ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಭೂಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಸ್ಪಷ್ಟವಾಗಿದ್ದು ಇವರ ವಿರುದ್ಧ ಪ್ರಕರಣದ ತನಿಖೆ ಹಾಗೂ ನ್ಯಾಯಾಲಯಕ್ಕೆ ಹೋಗಲು ರಾಜ್ಯಪಾಲರು ಅನುಮತಿ ನೀಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಮನವಿ ಮಾಡಿದ್ದಾರೆ.
ಆಡಳಿತದಲ್ಲಿದ್ದ ಸಂದರ್ಭದಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ಮುಡಾದಲ್ಲಿ ಭಾರೀ ಅವ್ಯವಹಾರ ನಡೆಸಿದ್ದಾರೆಂದು ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳನ್ನು ಮುಂದಿಟ್ಟರು.
ನ್ಯಾಯಾಲಯಕ್ಕೆ ಹೋಗಲು ಅನುಮತಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನ್ಯಾಯವಾದಿಯೊಬ್ಬರು ಎಲ್ಲಾ ದಾಖಲೆಗಳನ್ನು ರಾಜ್ಯಪಾಲರ ಮುಂದಿಟ್ಟು ಮುಖ್ಯಮಂತ್ರಿ ವಿರುದ್ಧ ತನಿಖೆ ಮತ್ತು ನ್ಯಾಯಾಲಯಕ್ಕೆ ಹೋಗಲು ರಾಜ್ಯಪಾಲರಿಂದ ಅನುಮೋದನೆ ಪಡೆದುಕೊಳ್ಳಬೇಕು.
ಸರ್ಕಾರ ಮಾಡುವ ತನಿಖೆ, ಇಲ್ಲವೇ ನಾವು ಒತ್ತಾಯ ಮಾಡಿ ನಡೆಸುವ ಮತ್ತೊಂದು ತನಿಖೆಯಿಂದ ಸತ್ಯ ಹೊರಬೀಳುವುದಿಲ್ಲ, ಸಿದ್ದರಾಮಯ್ಯ ಅವರ ಮೂಗಿನಡಿಯೇ ಅವರ ಕುಟುಂಬದವರು ಮಾಡಿರುವ ಹಗರಣದ ಬಗ್ಗೆ ನ್ಯಾಯಾಲಯವೇ ತೀರ್ಮಾನಿಸಿ ತಪ್ಪಿಸ್ಥರಿಗೆ ಶಿಕ್ಷೆ ನೀಡಬೇಕು.
ಕರ್ನಾಟಕದಲ್ಲಿ ಈ ಹಿಂದೆ ಇಂತಹ ಅನೇಕ ಘಟನೆಗಳು ನಡೆದಿವೆ, ಮುಡಾ ಭೂಮಿಯನ್ನೇ ಒತ್ತುವರಿ ಮಾಡಿ, ಅದನ್ನು ತಮ್ಮದೆಂದು ಹೇಳಿಕೊಂಡು ಅತ್ಯಂತ ಬೆಲೆ ಬಾಳುವ 14 ನಿವೇಶನ ಪಡೆದಿರುವುದು ಮಹಾಪರಾಧ.
3.16 ಎಕರೆ ಭೂಸ್ವಾಧೀನ ವಿವಾದ
ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ 3.16 ಎಕರೆ ಭೂಮಿಗೆ ಸಂಬಂಧಿಸಿದಂತೆ ಎಲ್ಲ ವ್ಯವಹಾರವೂ ನಡೆದಿದೆ.
ಇವರು ಹೇಳಿಕೊಳ್ಳುವ ಭೂಮಿ, ನಿಂಗ ಉರುಫ್ ಜವರ ಎಂಬುವರಿಗೆ ಸೇರಿದ್ದು, ಆ ಭೂಮಿಯನ್ನು ಮುಡಾ ಭೂಸ್ವಾಧೀನ ಮಾಡಿಕೊಂಡು ಮಾಲೀಕರಿಗೆ 3.26 ಲಕ್ಷ ರೂ. ಸಂದಾಯ ಮಾಡಿದೆ.
ಈ ಭೂಮಿಗೆ 1992ರಲ್ಲಿ ಪ್ರಾಥಮಿಕ ನೋಟಿಫಿಕೇಷನ್ ಮಾಡಿ 1998ರಲ್ಲಿ ಅಂತಿಮ ನೋಟಿಫಿಕೇಷನ್ ಆಗಿದೆ. 1998ರಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದಾಗ ಈ ಭೂಮಿ ದೇವರಾಜ್ ಎಂಬುವರ ಹೆಸರಿನಲ್ಲಿ ಪೌತಿ ಖಾತೆ ಆಗಿರುತ್ತೆ, ಅವರು ಅದನ್ನು ಡಿ-ನೋಟಿಫಿಕೇಷನ್ ಮಾಡಿಸಿಕೊಂಡಿರುತ್ತಾರೆ.
2004ರವರೆಗೂ ತಕರಾರು ಇಲ್ಲ
2004ರವರೆಗೂ ಯಾರೂ ಈ ಭೂಮಿಯ ಬಗ್ಗೆ ತಕರಾರು ತೆಗೆದಿರುವುದಿಲ್ಲ, ಇದನ್ನು ಅದೇ ವರ್ಷ ಮಲ್ಲಿಕಾರ್ಜುನ ಸ್ವಾಮಿ ಅವರು ದೇವರಾಜ್ ಅವರಿಂದ ಖರೀದಿ ಮಾಡಿರುತ್ತಾರೆ.
ಮಲ್ಲಿಕಾರ್ಜುನಸ್ವಾಮಿ, ಕೃಷಿ ಭೂಮಿಯನ್ನು ವಸತಿ ಸಮುಚ್ಛಯ ನಿರ್ಮಾಣಕ್ಕೆ ಭೂಪರಿವರ್ತನೆಗೆ ಅನುಮತಿ ನೀಡಬೇಕೆಂದು ಡಿಸಿ ಅವರಿಗೆ ಅರ್ಜಿ ಸಲ್ಲಿಸುತ್ತಾರೆ.
ಆ ವೇಳೆಗೆ ಅಲ್ಲಿ ಕೆಲವು ನಿವೇಶನಗಳ ಹಂಚಿಕೆಯಾಗಿ ಪಾರ್ಕ್ ಸಹಾ ಆಗಿರುತ್ತದೆ, ಅಂದಿನ ಜಿಲ್ಲಾಧಿಕಾರಿಗಳಾಗಲಿ, ಅಧಿಕಾರಿಗಳಾಗಲಿ ಸ್ಥಳ ಪರಿಶೀಲನೆ ಮಾಡದೆ ಭೂಪರಿವರ್ತನೆ ಮಾಡಿಕೊಡುತ್ತಾರೆ.
ಅರಿಶಿನ-ಕುಂಕುಮ ಕೊಡುಗೆ
ಭೂಪರಿವರ್ತನೆ ನಂತರ ಮಲ್ಲಿಕಾರ್ಜುನಸ್ವಾಮಿ, ಮುಖ್ಯಮಂತ್ರಿ ಅವರ ಪತ್ನಿಯೂ ಆದ ತಮ್ಮ ಸಹೋದರಿಗೆ ಈ ಭೂಮಿಯನ್ನು ಅರಿಶಿನ-ಕುಂಕುಮ ರೂಪದಲ್ಲಿ ನೀಡುತ್ತಾರೆ.
ಭೂಮಿ ನೋಂದಣೆ ಸಂದರ್ಭದಲ್ಲೂ ಕೃಷಿ ಭೂಮಿಯೆಂದೇ ಸಮೂದಿಸಿರುತ್ತಾರೆ, 2013ರಲ್ಲಿ ಸಿದ್ದರಾಮಯ್ಯ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ವೇಳೆ ಚುನಾವಣಾ ಪ್ರಮಾಣಪತ್ರದಲ್ಲಿ ಈ ಭೂಮಿಯ ಉಲ್ಲೇಖ ಮಾಡಿರುವುದಿಲ್ಲ.
ಆ ನಂತರ ಅವರು ಮುಖ್ಯಮಂತ್ರಿ ಆಗುತ್ತಾರೆ, 2014ರಲ್ಲಿ ಅವರ ಕುಟುಂಬದವರು ಮುಡಾಗೆ ಪತ್ರ ಬರೆದು ನಮ್ಮ ಭೂಮಿ ಅತಿಕ್ರಮಣ ಮಾಡಿ ಬಡಾವಣೆ ನಿರ್ಮಿಸಿದ್ದೀರಿ, ನಮಗೆ ಪರ್ಯಾಯ ಜಾಗ ಕೊಡಿ ಎಂದು ಕೇಳುತ್ತಾರೆ.
ನಿಯಮಬಾಹಿರ ನೋಂದಣಿ
ಈ ಸಂಬಂಧ ಮುಡಾ ಸರಣಿ ಸಭೆಗಳನ್ನು ನಡೆಸಿ, ಅಧಿಕಾರದ ಒತ್ತಡಕ್ಕೆ ಮಣಿದು ನಿಯಮಬಾಹಿರವಾಗಿ 2020ರಲ್ಲಿ ಮೈಸೂರಿನ ಜಲದರ್ಶಿನಿ ಅತಿಥಿ ಗೃಹಕ್ಕೆ ನೋಂದಣಿ ಅಧಿಕಾರಿಗಳನ್ನು ಕರೆಸಿಕೊಂಡು ಅಲ್ಲೇ 14 ನಿವೇಶನಗಳನ್ನು ಅವರ ಕುಟುಂಬಕ್ಕೆ ಮುಡಾ ನೋಂದಣಿ ಮಾಡಿಕೊಡುತ್ತದೆ.
ಪ್ರತಿ ನಿವೇಶನಕ್ಕೆ ಒಂದು ಸಾವಿರ ರೂ.ನಂತೆ ನೋಂದಣಿ ಶುಲ್ಕ ಕಟ್ಟಿಸಿಕೊಂಡು ನಿವೇಶನ ದಾಖಲೆಗಳನ್ನು ನೀಡುತ್ತದೆ, ಮುಡಾ ಬೈಲಾ ಪ್ರಕಾರ ಇವರ ಭೂಮಿಗೆ ಕೇವಲ ಎರಡು ನಿವೇಶನಗಳನ್ನು ಮಾತ್ರ ಅದೇ ಬಡಾವಣೆಯಲ್ಲಿ ನೀಡಬೇಕಿದೆ.
ಆದರೆ, ಇವರು ಅಭಿವೃದ್ಧಿ ಹೊಂದಿದ ಬೇರೆ ಬಡಾವಣೆಗಳಲ್ಲಿ 14 ನಿವೇಶನಗಳನ್ನು ಮಂಜೂರು ಮಾಡಿಸಿಕೊಳ್ಳುತ್ತಾರೆ.
ಸಿದ್ದರಾಮಯ್ಯ ಅವರ ಅಧಿಕಾರ ಕಾಲದಲ್ಲೇ ಈ ಎಲ್ಲಾ ಭ್ರಷ್ಟಾಚಾರ ನಡೆದಿದೆ, ಬೇರಾವುದೇ ತನಿಖೆಯಿಂದಲೂ ಸತ್ಯ ಹೊರಬರುವುದಿಲ್ಲ, ಯಾರಾದರೂ ಕಾನೂನು ತಜ್ಞರು ಅನುಮತಿ ಕೋರಿದರೆ, ರಾಜ್ಯಪಾಲರು ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.