ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಅವರ ಪತ್ನಿ ಮತ್ತು ಕುಟುಂಬ ವರ್ಗದವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಉಪಮುಖ್ಯಮಂತ್ರಿ ನಿವಾಸಕ್ಕೆ ಇಂದು ಬೆಳಗ್ಗೆ ದರ್ಶನ್ ಕುಟುಂಬ ಹಾಗೂ ಚಿತ್ರರಂಗದ ಕೆಲವರು ಭೇಟಿ ನೀಡಿ, ಕಾನೂನಿನ ಚೌಕಟ್ಟಿನಲ್ಲಿ ಸಹಾಯ ಮಾಡಿ ಎಂದು ಪತ್ನಿ ವಿಜಯಲಕ್ಷ್ಮಿ ಕೋರಿದ್ದಾರೆ.
ಶಿವಕುಮಾರ್ ಭೇಟಿ ನಂತರ ವಿಜಯಲಕ್ಷ್ಮಿ ಅವರು ಮಾಧ್ಯಮದ ಮುಂದೆ ತಮ್ಮ ಕೋರಿಕೆಯನ್ನು ತಿಳಿಸಿದ್ದಾರೆ.
ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ
ಆದರೆ, ನಂತರ ಶಿವಕುಮಾರ್ ಅವರು, ದರ್ಶನ್ ಪತ್ನಿ ಹೇಳಿಕೆಯನ್ನು ನಿರಾಕರಿಸಿ, ಈ ವಿಷಯದಲ್ಲಿ ನಾನಾಗಲೀ, ಸರ್ಕಾರವಾಗಲೀ ಹಸ್ತಕ್ಷೇಪ ಮಾಡುವುದಿಲ್ಲ, ಪೊಲೀಸ್ ತನಿಖೆಯಲ್ಲಿ ನಾವು ಹಸ್ತಕ್ಷೇಪ ಮಾಡಲಾಗದು.
ಪೊಲೀಸ್‌ನವರು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿದ್ದು, ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ, ರಾಷ್ಟ್ರದ ಕಾನೂನು ಚೌಕಟ್ಟಿನಲ್ಲೇ ಎಲ್ಲವೂ ನಡೆಯಬೇಕು, ನಾವು ಇದರಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ ಎಂದರು.
ದರ್ಶನ್ ಮಗನಿಗೆ ಮತ್ತೆ ನಮ್ಮ ಶಾಲೆಯಲ್ಲಿ ಪ್ರವೇಶ ಕಲ್ಪಿಸುವ ಸಂಬಂಧ ಅವರ ಮನವಿಗೆ ಪ್ರಾಂಶುಪಾಲರನ್ನು ಭೇಟಿ ಮಾಡಲು ಸಲಹೆ ನೀಡಿದ್ದು, ಈ ವಿಷಯದಲ್ಲಿ ನಮ್ಮ ಸಹಕಾರ ಎಷ್ಟು ಸಾಧ್ಯವೋ ಅದನ್ನು ಮಾಡುತ್ತೇನೆ.
ಜನರು ಅಹವಾಲು ಹೇಳುತ್ತಾರೆ
ನಮ್ಮ ಮನೆಗೆ ದಿನನಿತ್ಯ ಸಾವಿರಾರು ಜನರು ಬರುತ್ತಾರೆ, ಅಹವಾಲು ಹೇಳುತ್ತಾರೆ, ಅಂತಹವರನ್ನು ನಾನು ಬರಬೇಡಿ ಎಂದು ಹೊರಕಳುಹಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ನಿನ್ನೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಸಂದರ್ಭದಲ್ಲಿ ವಿಜಯಲಕ್ಷ್ಮಿ ಅವರು ನನ್ನನ್ನು ಭೇಟಿ ಮಾಡಲು ಬಂದಿದ್ದರು, ಇಲ್ಲೆಲ್ಲಾ ಭೇಟಿ ಸಾಧ್ಯವಿಲ್ಲ, ಮನೆಗೆ ಬನ್ನಿ ಎಂದಿದ್ದು, ಅವರು ಇಂದು ಬಂದಿದ್ದರು ಎಂದರು.
ರಾಮನಗರದಲ್ಲಿ ನಡೆದ ಸಭೆಯಲ್ಲಿ ಕೆಲವರು ದರ್ಶನ್ ಅಭಿಮಾನಿಗಳು ಜಾಮೀನು ಪಡೆಯಲು ಸಮಯ ನಿಗದಿಯಾಗುತ್ತಿಲ್ಲ ಎಂಬುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಕೂಗಾಡಿ ನನ್ನ ಭಾಷಣಕ್ಕೂ ಅಡ್ಡಿ ಮಾಡುತ್ತಿದ್ದರು.
ತಡಿರೋ ನ್ಯಾಯ ಕೊಡಿಸೋಣ ಎಂದು ಹೇಳಿ ಅವರನ್ನು ಸುಮ್ಮನಾಗಿಸಿದೆ, ಏನು ಮಾಡುವುದು ಅವರು ನಮ್ಮ ಕ್ಷೇತ್ರದವರು, ಆದರೆ ನಾನು ಪೊಲೀಸ್ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.