ಬೆಂಗಳೂರು:ಮಹರ್ಷಿ ವಾಲ್ಮೀಕಿ ನಿಗಮ ಹಗರಣದಲ್ಲಿ ಸಿಲುಕಿಹಾಕಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ಹೆದರಿಕೊಂಡಂತೆ ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟರ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ 187 ಕೋಟಿ ರೂ.ಗೂ ಹೆಚ್ಚು ಲೂಟಿ ಹೊಡೆಯಲಾಗಿದೆ, ಹೊರ ರಾಜ್ಯಕ್ಕೆ ಹಣ ವರ್ಗಾವಣೆ ಮಾಡಲಾಗಿದೆ ಎಂದರು.
ಹಣ ಲೂಟಿ ಮಾಡಿ ಹೆಂಡ ಖರೀದಿ ಮಾಡಿದ್ದು ಬಹಿರಂಗವಾಗಿದೆ, ಈ ಸಂಬಂಧ ಇ.ಡಿ. ಪ್ರಾಮಾಣಿಕ ತನಿಖೆ ಮಾಡುತ್ತಿದೆ, ಅದಕ್ಕೂ ಕಲ್ಲು ಹಾಕುವ ಪ್ರಯತ್ನ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಟೀಕಿಸಿದರು.
ತನಿಖೆ ತಕ್ಷಣ ನಡೆಯಬೇಕಿತ್ತು
ನೀವು ಪ್ರಾಮಾಣಿಕರೇ ಆಗಿದ್ದರೆ, ತಾವೇ ರಚಿಸಿದ ಎಸ್‌ಐಟಿ, ಕೂಡಲೇ ನಾಗೇಂದ್ರರಿಗೆ ನೋಟಿಸ್ ಕೊಟ್ಟು ತನಿಖೆಗೆ ಕರೆಸಬೇಕಿತ್ತಲ್ಲವೇ, ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರ ತನಿಖೆಯೂ ತಕ್ಷಣ ನಡೆಯಬೇಕಿತ್ತಲ್ಲವೇ ಎಂದು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣ ದುರುಪಯೋಗ ಮಾಡಿಕೊಂಡಿದೆ, ಈ ಕುರಿತು ಸಿಬಿಐ, ಇ.ಡಿ. ತನಿಖೆ ನಡೆಯುತ್ತಿರುವುದು ಸ್ವಾಗತಾರ್ಹ, ಮುಖ್ಯಮಂತ್ರಿ ಅವರು ಪ್ರಾಮಾಣಿಕರಾಗಿದ್ದರೆ ಇ.ಡಿ., ಸಿಬಿಐ ತನಿಖೆಗೆ ಸಹಕರಿಸಬೇಕು.
ಮುಖ್ಯಮಂತ್ರಿ ನೇತೃತ್ವದಲ್ಲಿ ನಿನ್ನೆ ಜಾರಿ ನಿರ್ದೇಶನಾಲಯ (ಇ.ಡಿ.) ವಿರುದ್ಧ ಘೋಷಣೆ ಕೂಗಿ ಹೋರಾಟ ಮಾಡಿದ್ದಾರೆ, ರಾಜ್ಯ ಸರ್ಕಾರ, ಮುಖ್ಯಮಂತ್ರಿ ಹಾಗೂ ಸಚಿವರ ಇಂತಹ ನಡವಳಿಕೆ ಗಮನಿಸಿದರೆ ನಿಜಕ್ಕೂ ಅಯ್ಯೋ ಎನಿಸುತ್ತದೆ ಎಂದರು.
ದೊಡ್ಡ ದೊಡ್ಡ ತಲೆಗಳು ಉರುಳಲಿವೆ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಕೇವಲ ಮಾಜಿ ಸಚಿವ ಬಿ.ನಾಗೇಂದ್ರ ಅಷ್ಟೇ ಅಲ್ಲ, ದೊಡ್ಡ ದೊಡ್ಡ ತಲೆಗಳೂ ಉರುಳಲಿವೆ, ಮುಖ್ಯಮಂತ್ರಿ ಅವರು ಡೆತ್‌ನೋಟ್ ಓದುವಾಗ ತಮಗೆ ಬೇಕಾದ ವಿಷಯಗಳನ್ನಷ್ಟೇ ಓದಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಒಂದು ಕಡೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮತ್ತೊಂದೆಡೆ ಮುಡಾ ಹಗರಣ, ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಹಾ ಸಿಲುಕಿದ್ದಾರೆ, ಇವರೆಡೂ ಹಗರಣಗಳ ಬಗ್ಗೆ ಜನತೆಗೆ ತಿಳಿಸಿದ್ದೇವೆ, ವಿರೋಧ ಪಕ್ಷವಾಗಿ ನಿರಂತರ ಹೋರಾಟ ಹಮ್ಮಿಕೊಂಡಿದ್ದೇವೆ ಎಂದರು.
