ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಾರದರ್ಶಕ ಭ್ರಷ್ಟ ಆಡಳಿತ ನಡೆಸುತ್ತಿದೆ ಎಂದು ವಿಧಾನಪರಿಷತ್‌ನ ಬಿಜೆಪಿ-ಜೆಡಿಎಸ್ ಸದಸ್ಯರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಇಂದು ಪ್ರತಿಭಟನೆ ನಡೆಸಿದರು.
ಭ್ರಷ್ಟ ಕಾಂಗ್ರೆಸ್ ಸರ್ಕಾರ ವರ್ಗಾವಣೆ, ನೇಮಕಾತಿ, ಭೂಪರಿವರ್ತನೆ ಸೇರಿದಂತೆ ಎಲ್ಲದಕ್ಕೂ ಒಂದೊಂದು ದರ ನಿಗದಿ ಮಾಡಿದೆ ಎಂದು ಪ್ರತಿಭಟನಾಕಾರರು ರೇಟ್ ಕಾರ್ಡ್ ಬಿಡುಗಡೆ ಮಾಡಿದರು.
ಭೂಪರಿವರ್ತನೆ ಎಕರೆಗೆ 27 ಲಕ್ಷ ರೂ.
ಈ ಸಂದರ್ಭದಲ್ಲಿ ಸಿ.ಟಿ.ರವಿ ಮತ್ತಿತರ ನಾಯಕರು ಮಾತನಾಡಿ, ಕಾಂಗ್ರೆಸ್ ಸರ್ಕಾರ ರೇಟ್ ಕಾರ್ಡ್ ನಿಗದಿ ಮಾಡಿದ್ದು, ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಲ್ಲಿ ಎಫ್‌ಎಆರ್ (ಫ್ಲೋರ್ ಏರಿಯ ರೇಷಿಯೋ) ಒಂದು ಚದರಡಿಗೆ 100 ರೂ., ಸಿಎಲ್‌ಯು (ಚೇಂಜ್ ಆಫ್ ಲ್ಯಾಂಡ್ ಯೂಸ್-ಭೂಪರಿವರ್ತನೆಗೆ) ಒಂದು ಎಕರೆಗೆ 27 ಲಕ್ಷ ರೂ. ನಿಗದಿ ಪಡಿಸಲಾಗಿದೆ.
ಗೃಹ ಇಲಾಖೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆಗೆ ನಿಯೋಜನೆ ಸ್ಥಳದ ಕಿಮ್ಮತ್ತು ಆಧರಿಸಿ 50 ಲಕ್ಷ ರೂ.ನಿಂದ ಒಂದು ಕೋಟಿ ರೂ., ಎಸಿಪಿ ಹುದ್ದೆಗೆ 1.5 ಕೋಟಿ ರೂ.ನಿಂದ 2 ಕೋಟಿ ರೂ.ವರೆಗೆ ನಿಗದಿಯಾಗಿದೆ.
ಮುಖ್ಯ ಇಂಜಿನಿಯರ್‌ಗೆ 1 ಕೋಟಿ ರೂ.
ಎಂಜಿನಿಯರ್‌ಗಳಿಗೆ (ಎಇ) 20 ರಿಂದ 25 ಲಕ್ಷ ರೂ., ಎಇಇಗೆ 25 ರಿಂದ 50 ಲಕ್ಷ ರೂ., ಎಕ್ಸಿಕ್ಯೂಟಿವ್ ಎಂಜಿನಿಯರ್‌ಗೆ 50 ಲಕ್ಷದಿಂದ 75 ಲಕ್ಷ ರೂ., ಸಿಇಗೆ ಒಂದು ಕೋಟಿ ರೂ.ನಿಂದ 5 ಕೋಟಿ ರೂ.ವರೆಗೆ ರೇಟ್ ಫಿಕ್ಸ್ ಮಾಡಲಾಗಿದೆ ಎಂದರು.
ಕಂದಾಯ ಇಲಾಖೆಯಲ್ಲಿ ತಹಸೀಲ್ದಾರ್ ಹುದ್ದೆಗಳು 50 ಲಕ್ಷದಿಂದ ಒಂದು ಕೋಟಿ ರೂ.ಗಳಿಗೆ ಈಗಾಗಲೇ ಮಾರಾಟವಾಗಿದೆ, ಮತ್ತೆ ವರ್ಗಾವಣೆಗೆ ಮುಂದಿನ ವರ್ಷದವರೆಗೆ ಕಾಯುವ ಪರಿಸ್ಥಿತಿ ನಿರ್ಮಿಸಲಾಗಿದೆ.
ಹುದ್ದೆಗಳ ಹೋಲ್‌ಸೇಲ್ ಹರಾಜು
ಎಸಿ ಹುದ್ದೆಗೆ (ಬೆಂಗಳೂರಿನಲ್ಲಿ) 5 ಕೋಟಿ ರೂ.ನಿಂದ 7 ಕೋಟಿ ರೂ., ಅಬ್ಕಾರಿ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್‌ಗೆ 50 ಲಕ್ಷ ರೂ., ಡಿಸಿಗೆ ಒಂದು ಕೋಟಿ ರೂ.ನಿಂದ 1.5 ಕೋಟಿ ರೂ.ಗೆ ನಿಗದಿಪಡಿಸಿದ್ದು, ಸಬ್‌ರಿಜಿಸ್ಟ್ರಾರ್ ಮತ್ತು ಆರ್‌ಟಿಒ ಹುದ್ದೆಗಳನ್ನು ಹೋಲ್‌ಸೇಲ್ ಹರಾಜು ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಇದು ಶೇ.100ರಷ್ಟು ಕಾಂಗ್ರೆಸ್ ಸರ್ಕಾರದ ರೇಟ್ ಕಾರ್ಡ್ ಆಗಿದ್ದು, ಜಾತಿ ಬಲ ಇದ್ದರೆ ಶೇ.10ರಷ್ಟು ಕಡಿಮೆ ರೇಟ್, ಜಾತಿ ಬಲ ಇಲ್ಲದವರು ಶೇ.10ರಷ್ಟು ಹೆಚ್ಚು ಹಣ ನೀಡಬೇಕಾಗಿದೆ.
ಮಹರ್ಷಿ ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಬಯಲಿಗೆ ತರುವ ಮೂಲಕ ವಿರೋಧ ಪಕ್ಷಗಳು ಕಾಂಗ್ರೆಸ್ ಸರ್ಕಾರದ ಭ್ರಷ್ಟ ಆಡಳಿತವನ್ನು ಎಳೆಎಳೆಯಾಗಿ ಬಿಡಿಸಿಟ್ಟಿವೆ, ಅಂಗೈ ಹುಣ್ಣಿಗೆ ಕನ್ನಡಿಯ ಅವಶ್ಯಕತೆ ಹೇಗೆ ಇಲ್ಲವೋ, ಹಾಗೇ ಕಾಂಗ್ರೆಸ್‌ನ ಭ್ರಷ್ಟಾಚಾರ ಆಡಳಿತಕ್ಕೆ ದುರ್ಬೀನು ಹಾಕುವ ಅವಶ್ಯಕತೆ ಇಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕಿ ಇಲ್ಲ ಎನ್ನುತ್ತಾರೆ, ಆದರೆ, ಆಡಳಿತದಲ್ಲಿ ಪಾರದರ್ಶಕ ಭ್ರಷ್ಟಾಚಾರ ಇದೆ ಎಂದು ವ್ಯಂಗ್ಯವಾಡಿದರು.