ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಿಡಿ ನಿವೇಶನಗಳ ಹಂಚಿಕೆ ವಿಧಾನಸಭೆಯಲ್ಲಿಂದು ಭಾರೀ ಕೋಲಾಹಲಕ್ಕೆ ಕಾರಣವಾಯಿತು.
ಚರ್ಚೆಗೆ ಅವಕಾಶ ನೀಡಲಿಲ್ಲವೆಂದು ಬಿಜೆಪಿ ಸದಸ್ಯರು ಎರಡೂ ಸದನಗಳಲ್ಲಿ ಅಹೋರಾತ್ರಿ ಧರಣಿಗೆ ಮುಂದಾದರು.
ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಈ ಬಗ್ಗೆ ಭಾರೀ ವಾಕ್ ಸಮರ ನಡೆದು ಸಭಾಧ್ಯಕ್ಷರು ಎರಡು ಬಾರಿ ಸದನ ಮುಂದೂಡಿದರಾದರೂ ಈ ವಿಷಯನ್ನು ನಿಲುವಳಿ ಸೂಚನೆಯಡಿ ಚರ್ಚೆಗೆ ತೆಗೆದುಕೊಳ್ಳಲು ನಿರಾಕರಿಸಿ ಪ್ರತಿಪಕ್ಷಗಳ ಮನವಿಯನ್ನು ತಳ್ಳಿಹಾಕಿದರು.
ಬೆಳಗ್ಗೆ ಸದನ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಬಿಜೆಪಿ ಸದಸ್ಯರು, ಮುಡಾದಲ್ಲಿ ಕೋಟ್ಯಂತರ ರೂ. ಹಗರಣ ನಡೆದಿದೆ, ಇದರಲ್ಲಿ ಮುಖ್ಯಮಂತ್ರಿ ಅವರೂ ಶಾಮೀಲಾಗಿದ್ದಾರೆ.
ನಿಲುವಳಿ ಸೂಚನೆಯಡಿ ಚರ್ಚೆಗೆ ಪಟ್ಟು
ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಲು ಪ್ರಶ್ನೋತ್ತರ ಅವಧಿ ಬದಿಗಿಟ್ಟು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಪ್ರಶ್ನೋತ್ತರ ಅವಧಿ ಮುಗಿಯುತ್ತಿದ್ದಂತೆ ನಿಮ್ಮ ನಿಲುವಳಿ ಸೂಚನೆ ಕುರಿತು ತೀರ್ಮಾನ ಕೈಗೊಳ್ಳುತ್ತೇನೆ, ಮೊದಲು ಪ್ರಶ್ನೋತ್ತರ ತೆಗೆದುಕೊಳ್ಳೋಣ ಎಂದರು.
ಪ್ರಶ್ನೋತ್ತರ ಮತ್ತು ಶೂನ್ಯ ವೇಳೆ ಮುಗಿಯುತ್ತಿದ್ದಂತೆ ಪ್ರತಿಪಕ್ಷ ಸದಸ್ಯರು ಮುಡಾ ಹಗರಣ ಚರ್ಚೆಗೆ ಅವಕಾಶ ನೀಡುವಂತೆ ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.
ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಮುಡಾ ಹಗರಣ ಇಡೀ ದೇಶದಲ್ಲಿ ಭಾರೀ ಸದ್ದು ಮಾಡುತ್ತಿದೆ, ಈ ಹಗರಣದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನ ಸದಸ್ಯರೂ, ಮುಖಂಡರೂ ಇದ್ದಾರೆ ಎಂಬ ಮಾಹಿತಿ ಇದೆ, ಎಲ್ಲರ ಬಣ್ಣ ಬಯಲಾಗಲಿ, ಚರ್ಚೆಗೆ ಅವಕಾಶ ಕೊಡಿ, ಆರೋಪಿಗಳ ಬಣ್ಣ ಬಯಲಾದರೆ ಮುಂದೆ ಒಳ್ಳೆಯವರು ಬರುತ್ತಾರೆ ಎಂದರು.
ಬಿಜೆಪಿ ಅನಾಚಾರದ ಸಾಕ್ಷಿ
ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಸದನದಲ್ಲಿ ಕೆಲವು ದಾಖಲೆಗಳನ್ನು ಪ್ರದರ್ಶಿಸಿ, ಬಿಜೆಪಿಯವರು ಮಾಡಿರುವ ಅನಾಚಾರದ ಸಾಕ್ಷಿ ಇಲ್ಲಿದೆ, ಒಂದು ಬಂಡಿಯಷ್ಟು ಭ್ರಷ್ಟಾಚಾರ ಇದೆ, ಅವೆಲ್ಲವನ್ನೂ ನಾವು ಬಿಚ್ಚಿಡುತ್ತೇವೆ ಎಂದರು.
ಆಗ ಮತ್ತೆ ಯತ್ನಾಳ್ ಮಾತನಾಡಿ, ಯಾರೆಲ್ಲಾ ಲೂಟಿ ಮಾಡಿದ್ದಾರೆ ಎಂಬ ಸತ್ಯ ಹೊರಬರಲಿ, ಪಕ್ಷಾತೀತವಾಗಿ ಭ್ರಷ್ಟಾಚಾರ ಹೊರಗೆ ಬರಬೇಕು, ತಪ್ಪು ಮಾಡಿದವರನ್ನು ಮನೆಗೆ ಕಳುಹಿಸಿ, ಪ್ರಾಮಾಣಿಕರನ್ನು ಇಲ್ಲಿ ಉಳಿಸೋಣ ಎಂದರು.
ಮಾತು ಮುಂದುವರೆಸಿದ ಬೈರತಿ ಸುರೇಶ್, ಬಿಜೆಪಿಯವರು ನಕಲಿ ದಾಖಲೆ ಕೊಟ್ಟು ಎಕರೆಗಟ್ಟಲೆ ತೆಗೆದುಕೊಂಡಿದ್ದಾರೆ, ಅವೆಲ್ಲವನ್ನೂ ನಾವು ಬಿಚ್ಚಿಡುತ್ತೇವೆ ಎಂದು ಪ್ರತಿಪಕ್ಷ ಸದಸ್ಯರಿಗೆ ತಿರುಗೇಟು ನೀಡಿದರು.
ಭಾರೀ ವಾಕ್ ಸಮರ
ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಭಾರೀ ವಾಕ್ ಸಮರ ನಡೆದಾಗ ಸಭಾಧ್ಯಕ್ಷರು ಸದನ ಕಲಾಪವನ್ನು ಎರಡು ಗಂಟೆಗಳ ಕಾಲ ಮುಂದೂಡಿದರು.
ಸದನ ಮುಂದೂಡುವುದಕ್ಕೂ ಮುನ್ನ ಪ್ರತಿಪಕ್ಷ ಸದಸ್ಯರು ತಂದಿದ್ದ ನಿಲುವಳಿಸೂಚನೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಂಗ ತನಿಖೆ ಆರಂಭಗೊಂಡಿದೆ, ಈ ಕಾರಣದಿಂದ ಸದನದಲ್ಲಿ ಚರ್ಚೆಗೆ ಅವಕಾಶ ಸಾಧ್ಯವಿಲ್ಲ ಎಂದು ರೂಲಿಂಗ್ ನೀಡಿದರು.
ಬೋಜನ ವಿರಾಮದ ನಂತರ ಮತ್ತೆ ಸದನ ಸಮಾವೇಶಗೊಂಡಾಗ, ಪ್ರತಿಪಕ್ಷ ಸುನೀಲ್‌ಕುಮಾರ್ ಮಾತನಾಡಿ, ಮುಡಾ ಹಗರಣದ ಮೇಲಿನ ನಿಲುವಳಿಸೂಚನೆಗೆ ನೀವು ನೀಡಿರುವ ರೂಲಿಂಗ್ ಅನ್ನು ಮರುಪರಿಶೀಲಿಸಬೇಕೆಂದು ಮನವಿ ಮಾಡಿದರು.
ಮುಖ್ಯಮಂತ್ರಿ ಅವರೇ ಹಗರಣದಲ್ಲಿ ಆರೋಪಿಯಾಗಿದ್ದಾರೆ, ಕೋಟ್ಯಂತರ ರೂ. ಹಗರಣ ನಡೆದಿದೆ, ಚರ್ಚೆಗೆ ಅವಕಾಶ ಮಾಡಿಕೊಂಡುವಂತೆ ಮಾಡಿದ ಮನವಿಗೆ ಸಭಾಧ್ಯಕ್ಷರು, ಈಗ ಮಸೂದೆಗಳನ್ನು ತೆಗೆದುಕೊಳ್ಳೋಣ, ನಿಮ್ಮ ಕೋರಿಕೆಯನ್ನು ನಂತರ ಪರಿಶೀಲಿಸುತ್ತೇನೆ ಎಂದರು.
ರೂಲಿಂಗ್ ನಂತರ ಮತ್ತೆ ಅವಕಾಶ ಸಾಧ್ಯವಿಲ್ಲ
ತಕ್ಷಣವೇ ಮುಖ್ಯಮಂತ್ರಿ ಎದ್ದು ನಿಂತು, ಒಂದು ಬಾರಿ ರೂಲಿಂಗ್ ನೀಡಿದ ನಂತರ ಮತ್ತೆದೇ ವಿಷಯ ಪ್ರಸ್ತಾವಕ್ಕೆ ಅವಕಾಶ ಸಾಧ್ಯವಿಲ್ಲ ಎಂದು ಸಭಾಧ್ಯಕ್ಷರಿಗೆ ಹೇಳಿದರು.
ಸಭಾಧ್ಯಕ್ಷರು ಮಾತನಾಡಿ, ಎರಡು ವರ್ಷಗಳ ಹಿಂದಿನ ಹಗರಣವನ್ನು ಇಲ್ಲಿ ಪ್ರಸ್ತಾಪ ಮಾಡುತ್ತಿದ್ದೀರಿ, ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಯುತ್ತಿದೆ, ಅದರ ಮುಂದೆ ನಿಮ್ಮ ದಾಖಲೆಗಳನ್ನು ನೀಡಿ ಎಂದು ವಿಷಯಕ್ಕೆ ತೆರೆ ಎಳೆದು ಮಸೂದೆಗಳ ಮಂಡನೆಗೆ ಅವಕಾಶ ಮಾಡಿದರು.
ಇದನ್ನು ಬಲವಾಗಿ ವಿರೋಧಿಸಿದ ಪ್ರತಿಪಕ್ಷ ಸದಸ್ಯರು, ಸಭಾಧ್ಯಕ್ಷರ ವಿರುದ್ಧವೇ ತಿರುಗಿಬಿದ್ದರಲ್ಲದೆ, ಮುಡಾ ಹಗರಣ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಟ್ಟು ಭಾರೀ ಗದ್ದಲ ಎಬ್ಬಿಸಿ ಜೆಡಿಎಸ್ ಸದಸ್ಯರ ಜೊತೆಗೂಡಿ ಅಹೋರಾತ್ರಿ ಧರಣಿ ಆರಂಭಿಸಿದರು.
ಗದ್ದಲದ ನಡುವೆಯೇ ಮಸೂದೆಗಳಿಗೆ ಅಂಗೀಕಾರ ಪಡೆದ ಸಭಾಧ್ಯಕ್ಷರು ಕಲಾಪವನ್ನು ಮುಂದೂಡಿದರು.
