ಬೆಂಗಳೂರು:ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿದು ೭ ಜನ ಸಾವನ್ನಪ್ಪಿದ್ದ ಶಿರೂರು ಗ್ರಾಮಕ್ಕೆ ಕಳೆದ ಶನಿವಾರ ಭೇಟಿ ನೀಡಿದಾಗ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರೊಬ್ಬರೇ ಬಂದು ಏನು ಮಾಡುತ್ತಾರೆ ಮಿಲಿಟರಿ ಕರೆತಂದು ಫೀಲ್ಡಿಗೆ ಇಳಿಸಬೇಕಿತ್ತು, ಎಂಬುದಾಗಿ ಸೇನೆ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ನನ್ನ ಬಗ್ಗೆ ಲಘುವಾಗಿ ಮಾತನಾಡುವ ಭರದಲ್ಲಿ ನಮ್ಮ ಹೆಮ್ಮೆಯ ಸೇನೆಯನ್ನೂ ಹೀಗಳೆದಿರುವುದು ದುರ್ದೈವದ ಸಂಗತಿ ಎಂದಿದ್ದಾರೆ.
ರಕ್ಷಣಾ ಕಾರ್ಯದಲ್ಲಿ ವೀರಯೋಧರು
ಜಿಲ್ಲಾಡಳಿತ ರಕ್ಷಣಾ ಕಾರ್ಯ ಮಾಡುತ್ತಿಲ್ಲ ಎಂಬುದಾಗಿ ತಾವು ಹೇಳಿಲ್ಲ, ರಾಜ್ಯ ಸರ್ಕಾರವನ್ನೂ ಟೀಕಿಸಿಲ್ಲ, ದುರ್ಘಟನೆಯಿಂದ ನೊಂದ ಕುಟುಂಬಗಳ ಕಣ್ಣೀರಿಗೆ ಓಗೊಟ್ಟು ನಮ್ಮ ಹೆಮ್ಮೆಯ ಸೇನೆಯ 40ಕ್ಕೂ ಹೆಚ್ಚು ವೀರಯೋಧರು ಧಾವಿಸಿ, ರಕ್ಷಣಾ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಿದ್ದಾರೆ, ಇದಕ್ಕೆ ಉಪಮುಖ್ಯಮಂತ್ರಿ ಆಕ್ಷೇಪಣೆ ಇದೆಯಾ, ಈ ಬಗ್ಗೆ ಉತ್ತರಿಸಬೇಕು.
ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು, ನಾನು ಎನ್ನುವುದು ಅಹಂಕಾರ, ನಾವು ಎನ್ನುವುದು ಸಂಸ್ಕಾರ, ಇಷ್ಟು ಸರಳ ಸಾಮರಸ್ಯ ತತ್ತ್ವವೂ ಉಪಮುಖ್ಯಮಂತ್ರಿ ಆಗಿರುವ ವ್ಯಕ್ತಿಗೆ ತಿಳಿದಿಲ್ಲವೆಂದರೆ, ಇದಕ್ಕಿಂತ ತಿಳಿಗೇಡಿತನ ಇನ್ನೊಂದಿಲ್ಲ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.