ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಿಡಿ ನಿವೇಶನಗಳ ಹಂಚಿಕೆ ಹಗರಣದ ಚರ್ಚೆಗೆ ಸರ್ಕಾರ ಅವಕಾಶ ನೀಡಲಿಲ್ಲವೆಂದು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸದನದಿಂದ ಬೀದಿಗಿಳಿಯಲಿದ್ದಾರೆ.
ವಿಧಾನಮಂಡಲದಲ್ಲಿ ಚರ್ಚೆಗೆ ಅವಕಾಶ ನೀಡಲಿಲ್ಲವೆಂದು ಅಹೋರಾತ್ರಿ ಧರಣಿ ನಡೆಸಿದ ಉಭಯ ಪಕ್ಷಗಳ ಸದಸ್ಯರು ಸರ್ಕಾರದ ನಿಲುವು ವಿರೋಧಿಸಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಮೈಸೂರಿಗೆ ಪಾದಯಾತ್ರೆ ಕೈಗೊಳ್ಳಲಿದ್ದಾರೆ.
ಹಳ್ಳಿ, ಪಟ್ಟಣಗಳಲ್ಲಿ ಸಭೆ
ಬೆಂಗಳೂರಿನಿಂದ ಮೈಸೂರಿನವರೆಗೂ ಪಾದಯಾತ್ರೆ ನಡೆಸುವುದಲ್ಲದೆ, ಎರಡು ನಗರಗಳ ನಡುವಿನ ಹಳ್ಳಿಗಳು ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಭೆಗಳನ್ನು ನಡೆಸಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳನ್ನು ಜನರ ಮುಂದಿಡುವ ತೀರ್ಮಾನ ಕೈಗೊಂಡಿದ್ದಾರೆ.
ಪಾದಯಾತ್ರೆ ಮೈಸೂರು ತಲುಪಿದ ನಂತರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮುತ್ತಿಗೆ ಕಾರ್ಯ ಹಮ್ಮಿಕೊಳ್ಳುವ ನಿರ್ಧಾರ ಮಾಡಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಉಪನಾಯಕಿ ಶಾರದಾ ಪೂರ‍್ಯಾನಾಯ್ಕ ಇವರ ಅಧ್ಯಕ್ಷತೆಯಲ್ಲಿ ಉಭಯ ಪಕ್ಷದ ಶಾಸಕರು ಸಭೆ ಸೇರಿ ಮುಡಾ ಹಗರಣವನ್ನು ತಾರಕಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದಾರೆ.
ಪಾದಯಾತ್ರೆ ನಾಯಕತ್ವ
ಮೈಸೂರಿಗೆ ಪಾದಯಾತ್ರೆ ಎಂದಿನಿಂದ, ಯಾರ ನಾಯಕತ್ವದಲ್ಲಿ ನಡೆಯಬೇಕೆಂಬ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆ ಬರುವ ಭಾನುವಾರ ಸಮಾಲೋಚಿಸಿ, ದಿನಾಂಕ ನಿರ್ಧರಿಸಲಾಗುವುದು.
ಇಂದಿನ ಸಭೆಯಲ್ಲಿ ಜುಲೈ 29 (ಸೋಮವಾರ) ರಿಂದಲೇ ಪಾದಯಾತ್ರೆ ಪ್ರಾರಂಭಿಸಲು ತೀರ್ಮಾನಿಸಲಾಗಿದೆಯಾದರೂ ಅಂತಿಮ ನಿರ್ಧಾರ ಭಾನುವಾರ ಹೊರಬೀಳಲಿದೆ.
ಬೆಂಗಳೂರು-ಮೈಸೂರು ನಡುವಿನ ಅಂತರವನ್ನು ಆರೇಳು ದಿನದಲ್ಲಿ ಕ್ರಮಿಸುವ ಬಗ್ಗೆ ಚರ್ಚೆಯಾಗಿದೆ, ಈ ಪಾದಯಾತ್ರೆಯಲ್ಲಿ ಯಾವ ಶಾಸಕರು, ಯಾವ ಭಾಗದಲ್ಲಿ ಸೇರ್ಪಡೆಗೊಳ್ಳಬೇಕೆಂಬ ಕುರಿತು ಉಭಯ ಪಕ್ಷಗಳ ನಾಯಕರು ಪಟ್ಟಿ ಸಿದ್ಧಪಡಿಸಲಿದ್ದಾರೆ.
ರಾಮನಗರ, ಮಂಡ್ಯದಲ್ಲಿ ಬೃಹತ್ ಸಮಾವೇಶ
ಪಾದಯಾತ್ರೆಯುದ್ದಕ್ಕೂ ಬರುವ ಪಟ್ಟಣಗಳಲ್ಲಿ ಕಿರುಸಭೆಗಳನ್ನು, ರಾಮನಗರ ಮತ್ತು ಮಂಡ್ಯದಲ್ಲಿ ಬೃಹತ್ ಸಮಾವೇಶ ನಡೆಸುವ ಕುರಿತು ಪ್ರಾಥಮಿಕ ಚರ್ಚೆಯಾಗಿದೆ.
ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದಾಗ ಗಣಿ ಧಣಿಗಳ ವಿರುದ್ಧ ತೊಡೆ ತಟ್ಟಿ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಿದ್ದರು.
ಬಿಜೆಪಿ ಆಡಳಿತ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮೇಕೆದಾಟು ಯೋಜನೆಗೆ ಆಗ್ರಹಿಸಿ ಕನಕಪುರದ ಸಂಗಮದಿಂದ ಬೆಂಗಳೂರಿನವರೆಗೆ ಎರಡು ಹಂತಗಳಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದರು.
ಬಳ್ಳಾರಿ ಹಾಗೂ ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್‌ಗೆ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ತಂದುಕೊಟ್ಟಿತು.
ಸದ್ಯಕ್ಕೆ ಯಾವುದೇ ಸಾರ್ವತ್ರಿಕ ಚುನಾವಣೆ ಇಲ್ಲ, ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭ್ರಷ್ಟಾಚಾರ ಬಯಲಿಗೆಳೆಯಲು ಬಿಜೆಪಿ-ಜೆಡಿಎಸ್ ಪಾದಯಾತ್ರೆ ಹಮ್ಮಿಕೊಂಡಿದೆ.