ಬೆಂಗಳೂರು:ಬಿಜೆಪಿಗರು ಭ್ರಷ್ಟಾಚಾರದ ಪಿತಾಮಹರು, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಆಡಳಿತದಲ್ಲಿ ಹಲವಾರು ನಿಗಮಗಳ ಸುಮಾರು 300 ಕೋಟಿ ರೂ.ಗಳಿಗೂ ಹೆಚ್ಚು ಅಕ್ರಮ ನಡೆದಿದ್ದು, ಸದನದ ಮೂಲಕ ಜನರಿಗೆ ತಿಳಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೋವಿ ನಿಗಮದ 87 ಕೋಟಿ ರೂ., ಎಪಿಎಂಸಿಯ 47 ಕೋಟಿ ರೂ., 2019ರಲ್ಲಿ ಅಂಗವಿಕಲ ಕಲ್ಯಾಣ ಇಲಾಖೆಯ 22 ಕೋಟಿ ರೂ., ಅಂಬೇಡ್ಕರ್ ನಿಗಮದ ಕೆನರಾ ಬ್ಯಾಂಕ್‌ನಲ್ಲಿನ ಹಣ ಜೂನ್ 2018ರಲ್ಲಿ 5 ಕೋಟಿ ರೂ., ದೇವರಾಜ್ ಅರಸು ನಿಗಮದ 47 ಕೋಟಿ ರೂ., ಮಾಲಿನ್ಯ ನಿಯಂತ್ರಣ ಮಂಡಲಿಯ 10 ಕೋಟಿ ರೂ., ಕೆಐಡಿಬಿಯ ಹಣ ಸೇಲಂಗೆ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದರು.
ದಾಖಲೆಗಳನ್ನು ಬಯಲು ಮಾಡುತ್ತೇವೆ
ಬಿಜೆಪಿಯ ಅಕ್ರಮಗಳ ಕುರಿತು ಖಂಡಿತ ತನಿಖೆ ನಡೆಸಲಾಗುವುದು, ಸದನದಲ್ಲಿ ಎಲ್ಲಾ ದಾಖಲೆಗಳನ್ನು ಬಯಲು ಮಾಡುತ್ತೇವೆ, ಅಕ್ರಮಗಳ ಹಿಂದೆ ಯಾವ ಮಂತ್ರಿ, ಅಧ್ಯಕ್ಷರು, ಮುಖ್ಯಮಂತ್ರಿಗಳು ಇದ್ದರು ಎಂದು ಜನರಿಗೆ ತಿಳಿಸುತ್ತೇವೆ.
ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರೂ., ಮಂತ್ರಿ ಸ್ಥಾನಕ್ಕೆ 100 ಕೋಟಿ ರೂ. ನೀಡಬೇಕು ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಹಾಗೂ ಭೋವಿ ನಿಗಮದ ಅಕ್ರಮದ ಬಗ್ಗೆ ಗೂಳಿಹಟ್ಟಿ ಶೇಖರ್ ಆರೋಪಗಳ ಕುರಿತು ಅಂದು ಬಿಜೆಪಿ ಏಕೆ ತನಿಖೆ ನಡೆಸಲಿಲ್ಲ ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರ ಹಗರಣಗಳ ತನಿಖೆ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಆ ವಿಚಾರದ ಮೇಲೆ ಚರ್ಚೆಗೆ ಅವಕಾಶವಿಲ್ಲ, ಆದರೆ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬೆಲೆಕೊಟ್ಟು ಸದನದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಲಾಗಿದೆ, ಅಕ್ರಮ ಎಸಗಿದ್ದರೆ ಯಾವುದೇ ಅಧಿಕಾರಿ, ಮಂತ್ರಿ, ಶಾಸಕ, ಯಾರೇ ಆಗಿರಲಿ ರಕ್ಷಿಸುವ ಉದ್ದೇಶ ನಮಗಿಲ್ಲ ಎಂದರು.
ತನಿಖೆಗೆ ಎಸ್‌ಐಟಿ ರಚನೆ
ವಾಲ್ಮೀಕಿ ನಿಗಮದ 89 ಕೋಟಿ ರೂ. ತೆಲಂಗಾಣಕ್ಕೆ ಅಕ್ರಮ ವರ್ಗಾವಣೆ ಆದ ಹಗರಣ ತನಿಖೆಗೆ ಎಸ್‌ಐಟಿ ರಚನೆ ಮಾಡಲಾಗಿದೆ, ತನಿಖಾ ತಂಡ ಸುಮಾರು 36 ಕೋಟಿ ರೂ.ಗಳಷ್ಟು ವಶಪಡಿಸಿಕೊಂಡಿದೆ.
ಬ್ಯಾಂಕ್ ಅಧಿಕಾರಿ ಒಂದೇ ದಿನದಲ್ಲಿ ಕೋಟ್ಯಂತರ ರೂ. ಸಾಲ ಮಂಜೂರು ಮಾಡಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವರನ್ನು ಹೊಣೆಗಾರರನ್ನಾಗಿ ಮಾಡಲು ಆಗುತ್ತದೆಯೇ, ಪ್ರತಿಪಕ್ಷಗಳು ಉತ್ತರ ಕೊಡಬೇಕು ಎಂದರು.