ಬೆಂಗಳೂರು:ಸೋಮವಾರದಿಂದ ಆರಂಭಗೊಳ್ಳಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಮುಡಾ ಹಗರಣ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅವ್ಯವಹಾರ ವಿಷಯಗಳು ಪ್ರತಿಧ್ವನಿಸಲಿವೆ.
ಸಿದ್ದರಾಮಯ್ಯ ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಯಾವುದೇ ಹಗರಣಗಳಲ್ಲೂ ಸಿಲುಕಿರಲಿಲ್ಲ, ಆದರೆ, ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ ಬೆನ್ನಲ್ಲೇ ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ನಿವೇಶನ ಹಂಚಿಕೆ ಹಾಗೂ ವಾಲ್ಮೀಕಿ ನಿಗಮದ 187 ಕೋಟಿ ರೂ. ಅಕ್ರಮ ವರ್ಗಾವಣೆ ಆರೋಪ ಉರುಳು ಸುತ್ತಿಕೊಳ್ಳುತ್ತಿದೆ.
ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯ
ಪ್ರತಿಪಕ್ಷ ಎನ್‌ಡಿಎ ಮೈತ್ರಿಕೂಟದ ಬಿಜೆಪಿ-ಜೆಡಿಎಸ್, ಈ ಎರಡೂ ಹಗರಣಗಳನ್ನು ಸದನಗಳಲ್ಲಿ ಪ್ರಸ್ತಾಪಿಸಿ, ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸುವುದಲ್ಲದೆ, ಹಗರಣಗಳನ್ನು ಸಿಬಿಐ ತನಿಖೆಗೆ ವಹಿಸವಂತೆ ಪಟ್ಟು ಹಿಡಿಯಲು ನಿರ್ಧರಿಸಿವೆ.
ಕಳೆದ ಶುಕ್ರವಾರ ಸಂಜೆ ಮೈತ್ರಿಕೂಟದ ಶಾಸಕರು ಸಭೆ ಸೇರಿ ಸರ್ಕಾರದ ವಿರುದ್ಧ ಸದನದಲ್ಲಿ ನಡೆಸಬೇಕಾದ ಹೋರಾಟದ ಬಗ್ಗೆ ಸುದೀರ್ಘ ಚರ್ಚೆ ಮಾಡಿದ್ದಾರೆ.
ಈ ಹಗರಣಗಳಲ್ಲದೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ವರ್ಗಾವಣೆ ದಂಧೆ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿರುವುದು, ರೈತರ ಆತ್ಮಹತ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದಕ್ಕೆ ಸರ್ಕಾರವೇ ಹೊಣೆ ಎಂದು ಬೊಟ್ಟು ಮಾಡಲಿದ್ದಾರೆ.
ಆಡಳಿತ ಸಂಪೂರ್ಣ ಕುಸಿತ
ಗ್ಯಾರಂಟಿ ಹೆಸರಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳದೆ, ಆಡಳಿತ ಸಂಪೂರ್ಣ ಕುಸಿದಿದೆ.
ಎಲ್ಲದಕ್ಕೂ ಮಿಗಿಲಾಗಿ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಅವರ ಕುಟುಂಬವೇ ಪಾಲುದಾರಿಕೆ ಹೊಂದಿದೆ.
ಅವರು ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲೇ ಈ ಹಗರಣ ನಡೆದಿದ್ದರೂ ಪ್ರಾಧಿಕಾರದಿಂದ 62 ಕೋಟಿ ರೂ. ಪರಿಹಾರ ಕೇಳುತ್ತಿದ್ದಾರೆ, ತಮ್ಮದಲ್ಲದ ಭೂಮಿಯನ್ನು ಬೇನಾಮಿ ಹೆಸರಿನಲ್ಲಿ ನೋಂದಾಯಿಸಿ ನಂತರ ಖರೀದಿ ಮಾಡಿದ್ದಾರೆ.
ಭೂಮಿಗೆ ಪರಿಹಾರ ಕೊಡಿ
ಪ್ರಾಧಿಕಾರ ತನ್ನ ಭೂಮಿ ಎಂದು ಬಡಾವಣೆ ನಿರ್ಮಿಸಿ ಹಂಚಿಕೆ ಮಾಡುವವರೆಗೂ ತುಟಿ ಬಿಚ್ಚದ ಮುಖ್ಯಮಂತ್ರಿ ಕುಟುಂಬ, ಆ ನಂತರ, ತಮ್ಮ ಭೂಮಿ ವಶ ಪಡಿಸಿಕೊಳ್ಳಲಾಗಿದೆ, ಪರಿಹಾರ ಕೊಡಿ ಎಂದು ಒತ್ತಾಯಿಸುತ್ತಿದೆ.
ಹಣಕಾಸು ಇಲಾಖೆ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಅವರ ಅರಿವಿಗೆ ಬಾರದೇ ನಿಗಮವೊಂದರಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಅಕ್ರಮ ವರ್ಗಾವಣೆ ಸಾಧ್ಯವೇ ಇಲ್ಲ ಎಂದು ಪ್ರತಿಪಕ್ಷ ಆರೋಪಿಸಲಿದೆ.
ಈ ಹಗರಣದಲ್ಲೂ ಮುಖ್ಯಮಂತ್ರಿ ಪಾತ್ರ ಇದೆಯೆಂದು ಆರೋಪಿಸಿ ರಾಜೀನಾಮೆಗೆ ಒತ್ತಡ ತರಲು ಪ್ರತಿಪಕ್ಷಗಳು ಸಿದ್ಧತೆ ನಡೆಸಿವೆ.
ಪ್ರತಿಪಕ್ಷಗಳ ಅಸ್ತ್ರ
ಪ್ರತಿಪಕ್ಷಗಳ ಬಳಿ ಅಸ್ತ್ರಗಳಿವೆ, ಆದರೆ, ಅದನ್ನು ಸಮರ್ಪಕವಾಗಿ ಬಳಸುವ ಯೋಧರ ಕೊರತೆ ಕಂಡುಬರುತ್ತಿದೆ.
ಇಂತಹ ಸನ್ನಿವೇಶದಲ್ಲಿ ಪ್ರತಿಪಕ್ಷ ನಾಯಕರಾಗಿ ಆರ್.ಅಶೋಕ್ ತಮ್ಮ ಪ್ರೌಢಿಮೆಯನ್ನು ಯಾವ ರೀತಿ ಬಳಸಿಕೊಳ್ಳುತ್ತಾರೆ ಎಂಬುದನ್ನು ಎನ್‌ಡಿಎ ಗಮನಿಸುತ್ತಿದೆ.
ಪ್ರತಿಪಕ್ಷಗಳ ಆರೋಪಗಳನ್ನು ಎದುರಿಸಲು ಆಡಳಿತ ಪಕ್ಷವೂ ಸಿದ್ಧಗೊಂಡಿದೆ, ಇದರಿಂದ ಜನಪರ ಚರ್ಚೆಗಿಂತ ಹಗರಣಗಳ ವಿಷಯವೇ 9 ದಿನಗಳ ಅಧಿವೇಶನದ ಪ್ರಮುಖ ಅಂಶವಾಗಲಿದೆ.