ಬೆಂಗಳೂರು:ಕಾವೇರಿ, ಕೃಷ್ಣ ಸೇರಿದಂತೆ ರಾಜ್ಯದ ಎಲ್ಲಾ ನದಿ ಪಾತ್ರದಲ್ಲಿರುವ ಕೆರೆಗಳಿಗೆ ನೀರು ಹರಿಸಲು ಸೂಚನೆ ನೀಡಲಾಗಿದೆ ಎಂದು ಜಲಸಂಪನ್ಮೂಲ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು, ಭತ್ತ ಸೇರಿದಂತೆ ಕೃಷಿ ಚಟುವಟಿಕೆಗೆ ನೀರು ಹರಿಸುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದರು.
ಜಲಾಶಯಗಳು ಭರ್ತಿ ಹಂತಕ್ಕೆ
ರಾಜ್ಯದಲ್ಲಿ ಉತ್ತಮ ಮಳೆಯಾಗಿ ನಮ್ಮ ಜಲಾಶಯಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಬಹುತೇಕ ಜಲಾಶಯಗಳು ಭರ್ತಿ ಆಗುವ ಹಂತದಲ್ಲಿವೆ.
ಈ ಮಧ್ಯೆ ಕೆರೆಗಳನ್ನು ತುಂಬಿಸಿ ಜಲಮೂಲ ವೃದ್ಧಿಸಲು ಮೊದಲ ಹಂತದ ತೀರ್ಮಾನ ಕೈಗೊಂಡಿದ್ದೇವೆ.
ಕೃಷಿ ಚಟುವಟಿಕೆಗೆ ನೀರು ಹರಿಸುವ ಸಂಬಂಧ ಜಲಾಶಯಗಳಲ್ಲಿನ ನೀರಿನ ಮಟ್ಟ ನೋಡಿಕೊಂಡು ಮುಂದಿನ ದಿನಗಳಲ್ಲಿ ನಾಲೆಗಳಿಗೆ ನೀರು ಹರಿಸಲಾಗುವುದು.
ಮುನ್ನಚ್ಚರಿಕೆ ಸೂಚನೆ
ಕೃಷ್ಣರಾಜ ಸಾಗರ ಜಲಾಶಯ ಭರ್ತಿ ಹಂತದಲ್ಲಿದೆ, ಮುನ್ನಚ್ಚರಿಕೆಯಾಗಿ ಕೆಳಭಾಗದಲ್ಲಿರುವ ನದಿ ಪಾತ್ರದ ಗ್ರಾಮಗಳು ಮತ್ತು ಜನರಿಗೆ ಸೂಚನೆ ನೀಡಲಾಗಿದೆ ಎಂದರು.
ಭಾರೀ ಮಳೆಯಿಂದ ಕೆಲವಡೆ ಭೂಕುಸಿತ ಉಂಟಾಗಿದ್ದು ಅಂತಹ ಕಡೆಗಳಲ್ಲಿ ಯುದ್ಧೋಪಾದಿಯಲ್ಲಿ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಲ್ಲದೆ, ಸಚಿವರುಗಳನ್ನು ನಿಯೋಜಿಸಲಾಗಿದೆ ಎಂದರು.
ಜಿಲ್ಲಾ, ತಾಲ್ಲೂಕು ಪಂಚಾಯತ್ ಹಾಗೂ ನಗರಪಾಲಿಕೆಗಳಿಗೆ ಚುನಾವಣೆ ಯಾವುದೇ ಸಮಯದಲ್ಲಿ ಎದುರಾಗಲಿದ್ದು, ಈ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಉದ್ದೇಶದಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಭೆ ನಡೆಸಲಾಗುತ್ತಿದೆ.
ಒಳ್ಳೆ ಕೆಲಸ ಮಾಡಿದವರಿಗೆ ಬಡ್ತಿ
ಕೆಲವು ಜಿಲ್ಲಾಧ್ಯಕ್ಷರು ಒಳ್ಳೆಯ ಕೆಲಸ ಮಾಡಿದ್ದಾರೆ, ಅಂತಹವರಿಗೆ ಬಡ್ತಿ ನೀಡಲಾಗುವುದು, ಸಂಘಟನೆಯಲ್ಲಿ ಹಿಂದುಳಿದವರನ್ನು ಮನೆಗೆ ಕಳುಹಿಸಲಾಗುವುದು ಎಂದರು.
ಕೆಪಿಸಿಸಿಯನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ದೊಡ್ಡ ಪ್ರಮಾಣದಲ್ಲಿ ಪುನರ್ ರಚನೆ ಮಾಡಲಾಗುತ್ತಿದೆ, ಅಲ್ಲದೆ, ಪಕ್ಷಕ್ಕಾಗಿ ದುಡಿದಿರುವ ಕಾರ್ಯಕರ್ತರಿಗೆ ಉಳಿದಿರುವ ನಿಗಮ-ಮಂಡಳಿಗಳಲ್ಲಿ ಸ್ಥಾನಮಾನ ನೀಡಲಾಗುವುದು.
ನಿಗಮ-ಮಂಡಳಿಗಳಿಗೆ ಸದಸ್ಯರನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ, ಇದಕ್ಕಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದರು.