ಬೆಂಗಳೂರು:ಸಾವಿರಾರು ಕೋಟಿ ರೂ. ಮೊತ್ತದ ಮುಡಾ ಹಗರಣ ಮತ್ತು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ದಲಿತರ ಹಣ ಲೂಟಿ ಹಗರಣಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಮಂಡಲದಲ್ಲಿ ಉತ್ತರ ಕೊಡಬೇಕು ಎಂದು ಆಗ್ರಹಿಸಿ ಬಿಜೆಪಿ ಇಂದಿಲ್ಲಿ ಪ್ರತಿಭಟನೆ ನಡೆಸಿತು.
ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಶಾಸಕರ ಭವನದ ಸಮೀಪ ಮಹರ್ಷಿ ವಾಲ್ಮೀಕಿ ಪ್ರತಿಮೆ ಬಳಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು.
ಸಿಬಿಐಗೆ ಒಪ್ಪಿಸಬೇಕು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದ ತನಿಖೆಯನ್ನು ನಿವೃತ್ತ ನ್ಯಾಯಾಧೀಶರಿಂದ ನಡೆಸಿದರೆ ಸಾಲದು, ಮುಖ್ಯಮಂತ್ರಿಗಳಿಗೆ ನಿಜವಾಗಿ ತಾಕತ್ತಿದ್ದರೆ ಮುಡಾ ಹಗರಣ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಗಳ ಕುಟುಂಬವೇ ಹಗರಣದ ಪಾಲುದಾರರಾಗಿದ್ದು, ಸಾವಿರಾರು ಕೋಟಿ ರೂ. ಬೆಲೆ ಬಾಳುವ ನಿವೇಶನಗಳಿಗೆ ಸಂಬಂಧಿಸಿದಂತೆ ಮೈಸೂರು ಮುಡಾದಲ್ಲಿ ಹಗರಣ ನಡೆದಿದೆ.
ಹಗರಣಗಳ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕು, ಮುಡಾ ಹಗರಣ ಸಿಬಿಐ ತನಿಖೆಗೆ ಆಗ್ರಹಿಸಿ ಸದನದ ಹೊರಗೆ ಮತ್ತು ಒಳಗೆ ಹೋರಾಟ ಮುಂದುವರೆಯಲಿದೆ.
ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ
ಸಿದ್ದರಾಮಯ್ಯನವರು ದಲಿತರ ಹೆಸರು ಹೇಳಿಕೊಂಡು, ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡದವರಿಗೆ ನ್ಯಾಯ ಕೊಡುವುದಾಗಿ ಅಧಿಕಾರಕ್ಕೆ ಬಂದವರು, ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಲೂಟಿ ಮಾಡಿದ್ದಲ್ಲದೆ, ಆ ಹಣದಲ್ಲಿ ಲೋಕಸಭಾ ಚುನಾವಣೆ ನಡೆಸಿದ್ದಾರೆ.
ಈ ಹಗರಣಗಳಿಂದ ಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ಬಣ್ಣ ಬಯಲಾಗಿದೆ, ಮುಖ್ಯಮಂತ್ರಿ ಸ್ಥಾನದಲ್ಲಿ ಕೂರುವ ನೈತಿಕತೆಯನ್ನು ಸಿದ್ದರಾಮಯ್ಯ ಕಳೆದುಕೊಂಡಿದ್ದಾರೆ ಎಂದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರು ಇ.ಡಿ. ಕಸ್ಟಡಿಯಲ್ಲಿದ್ದಾರೆ, ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ದದ್ದಲ್ ಕಾಣೆಯಾಗಿದ್ದಾರೆ.
ದಲಿತರ ವೋಟು, ನೋಟು ಮಾತ್ರ ಬೇಕು
ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ನಿಗಮದ ಅಧಿಕಾರಿಯೂ ದಲಿತರೇ ಆಗಿದ್ದಾರೆ, ಕಾಂಗ್ರೆಸ್ಸಿಗೆ ದಲಿತರ ವೋಟು ಬೇಕು, ದಲಿತರ ನೋಟು ಬೇಕು, ದಲಿತರ ಸಾವೂ ಬೇಕು, ಇದು ಕಾಂಗ್ರೆಸ್ ನೀತಿ ಎಂದು ಟೀಕಿಸಿದರು.
ನಮ್ಮ ಮೇಲೆ ದಬ್ಬಾಳಿಕೆ ಮಾಡುವ ಮತ್ತು ಹೆದರಿಸುವ ಕೆಲಸ ಮಾಡಬೇಡಿ, ಮುಡಾದಲ್ಲಿ ಯಾವ್ಯಾವ ಸರ್ಕಾರದಲ್ಲಿ ಹಗರಣ ನಡೆದಿದ್ದರೂ ಎಲ್ಲ ಸೇರಿಸಿ ಸಿಬಿಐ ತನಿಖೆಗೆ ಒಪ್ಪಿಸಿ.
ರಾಜ್ಯ ಸರ್ಕಾರ ನೈತಿಕವಾಗಿ ಸತ್ತು ಹೋಗಿದೆ, ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕಿತ್ತು, ಯಾವ ಮುಖ ಇಟ್ಟುಕೊಂಡು ವಿಧಾನಸೌಧಕ್ಕೆ ಬರುತ್ತಾರೋ ಅರ್ಥ ಆಗುತ್ತಿಲ್ಲ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಬಣ್ಣ ಬಯಲು
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಅಧಿಕಾರಿಗಳು ಕಾರಣ ಎನ್ನುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು, ಆರೋಪಿತ ಶಾಸಕರಿಗೆ ಕ್ಲೀನ್‌ಚಿಟ್ ಕೊಡುವ ಕೆಲಸ ಮಾಡುತ್ತಿದ್ದಾರೆ, ಭ್ರಷ್ಟಾಚಾರರಹಿತ ಆಡಳಿತ ಕೊಡುವುದಾಗಿ ಹೇಳಿದ ಕಾಂಗ್ರೆಸ್ಸಿಗರ ಬಣ್ಣ ಬಯಲಾಗಿದೆ ಎಂದು ಟೀಕಿಸಿದರು.
ಮುಖ್ಯಮಂತ್ರಿಗಳು ನಿಜವಾಗಿ ಪ್ರಾಮಾಣಿಕರಾಗಿದ್ದರೆ, ನಿಷ್ಪಕ್ಷಪಾತ ತನಿಖೆಗೆ ಮುಡಾ ಹಗರಣವನ್ನು ಸಿಬಿಐಗೆ ಒಪ್ಪಿಸಬೇಕು.
ವಾಲ್ಮೀಕಿ ನಿಗಮ ಹಗರಣ ಸಂಬಂಧ ಪ್ರತಿಪಕ್ಷಗಳು ನಿಲುವಳಿ ಸೂಚನೆ ಮಂಡಿಸಲಿವೆ, ಸದನದಲ್ಲಿ ಚರ್ಚೆ ನಡೆಯಲೇಬೇಕು, ಮುಖ್ಯಮಂತ್ರಿಗಳು ಉತ್ತರ ಕೊಡಲೇಬೇಕು ಎಂದರು.