ಬೆಂಗಳೂರು:ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇಕಡ 50ರಷ್ಟು ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇಕಡ 75ರಷ್ಟು ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಂಪುಟಸಭೆಯಲ್ಲಿ ಅನುಮೋದನೆ ದೊರೆತಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡಿಗರು, ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳುವ ಅವಕಾಶ ಕಲ್ಪಿಸಲು ಈ ನಿರ್ಧಾರ ಸಹಕಾರಿಯಾಗಲಿದೆ.
ಕನ್ನಡ ಪರ ಸರ್ಕಾರ
ನಮ್ಮದು ಕನ್ನಡ ಪರ ಸರ್ಕಾರ, ಕನ್ನಡಿಗರ ಹಿತ ಕಾಯುವುದೇ ನಮ್ಮ ಮುಖ್ಯ ಗುರಿ ಎಂದಿದ್ದಾರೆ.
ಮತ್ತೊಂದೆಡೆ ಭಾರೀ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ನೀಡಿ, ಖಾಸಗಿ ಉದ್ಯಮಗಳಲ್ಲಿ ಸಹಾ ಕನ್ನಡಿಗರಿಗೆ ಕೆಲವು ಶ್ರೇಣಿಯ ಹುದ್ದೆಗಳನ್ನು ನೂರಕ್ಕೆ ನೂರರಷ್ಟು ಮೀಸಲಿಡಲಾಗುವುದು ಎಂದಿದ್ದಾರೆ.
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಲೇಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ, ತಯಾರಿಕಾ ವಲಯ ಮತ್ತು ಕೈಗಾರಿಕಾ ಕ್ರಾಂತಿಯ ಉಜ್ವಲ ಅವಕಾಶಗಳನ್ನು ನಾವು ಕಳೆದುಕೊಳ್ಳುವಂತಿಲ್ಲ.
ಎಲ್ಲ ಗೊಂದಲಗಳಿಗೆ ತೆರೆ
ಸದ್ಯದಲ್ಲೇ ಐಟಿ-ಬಿಟಿ, ಕಾನೂನು ಮತ್ತು ಕಾರ್ಮಿಕ ಸಚಿವರುಗಳ ಜೊತೆ ಚರ್ಚಿಸಿ, ಎಲ್ಲ ಗೊಂದಲಗಳಿಗೆ ತೆರೆ ಎಳೆಯಲಾಗುವುದು.
ಸ್ಥಳೀಯರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ, ಹಾಗೆಯೇ ಉದ್ಯಮ ವಲಯದವರ ಹಿತಾಸಕ್ತಿಗೂ ಧಕ್ಕೆಯಾಗದಂತೆ ಗಮನ ನೀಡಲಾಗುವುದು, ಸಂಬಂಧಪಟ್ಟ ಎಲ್ಲರೊಂದಿಗೂ ಮಾತುಕತೆ ನಡೆಸಲಾಗುವುದು, ಯಾವುದೇ ಆತಂಕ ಬೇಡ.
ಕರ್ನಾಟಕ ಪುರೋಗಾಮಿ ರಾಜ್ಯವಾಗಿದೆ, ’ಗ್ಲೋಬಲ್ ಚೈನಾ ಒನ್’ ನೀತಿಯಿಂದ ಲಭಿಸಿರುವ ಸದವಕಾಶ ಕಳೆದುಕೊಳ್ಳುವಂತಿಲ್ಲ, ಶತಮಾನಕ್ಕೊಮ್ಮೆ ಇಂತಹ ಅವಕಾಶ ಸಿಗುತ್ತದೆ ಎಂದಿದ್ದಾರೆ.