ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಿಡಿ ನಿವೇಶನಗಳ ಹಂಚಿಕೆ ಹಗರಣ ವಿಧಾನಮಂಡಲದ ಕಲಾಪವನ್ನೇ ನುಂಗಿ ಹಾಕಿದ್ದಲ್ಲದೆ, ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಕಾರಣವಾಯಿತು.
ವೇಳಾಪಟ್ಟಿಯಂತೆ ಕಲಾಪ ಶುಕ್ರವಾರಕ್ಕೆ (ಜುಲೈ 26) ಅಂತ್ಯಗೊಳ್ಳಬೇಕಿತ್ತು, ಆದರೆ, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ಕೋರಿ ಮಾಡಿದ ಒತ್ತಡಕ್ಕೆ ಸರ್ಕಾರ ಮಣಿಯದಿದ್ದಾಗ, ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣಿಯನ್ನು ಇಂದೂ ಮುಂದುವರೆಸಿದರು.
ಪ್ರತಿಪಕ್ಷಗಳ ಗದ್ದಲ, ಧರಣಿ
ಪ್ರತಿಪಕ್ಷಗಳ ಗದ್ದಲ, ಧರಣಿ ನಡುವೆ ಕೇಂದ್ರ ಸರ್ಕಾರದ ವಿರುದ್ಧ ಮೂರು ನಿರ್ಣಯಗಳೂ ಸೇರಿದಂತೆ ಕೆಲವು ಮಸೂದೆಗಳನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು.
ಮಸೂದೆಗಳು ಮಂಡನೆಯಾಗುತ್ತಿದ್ದಂತೆ ವಿಧಾನಮಂಡಲದ ಉಭಯ ಸದನಗಳ ಸಭಾಧ್ಯಕ್ಷ ಮತ್ತು ಸಭಾಪತಿ ಕಲಾಪವನ್ನು ಮಧ್ಯಾನ್ಹಕ್ಕೆ ಮುಂದೂಡಿದರು.
ನಿಲುವಿನಿಂದ ಹಿಂದೆ ಸರಿಯದ ಸರ್ಕಾರ
ಎರಡನೇ ಬಾರಿಗೆ ಸದನ ಸೇರಿದಾಗಲೂ ಪ್ರತಿಪಕ್ಷಗಳು ತಮ್ಮ ಪಟ್ಟು ಬಿಡಲಿಲ್ಲ, ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯಲಿಲ್ಲ.
ಉಭಯ ಸದನಗಳಲ್ಲಿ ಪೀಠಾಸೀನಾಧಿಕಾರಿಗಳ ಮನವಿಗೆ ಪ್ರತಿಪಕ್ಷ ಸದಸ್ಯರು ಸ್ಪಂದಿಸದೆ ಧರಣಿ ಮುಂದುವರೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು.
ಇದರ ನಡುವೆ ವಿಧಾನಸಭೆಯಲ್ಲಿ ಸಭಾಧ್ಯಕ್ಷರು, ವಿಧಾನ ಪರಿಷತ್‌ನಲ್ಲಿ ಮಸೂದೆಗಳ ಅಂಗೀಕಾರ ಹಾಗೂ ಕಲಾಪ ಟಿಪ್ಪಣಿ ಪ್ರಕಟಿಸಿ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.