ಎರಡು – ಮೂರು ತಿಂಗಳಿಂದ ಮನೆಯೊಡತಿಗಿಲ್ಲ ಹಣ
ಬೆಂಗಳೂರು : ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಒಬ್ಬ ಹಿರಿಯ ಮಹಿಳೆಗೆ ಗೃಹಲಕ್ಷ್ಮೀ ಯೋಜನೆಯಡಿ ಮಾಸಿಕ ಎರಡು ಸಾವಿರ ರೂ. ನೀಡುತ್ತಿದ್ದ ಜನಪ್ರಿಯ ಕಾರ್ಯಕ್ರಮಕ್ಕೆ ಗರ ಬಡಿದಿದೆ.
ಕಳೆದ ಮೂರು-ನಾಲ್ಕು ತಿಂಗಳಿಂದ ಯಾರೋಬ್ಬರ ಖಾತೆಗೂ ಹಣ ಬಂದಿಲ್ಲ, ಕಾರ್ಯಕ್ರಮ ಅನುಷ್ಟಾನದ ನಂತರ ಕಳೆದ 10 ತಿಂಗಳಲ್ಲಿ ಕುಟುಂಬದ ಮಹಿಳೆಗೆ ಹಣ ಸಂದಾಯವಾಗಿತ್ತು, ಇದರಿಂದ ರಾಜ್ಯದ ಬೊಕ್ಕಸಕ್ಕೆ 23,000 ಕೋಟಿ ರೂ. ಹೊರೆ ಬಿದ್ದಿದೆ.
ಲೋಕಸಭಾ ಚುನಾವಣಾ ಫಲಿತಾಂಶದಿಂದ ವಿಚಲಿತಗೊಂಡ ಕಾಂಗ್ರೆಸ್ ಸರ್ಕಾರ ಯೋಜನೆ ಮುಂದುವರೆಸುವ ಬಗ್ಗೆ ಮೀನಾ-ಮೇಷ ಎಣಿಸುತ್ತಿದೆ.
ಫಲಿತಾಂಶದ ನಂತರ ಯೋಜನೆ ಸದ್ಯಕ್ಕೆ ಸ್ಥಗಿತಗೊಂಡಿದೆ. ತಮಗೆ ಹಣ ಬಂದಿಲ್ಲವೆಂದು ಫಲಾನುಭವಿಗಳು ದಿನನಿತ್ಯ ಇಲಾಖೆ ಹೊಣೆ ಹೊತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಈ ಸಂಬಂಧ ಆರ್ಥಿಕ ಇಲಾಖೆಗೆ ಸಚಿವೆ ಮೂರು ಪತ್ರಗಳನ್ನು ಬರೆದರೂ ಹಣ ಬಿಡುಗಡೆ ಆಗಿಲ್ಲ. ಹಣಕಾಸು ಇಲಾಖೆ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಅವರಿಂದಲೂ ಮೌನ ಉತ್ತರ.
ಇದರಿಂದ ಸಚಿವೆ ತೀವ್ರ ಬೇಸರಗೊಂಡಿದ್ದರೂ ಪಕ್ಷ ನೀಡಿದ್ದ ಭರವಸೆ ಮುಂದುವರೆಸಲು ನಿರಂತರ ಪ್ರಯತ್ನ ಪಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ತಮ್ಮ ಆಪ್ತರ ಬಳಿ ಅಸಮಾಧಾನ ತೋಡಿಕೊಂಡಿರುವ ಸಚಿವೆ, ಸರ್ಕಾರದ ಆರ್ಥಿಕ ಸ್ಥಿತಿಗತಿ ಸರಿಯಾಗಿಲ್ಲ. ಇಲಾಖಾ ಅಧಿಕಾರಿಗಳು ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದಾರೆ.
ಯೋಜನೆಗೆ ಮುಂಗಡಪತ್ರದಲ್ಲಿ ಹಣ ನಿಗದಿ ಪಡಿಸಿದ್ದರೂ, ಬಿಡುಗಡೆ ಮಾಡುವಲ್ಲಿ ಅಧಿಕಾರಿಗಳು ಮೀನಾ-ಮೇಷ ಎಣಿಸುತ್ತಿದ್ದಾರೆಂದು ಅವಲತ್ತುಕೊಂಡಿದ್ದಾರೆ.
ಯೋಜನೆಗೆ ರಾಜ್ಯಾದ್ಯಂತ ಒಂದು ಕೋಟಿ 19 ಲಕ್ಷ ಮಹಿಳೆಯರು ಹೆಸರು ನೋಂದಾಯಿಸಿಕೊಂಡಿದ್ದು, ಕಳೆದ ಮೂರು ತಿಂಗಳಿಂದ ಹಣದ ನಿರೀಕ್ಷೆಯಲ್ಲಿದ್ದಾರೆ.
ಲೋಕಸಭೆ ಚುನಾವಣೆ ಸಮಯದಲ್ಲಿ ಒಂದೇ ಬಾರಿಗೆ ಎರಡು ತಿಂಗಳ 4000 ರೂ. ಪ್ರತಿಯೊಬ್ಬ ಫಲಾನುಭವಿಯ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವ ಮೂಲಕ ಗೃಹಲಕ್ಷ್ಮಿಯರಲ್ಲಿ ಭಾರೀ ಸಂತಸ ತಂದಿತ್ತು.
ಗ್ಯಾರಂಟಿ ಯೋಜನೆಗಳಿಂದ ಲೋಕಸಭಾ ಚುನಾವಣೆಯಲ್ಲಿ ಭಾರೀ ಯಶಸ್ಸು ನಿರೀಕ್ಷಿಸಿದ್ದ ಕಾಂಗ್ರೆಸ್‌ಗೆ ಫಲಿತಾಂಶ ಆಘಾತ ತಂದಿತ್ತು.
ಚುನಾವಣೆ ಫಲಿತಾಂಶದಲ್ಲಿ ಗೃಹಲಕ್ಷ್ಮಿ ಯೋಜನೆ ಹೆಚ್ಚು ಪರಿಣಾಮ ಬೀರಿಲ್ಲ ಎಂಬ ವರದಿಗಳು ರಾಜ್ಯ ಸರ್ಕಾರವನ್ನು ತಲುಪಿದ್ದು, ಫಲಾನುಭವಿಗಳ ಮಾಸಿಕ 2000 ರೂ.ಗಳ ಆಸೆಗೆ ಗ್ರಹಣ ಹಿಡಿಯಿತು.
ಕಳೆದ ಮೂರು ತಿಂಗಳಿಂದ ಫಲಾನುಭವಿಗಳಿಗೆ ನೀಡಬೇಕಾದ ಸುಮಾರು 2,090 ಕೋಟಿ ರೂ. ನೀಡಲು ಹಣಕಾಸು ಇಲಾಖೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಯೋಜನೆಗೆ ಬಿಡುಗಡೆ ಮಾಡಬೇಕಾದ ಹಣ ಸದ್ಯದ ಪರಿಸ್ಥಿತಿಯಲ್ಲಿ ಲಭ್ಯವಿಲ್ಲ ಎಂಬ ಸಬೂಬು ಹೇಳುತ್ತಿರುವ ಅಧಿಕಾರಿಗಳು, ಆದಷ್ಟು ಶೀಘ್ರ ಬಿಡುಗಡೆ ಮಾಡುವ ಭರವಸೆಯನ್ನಷ್ಟೇ ನೀಡುತ್ತಿದ್ದಾರೆ.