರಿಸುವ ಮೂಲಕ ಮುಖ್ಯಮಂತ್ರಿ ಅವರು, ಅಹವಾಲು ಸ್ವೀಕಾರ ಅಭಿಯಾನಕ್ಕೆ ಚಾಲನೆ ನೀಡಿದರು.
ಹತ್ತು ಹಲವು ಬೇಡಿಕೆಗಳು
ತ್ರಿಚಕ್ರ ವಾಹನ, ಸರ್ಕಾರಿ ಉದ್ಯೋಗ, ನಿಗಮ-ಮಂಡಳಿಯಲ್ಲಿ ಅವಕಾಶ, ಗುತ್ತಿಗೆ ನೌಕರಿ, ಸ್ವಂತ ಉದ್ಯೋಗಕ್ಕೆ ಅನುದಾನ, ಸಾಲ ಸವಲತ್ತು ಸೇರಿದಂತೆ ಹಲವು ವಿಧದ ಬೇಡಿಕೆಗಳನ್ನು ವಿಕಲಚೇತನರು, ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿಗಳ ಮುಂದಿಟ್ಟರು.
ಪ್ರತಿಯೊಬ್ಬ ಕಾರ್ಯಕರ್ತರ ಅಹವಾಲು ಮತ್ತು ಪಕ್ಷ ಸಂಘಟನೆಯಲ್ಲಿ ಅವರುಗಳು ತೊಡಗಿಸಿಕೊಂಡಿರುವ ಬಗ್ಗೆ ಮುಖ್ಯಮಂತ್ರಿಗಳು ವಿವರವಾದ ಮಾಹಿತಿ ಪಡೆದುಕೊಂಡರು.
ನಂತರ ತಮ್ಮ ಸಿಬ್ಬಂದಿಗೆ, ಅಹವಾಲುಗಳನ್ನು ಪಟ್ಟಿ ಮಾಡಿ, ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಬೇಡಿಕೆ ಈಡೇರಿಸುವಂತೆ ಸ್ಪಷ್ಟ ಸೂಚನೆ ನೀಡಿದರು.
ಕೂಡಲೇ ಬಗೆಹರಿಸಲು ಸೂಚನೆ
ತಕ್ಷಣ ಈಡೇರಿಸಬಹುದಾದ ಬೇಡಿಕೆಗಳನ್ನು ಕೂಡಲೇ ಬಗೆಹರಿಸುವಂತೆ ತಮ್ಮ ಅಧಿಕಾರಿ ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿ ಅವರು ಸ್ಥಳದಲ್ಲೇ ನಿರ್ದೇಶನ ನೀಡಿದರು.
ಧಾರವಾಡ ಜಿಲ್ಲೆಯಿಂದ ಬಂದಿದ್ದ ಹುಬ್ಬಳ್ಳಿ-ಧಾರವಾಡ ಬೀದಿ ಬದಿ ವ್ಯಾಪಾರಿಗಳ ಕಾಂಗ್ರೆಸ್ ಘಟಕದ ಇಸ್ಮಾಯಿಲ್ ಅವರು, ಸ್ಥಳೀಯ ಆಡಳಿತ ಬೀದಿ ಬದಿ ವ್ಯಾಪಾರಿಗಳಿಗೆ ಅನಗತ್ಯ ತೊಂದರೆ ಕೊಡುತ್ತಿದೆ, ಅಂಗಡಿಗಳನ್ನು ತೆರವುಗೊಳಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಿದರು.
ಇದಕ್ಕೆ ಗರಂ ಆದ ಮುಖ್ಯಮಂತ್ರಿ ಅವರು, ಸ್ಥಳದಿಂದಲೇ ಧಾರವಾಡ ಜಿಲ್ಲಾಧಿಕಾರಿಗೆ ಕರೆ ಮಾಡಿ, ಬೀದಿ ಬದಿ ವ್ಯಾಪಾರಿಗಳ ಜೊತೆ ಮಾನವೀಯವಾಗಿ ವರ್ತಿಸಿ, ಅನಗತ್ಯ ತೊಂದರೆ ಕೊಡಬಾರದು ಎಂಬ ಸೂಚನೆ ನೀಡಿದರು.
ಕನ್ನಡ ಸಾಫ್ಟ್‌ವೇರ್
ಮೈಸೂರಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಮಹಾಮಂಡಳದ ಎಸ್.ಶಿವನಾಗಪ್ಪ ಮನವಿ ಸಲ್ಲಿಸಿ, ಕೆಎಂಎಫ್‌ನಲ್ಲಿನ ಸಾಫ್ಟ್‌ವೇರ್ ಹಾಲು ಉತ್ಪಾದಕರಿಗೆ ಅನುಕೂಲಕರವಾಗಿಲ್ಲ, ಕನ್ನಡ ಸಾಫ್ಟ್‌ವೇರ್ ಅಳವಡಿಸುವಂತೆ ಮನವಿ ಮಾಡಿದರು.
ಸ್ಥಳದಿಂದಲೇ ಫೋನ್ ಮೂಲಕ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರನ್ನು ಸಂಪರ್ಕಿಸಿದ ಮುಖ್ಯಮಂತ್ರಿಗಳು, ಹಾಲು ಉತ್ಪಾದಕ-ಸ್ನೇಹಿ ಸಾಫ್ಟ್‌ವೇರ್ ಅಳವಡಿಕೆಗೆ ಸೂಚಿಸಿದರು.
