ಬೆಂಗಳೂರು:ದೇಶಾದ್ಯಂತ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಕಲ್ಪಿಸುವ ನೀಟ್ ಪರೀಕ್ಷಾ ವ್ಯವಸ್ಥೆ ರದ್ದುಗೊಳಿಸಿ, ಕರ್ನಾಟಕದಲ್ಲಿ ಸಿಇಟಿ ಮೂಲಕ ಪ್ರವೇಶಾತಿಗೆ ರಿಯಾಯಿತಿ ನೀಡುವ ನಿರ್ಣಯವನ್ನು ವಿಧಾನಮಂಡಲದ ಉಭಯ ಸದನಗಳಲ್ಲಿಂದು ಕೈಗೊಳ್ಳಲಾಯಿತು.
ಪ್ರತಿಪಕ್ಷಗಳ ಧರಣಿ, ಗದ್ದಲಗಳ ನಡುವೆಯೇ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ನಿರ್ಣಯ ಮಂಡಿಸಿದರು.
ನೀಟ್ ಪರೀಕ್ಷಾ ವ್ಯವಸ್ಥೆಯು ಗ್ರಾಮೀಣ ಬಡ ಮಕ್ಕಳ ವೈದ್ಯಕೀಯ ಶಿಕ್ಷಣಾವಕಾಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಹಾಗೂ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ನಿರರ್ಥಕಗೊಳಿಸುವುದು ಮಾತ್ರವಲ್ಲದೆ, ರಾಜ್ಯ ಸರ್ಕಾರದ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಸರ್ಕಾರದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ.
ಸಿಇಟಿ ಅಂಕ ಆಧರಿಸಿ ಪ್ರವೇಶ
ಇಂತಹ ಪರೀಕ್ಷಾ ವ್ಯವಸ್ಥೆಯಿಂದ ಕರ್ನಾಟಕಕ್ಕೆ ವಿನಾಯಿತಿ ನೀಡಬೇಕೆಂದು ಹಾಗೂ ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ ಅಂಕಗಳನ್ನು ಆಧರಿಸಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಾತಿ ನೀಡಬೇಕು.
ನೀಟ್ ಪರೀಕ್ಷೆಗಳಲ್ಲಿ ಆಗುತ್ತಿರುವ ಪುನರಾವರ್ತಿತ ಅಕ್ರಮಗಳನ್ನು ಪರಿಗಣಿಸಿ, ರಾಷ್ಟ್ರೀಯ ಮಟ್ಟದಲ್ಲಿ ಈ ವ್ಯವಸ್ಥೆ ರದ್ದುಪಡಿಸುವ ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗ ಅಧಿನಿಯಮ 2019ಕ್ಕೆ ತಿದ್ದುಪಡಿ ಮಾಡುವಂತೆ ನಿರ್ಣಯದ ಮೂಲಕ ಕೇಂದ್ರ ಸರ್ಕಾರವನ್ನು ಸದನಗಳು ಒತ್ತಾಯಿಸಿವೆ.
ನಿರ್ಣಯ ಕೈಗೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕೇಂದ್ರೀಕೃತ ಆಡಳಿತ ನಡೆಸುವ ಉದ್ದೇಶದಿಂದ ನೀಟ್ ವ್ಯವಸ್ಥೆ ಜಾರಿಗೆ ತಂದಿದೆ ಎಂದು ದೂರಿದರು.
ದಕ್ಷಿಣ ಭಾರತ ರಾಜ್ಯಗಳ ವಿರೋಧ
ಈ ಕಾಯ್ದೆಗೆ ದಕ್ಷಿಣ ಭಾರತದ ಬಹುತೇಕ ರಾಜ್ಯಗಳ ವಿರೋಧವಿದೆ, ಈಗಾಗಲೇ ತಮಿಳುನಾಡು ಸರ್ಕಾರವೂ ಕೂಡ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಿದೆ.
ನೀಟ್ ಪರೀಕ್ಷೆ ಪಾರದರ್ಶಕವಾಗಿಲ್ಲ, ಹಲವು ಭ್ರಚ್ಟಾಚಾರಕ್ಕೆ ಎಡೆ ಮಾಡಿಕೊಟ್ಟಿದೆ, ಇಂತಹ ವ್ಯವಸ್ಥೆಯಿಂದ ನಮ್ಮ ವಿದ್ಯಾರ್ಥಿಗಳಿಗೆ ನ್ಯಾಯ ದೊರಕುವುದಿಲ್ಲ.
ಕರ್ನಾಟಕದ ಸಿಇಟಿ ಪರೀಕ್ಷೆ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದ್ದು, ಇದನ್ನು ಇತರ ರಾಜ್ಯಗಳು ಅನುಕರಣೆ ಮಾಡಿವೆ, ಆದ್ದರಿಂದ ಎನ್‌ಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಆಯಾ ರಾಜ್ಯಗಳೇ ವೈದ್ಯಕೀಯ ಸೀಟುಗಳನ್ನು ಭರ್ತಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ನಿರ್ಣಯ ಒತ್ತಾಯಿಸಿದೆ.