ಬೆಂಗಳೂರು:ಕೆಎಎಸ್ ಅಧಿಕಾರಿಗಳ ಶ್ರಮ ಜನರ ಸೇವೆಗೆ ಮೀಸಲಾಗಬೇಕು, ಸ್ವಾರ್ಥ ಸಾಧನೆಗೆ ಅಲ್ಲ ಎಂದು ಸಚಿವ ಕೃಷ್ಣಬೈರೇಗೌಡ ಇಂದಿಲ್ಲಿ ಕಿವಿಮಾತು ಹೇಳಿದರು.
ಕೆಎಎಸ್ ಅಧಿಕಾರಿಗಳ ತರಬೇತಿ ಶಿಬಿರದ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕಾರಣಿಗಳ ಅಧಿಕಾರ ಐದು ವರ್ಷಕ್ಕೊಮ್ಮೆ ಬದಲಾಗುತ್ತದೆ, ಅಧಿಕಾರಿಗಳೇ ಶಾಶ್ವತ ಸರ್ಕಾರ, ಜನಪರ ಪ್ರಾಮಾಣಿಕ ಸೇವೆ ಸಲ್ಲಿಸುವುದೇ ಆದ್ಯತೆಯಾಗಬೇಕು, ನಿಮ್ಮ ಆತ್ಮಸಾಕ್ಷಿ ನಿಮಗೆ ದಾರಿ ದೀಪವಾಗಲಿ ಎಂದರು.
ವ್ಯವಸ್ಥೆ ಸರಿಯಿಲ್ಲ ಎಂಬ ಮಾತು ಎಲ್ಲರ ಬಾಯಿಂದ ಕೇಳಿಬರುತ್ತದೆ, ಕೆಲವರು ಪ್ರಾಮಾಣಿಕ ಅಧಿಕಾರಿಗಳೂ ಈ ಅಸಮಾಧಾನ ಹೊರಹಾಕಿದ್ದನ್ನು ಕಂಡಿದ್ದೇನೆ, ವ್ಯವಸ್ಥೆ ಸರಿಯಿಲ್ಲ ಎಂಬುದು ಭಾಗಶಃ ಸತ್ಯ, ಈ ವ್ಯವಸ್ಥೆ ಬದಲಿಸುವವರು ಯಾರು ಮತ್ತು ಹೇಗೆ ಎಂಬ ದೊಡ್ಡ ಪ್ರಶ್ನೆ ನಮ್ಮೆಲ್ಲರ ಮುಂದಿದೆ.
ಬದ್ಧತೆಯಿಂದ ಜನಪರ ಸೇವೆ
ಯುವ ಅಧಿಕಾರಿಗಳು ನಿಷ್ಠೆ, ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಜನಪರ ಸೇವೆ ಮಾಡುವ ಮೂಲಕ ಬದಲಾವಣೆಗೆ ನಾಂದಿ ಹಾಡಬೇಕು, ಊರೆಲ್ಲಾ ಕೆಟ್ಟಿದೆ ಎಂದು ನಾವೂ ಕೆಡುವುದಕ್ಕಿಂತ ಒಳಿತಿನ ಕಡೆ ಹೆಜ್ಜೆ ಇಡುವುದು ಲೇಸು, ಬದಲಾವಣೆ ಎಂಬುದು ನಿಮ್ಮಿಂದ ಆರಂಭವಾಗಬೇಕು.
ಕೆಲವು ಅಧಿಕಾರಿಗಳು ಹಳೆ ವಿಧಾನಕ್ಕೆ ಜೋತು ಬಿದ್ದು ಜಡ್ಡು ಹಿಡಿದಿದ್ದಾರೆ, ಜನರು ಕಚೇರಿಗಳಿಗೆ ಅಲೆಯುವುದರಲ್ಲೇ ಸಮಯವೆಲ್ಲ ವ್ಯರ್ಥವಾಗುತ್ತಿದೆ, ಅಲೆದಲೆದು ಶಕ್ತಿಹೀನರಾಗುತ್ತಿದ್ದಾರೆ.
ನವತಂತ್ರಜ್ಞಾನಗಳನ್ನು ಕೆಲಸದಲ್ಲಿ ಅಳವಡಿಸಿಕೊಳ್ಳಬೇಕು, ಯಾವುದೇ ರಾಜಕೀಯ ಪಕ್ಷ ಅಧಿಕಾರದಲ್ಲಿದ್ದರೂ ಕರ್ನಾಟಕಕ್ಕೆ ಒಳ್ಳೆಯ ಹೆಸರು ಬರುವಂತೆ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು ಎಂದರು.