ಬೆಂಗಳೂರು:ಕುಟುಂಬದಲ್ಲಿ ಅನ್ಯೋನ್ಯರಾಗಿದ್ದವರನ್ನು ಪರಸ್ಪರ ಎತ್ತಿಕಟ್ಟಿ ಮನೆ ಮುರುಕ ರಾಜಕಾರಣ ಮಾಡುತ್ತಿದ್ದಾರೆಂದು ಬಿಜೆಪಿ ಮತ್ತು ಜೆಡಿಎಸ್ ಶಾಸಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಿಡಿ ನಿವೇಶನಗಳ ಹಂಚಿಕೆಯಲ್ಲಿ ನನ್ನದಾಗಲಿ, ನಮ್ಮ ಪತ್ನಿಯದ್ದಾಗಲೀ, ನನ್ನ ಭಾವಮೈದುನನ ಪಾತ್ರ ಇಲ್ಲವೇ ಇಲ್ಲ, ಕೇವಲ ಪತ್ರಿಕಾ ತುಣುಕುಗಳನ್ನು ಇಟ್ಟುಕೊಂಡು ನನ್ನ ಮುಖಕ್ಕೆ ಮಸಿ ಬಳಿಯಲು ಹೊರಟಿದ್ದಾರೆಂದು ದೂರಿದರು.
ಆರೋಪಗಳಲ್ಲಿ ಹುರುಳಿಲ್ಲ
ವಿಧಾನಮಂಡಲದ ಅಧಿವೇಶನ ಮುಗಿಯುತ್ತಿದ್ದಂತೆ ತುರ್ತು ಪತ್ರಿಕಾಗೋಷ್ಠಿ ಕರೆದ ಮುಖ್ಯಮಂತ್ರಿ ಅವರು, ತಮ್ಮ ಕುಟುಂಬದ ಮೇಲಿನ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ದಾಖಲೆಗಳನ್ನು ಮುಂದಿಟ್ಟರು.
ಕುಟುಂಬದವರನ್ನೇ ಎತ್ತಿಕಟ್ಟಿ ಕೊಳಕು ಮನೆ ಮುರುಕ ರಾಜಕಾರಣಕ್ಕೆ ಇಳಿದಿದ್ದಾರೆ, ನಮ್ಮ ಭಾವಮೈದುನ, ನಿಂಗಪ್ಪ ಅವರಿಂದ ಖರೀದಿ ಮಾಡಿರುವ ಜಮೀನು ಪಿಟಿಸಿಎಲ್ ಕಾಯ್ದೆಯಡಿ ಬರುವುದೇ ಇಲ್ಲ ಎಂದು 1935ನೇ ಇಸವಿಯ ದಾಖಲೆಗಳನ್ನು ಬಹಿರಂಗ ಪಡಿಸಿದರು.
ನನ್ನ ರಾಜಕೀಯ ಜೀವನ ತೆರೆದ ಪುಸ್ತಕ, ಪ್ರತಿ ಪುಟಗಳು ಪಾರದರ್ಶಕ ಮತ್ತು ಪ್ರಾಮಾಣಿಕ, ಸಣ್ಣದೊಂದು ಕಪ್ಪು ಚುಕ್ಕೆ ಇಲ್ಲದಂತೆ ರಾಜಕೀಯದ ಪಾವಿತ್ರ್ಯತೆ ಕಾಪಾಡಿಕೊಂಡಿದ್ದೇನೆ.
ಕಾಂಗ್ರೆಸ್ ದೊಡ್ಡ ಪ್ರಮಾಣದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದನ್ನು ಸಹಿಸಲಾಗದೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ನಮಗೆ ಬಂದಿರುವ ಮತ ಸಂಖ್ಯೆ ಪ್ರಮಾಣದಿಂದ ವಿಚಲಿತಗೊಂಡು ಇಂತಹ ದುರುದ್ದೇಶದ ಆರೋಪ ಮಾಡುತ್ತಿದ್ದಾರೆ.
ಅಧಿವೇಶನ ಬಳಕೆ
ವಿಧಾನಮಂಡಲದ ಅಧಿವೇಶನವನ್ನು ಮುಡಾ ಮತ್ತು ವಾಲ್ಮೀಕಿ ಹಗರಣಗಳನ್ನು ಮುಂದಿಟ್ಟುಕೊಂಡು ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಇವರು ಬಳಸಿಕೊಂಡರೇ ಹೊರತು, ಜನಪರವಾದ ಉದ್ದೇಶಗಳಿಗೆ ಸ್ಪಂದಿಸಲೇ ಇಲ್ಲ ಎಂದು ದೂರಿದರು.
ಜವರನ ಮಗ ನಿಂಗ ಎನ್ನುವವರು ಮೈಸೂರು ತಾಲ್ಲೂಕು ಕಛೇರಿಗೆ ಜಮೀನು ನೀಡುವಂತೆ 1935ರಲ್ಲಿ ಅರ್ಜಿ ಸಲ್ಲಿಸಿದ್ದಾರೆ, ಆಗಿನ ಕೆಳಹಂತದ ಅಧಿಕಾರಿಗಳು, ನಿಂಗ ಅವರು ಕೇಳಿರುವ ಜಮೀನುಗಳನ್ನು ಹರಾಜಿನ ಮೂಲಕ ವಿಲೇವಾರಿ ಪಡಿಸಬೇಕೆಂದು ವರದಿ ಸಲ್ಲಿಸಿದ್ದಾರೆ, ಅದರ ಪ್ರಕಾರ ಹರಾಜು ನಡೆಸಲು ಕ್ರಮವಹಿಸಿದ್ದಾರೆ.
ಅದೇ ವರ್ಷ ಸೆಪ್ಟೆಂಬರ್‌ನಲ್ಲಿ ಹರಾಜು ನಡೆಸಿದ ಮೇಲೆ ಕೆಸರೆ ಗ್ರಾಮದ ಸರ್ವೆ ನಂ. 464 ರ 3.16 ಎಕರೆ ಜಮೀನನ್ನು ಒಂದು ರೂಪಾಯಿಗೆ ನಿಂಗ ಬಿನ್ ಜವರ ಬಿಡ್ ಮಾಡಿದ್ದು, ಇದರ ಮೇಲೆ ಯಾರೂ ಸವಾಲು ಮಾಡಲಿಲ್ಲವಾಗಿ ಹರಾಜು ಅಖೈರು ಮಾಡಲಾಯ್ತು ಎಂದು ದಾಖಲಿಸಲಾಗಿದೆ.
ಸರ್ಕಾರದ ಹಿತಾಸಕ್ತಿ ಇಲ್ಲ
ಜಮೀನುಗಳನ್ನು ಹರಾಜಿನ ಮೂಲಕ ಪಡೆದಿರುವುದರಿಂದ ಇದು ಸ್ವಯಾರ್ಜಿತ ಜಮೀನಾಗುತ್ತದೆಯೆ ಹೊರತು ಈ ಜಮೀನುಗಳ ಮೇಲೆ ಸರ್ಕಾರದ ಯಾವುದೇ ಹಿತಾಸಕ್ತಿ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಜಮೀನುಗಳು ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ, ಇದನ್ನು ಕಾಯ್ದೆ ಸ್ಪಷ್ಟವಾಗಿ ಹೇಳುತ್ತದೆ, ಇದಕ್ಕೆ ಪೂರಕವಾಗಿ ಅನೇಕ ತೀರ್ಪುಗಳೂ ಇವೆ ಎಂದು ದಾಖಲೆಗಳನ್ನು ಪತ್ರಕರ್ತರ ಮುಂದಿಟ್ಟರು.
ಪಿಟಿಸಿಎಲ್ ಜಮೀನುಗಳು ಅಲ್ಲದ ಕಾರಣ, ಸರ್ಕಾರದ ಅನುಮತಿ ಅಗತ್ಯವೂ ಇಲ್ಲ ಎಂಬುದು ಕಾನೂನಿನ ಜ್ಞಾನವಿರುವ ಪ್ರತಿಯೊಬ್ಬರಿಗೂ ತಿಳಿದಿರುತ್ತದೆ, ಆದರೆ, ಬಿಜೆಪಿ, ಜೆಡಿಎಸ್‌ನವರು ಮಾತ್ರ ಇದನ್ನು ರಾಜಕಾರಣಕ್ಕೆ ಬಳಸುತ್ತಿದ್ದಾರೆ.
1993ರಲ್ಲಿ ಒಂದು ವಂಶವೃಕ್ಷ ಮಾಡಿಸಲಾಗಿದೆ, ಅದರ ಪ್ರಕಾರ, ನಿಂಗ ಬಿನ್ ಜವರ ಇವರಿಗೆ ಮೂರು ಜನ ಮಕ್ಕಳು, ಮೊದಲನೆ ಮಲ್ಲಯ್ಯ, ಎರಡನೆ ಮೈಲಾರಯ್ಯ ಮತ್ತು ಮೂರನೆ ಜೆ. ದೇವರಾಜು.
ವಾರಸುದಾರರನ್ನು ತೋರಿಸಿಲ್ಲ
ವಂಶವೃಕ್ಷದ ಪ್ರಕಾರ ಮಲ್ಲಯ್ಯ ಎನ್ನುವವರಿಗೆ ವಾರಸುದಾರರನ್ನು ತೋರಿಸಿಲ್ಲ, ಎರಡನೆ ಮೈಲಾರಯ್ಯ ಇವರಿಗೆ ಮಂಜುನಾಥಸ್ವಾಮಿ ಎಂ. ಎನ್ನುವವರಿದ್ದಾರೆ, ಆಗ ಅವರಿಗೆ 29 ವರ್ಷ ಎಂದು ನಮೂದಿಸಲಾಗಿದೆ.
3ನೆಯವರು ದೇವರಾಜು ಎನ್ನುವವರು, ಈ ದೇವರಾಜು ಎನ್ನುವವರೆ ಮಲ್ಲಿಕಾರ್ಜುನಸ್ವಾಮಿಯವರಿಗೆ ಜಮೀನು ಮಾರಾಟ ಮಾಡಿರುವುದು, ಈ ವಂಶವೃಕ್ಷದಲ್ಲಿ ಮಲ್ಲಯ್ಯ, ದೇವರಾಜು, ಮೈಲಾರಯ್ಯನವರ ಪತ್ನಿ ಪುಟ್ಟಗೌರಮ್ಮ, ಎಂ. ಮಂಜುನಾಥಸ್ವಾಮಿ ಇವರುಗಳು ಸಹಿ ಮಾಡಿದ್ದಾರೆ.
ಹಾಗಾಗಿ ವಾರಸುದಾರರ ಒಪ್ಪಿಗೆ ಇಲ್ಲದೆ ಖರೀದಿ ನಡೆದಿದೆ ಎಂಬ ಬಿ.ಜೆ.ಪಿ. ಯವರ ಆರೋಪ ಸುಳ್ಳು, ಈ ಎಲ್ಲ ವ್ಯವಹಾರಗಳು 2010ಕ್ಕಿಂತ ಮುಂಚೆ ನಡೆದಿವೆ, ಇವು ನನಗೆ ಸಂಬಧಪಟ್ಟಿದ್ದಲ್ಲ, ಆದರೂ ಬಿಜೆಪಿಯವರು ಸಣ್ಣ ವಿಚಾರವನ್ನು ರಾಜಕಾರಣಕ್ಕೆ ಬಳಸುತ್ತಿರುವ ಕಾರಣ ಇವುಗಳನ್ನು ಪ್ರಸ್ತಾಪಿಸಬೇಕಾಗಿದೆ.
ಡಿ-ನೋಟಿಫಿಕೇಶನ್ ನಡೆದಿದೆ
ಸದರಿ ಜಮೀನುಗಳನ್ನು ಡಿ-ನೋಟಿಫಿಕೇಶನ್ ಮಾಡಲು ಮುಡಾದಿಂದ ಪ್ರಸ್ತಾವನೆ ಬಂದಿರಲಿಲ್ಲ, ಅರ್ಜಿದಾರರು ಅರ್ಜಿಯನ್ನೂ ಕೊಟ್ಟಿರಲಿಲ್ಲ, ಆದರೂ ಡಿ-ನೋಟಿಫಿಕೇಶನ್ ನಡೆದಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ.
ಸದರಿ ಜಮೀನುಗಳನ್ನು ಭೂಸ್ವಾಧೀನ ಮಾಡಲು ಸೆಪ್ಟೆಂಬರ್ 1992ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದಾರೆ. ಆದರೆ, ಅದು ಬಹಳ ವರ್ಷಗಳಾದರೂ ಇತ್ಯರ್ಥವಾಗಿರುವುದು ಕಂಡುಬರುವುದಿಲ್ಲ.
ಆಗ, ಜಿ.ದೇವರಾಜು, ಆಗಸ್ಟ್, 1996ರಂದು ತಮ್ಮ ಜಮೀನುಗಳನ್ನು ಭೂಸ್ವಾಧೀನದಿಂದ ಕೈಬಿಡುವಂತೆ ಅರ್ಜಿ ಬರೆದಿದ್ದಾರೆ, ನಂತರ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿ ಮುಡಾದಲ್ಲಿ ಜುಲೈ, 1997ರಂದು ಈ ಜಾಗ ಭೂಸ್ವಾಧೀನದಿಂದ ಕೈಬಿಡಲು ನಿರ್ಣಯ ಪಾಸ್ ಮಾಡಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 1984ರಿಂದ ಒಟ್ಟು 13 ಬಡಾವಣೆಗಳಲ್ಲಿ 235-30 ಎಕರೆ ಭೂಮಿಯನ್ನು ಭೂ ಸ್ವಾಧೀನದಿಂದ ಕೈ ಬಿಡಲಾಗಿದೆ.
ಪೊಸೆಷನ್ ತೆಗೆದುಕೊಂಡಿಲ್ಲ
ಭೂಸ್ವಾಧೀನದಿಂದ ಭೂಮಿಗಳನ್ನು ಕೈಬಿಟ್ಟಾಗ ಈ ಜಮೀನುಗಳನ್ನು ಮುಡಾ ಪೊಸೆಷನ್ ತೆಗೆದುಕೊಳ್ಳದಿರುವುದು ಕಂಡುಬರುತ್ತದೆ.
ಜುಲೈ, 2005ರಲ್ಲಿ ಭೂಪರಿವರ್ತನೆಯಾಗಿವೆ, ಕೃಷಿ ಉದ್ದೇಶದಿಂದ ವಸತಿ ಉದ್ದೇಶಕ್ಕೆ ಭೂಪರಿವರ್ತನೆಯಾಗಿವೆ.
ನನ್ನ ಪತ್ನಿ ನನ್ನ ಜಾಗವನ್ನು ಮುಡಾ ಬಳಸಿಕೊಂಡಿದೆ, ಅದಕ್ಕೆ ಪರ್ಯಾಯ ಜಾಗ ಕೊಡಿ ಎಂದು ಕೇಳಿದ್ದಾರೆ, ಮುಡಾದವರು ಕೊಟ್ಟಿದ್ದಾರೆ.
ಪ್ರಾಧಿಕಾರದ ಸಭೆ ನಿರ್ಣಯ
ಅಂತಿಮವಾಗಿ ಅಂತಿಮ ಚರ್ಚೆ ನಡೆದು, ಇನ್ನು ಮುಂದೆ ಪ್ರಾಧಿಕಾರ ಭೂಸ್ವಾಧೀನಪಡಿಸದೇ ಉಪಯೋಗಿಸಿಕೊಂಡಿರುವ ಪ್ರಕರಣಗಳಲ್ಲಿ ಭೂ ಪರಿಹಾರ ರೂಪದಲ್ಲಿ ಅಭಿವೃದ್ಧಿ ಪಡಿಸಿದ ಒಟ್ಟು ವಿಸ್ತೀರ್ಣದ ಪೈಕಿ ಶೇ.50 ವಿಸ್ತೀರ್ಣದ ಅಭಿವೃದ್ಧಿ ಪಡಿಸಿದ ಜಾಗವನ್ನು ಒಪ್ಪುವ ಪ್ರಕರಣಗಳಲ್ಲಿ ನೀಡಬಹುದೆಂದು ಎಂದು ಪ್ರಾಧಿಕಾರದ ಸಭೆ ನಿರ್ಣಯಿಸಿದೆ.
ಇದೆಲ್ಲ ಆದ ಮೇಲೆ ನನ್ನ ಪತ್ನಿ ಅಕ್ಟೋಬರ್, 2021ರಲ್ಲಿ ಮತ್ತೆ ಅರ್ಜಿ ಸಲ್ಲಿಸಿ, ನನ್ನ ಜಮೀನನ್ನು ಪ್ರಾಧಿಕಾರವು ಉಪಯೋಗಿಸಿಕೊಂಡಿರುವ ಬಾಬ್ತು ಇದುವರೆವಿಗೂ ಯಾವುದೇ ಪರಿಹಾರ ನೀಡಿರುವುದಿಲ್ಲ, ಆದ್ದರಿಂದ ನನಗೆ ಮೇಲಿನ ಜಮೀನಿಗೆ ಪರಿಹಾರವಾಗಿ ಪ್ರಸ್ತುತ 50:50ರ ಅನುಪಾತದಲ್ಲಿ ಕೊಡಿ ಎಂದು ಕೇಳಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು ಇದನ್ನೆಲ್ಲ ಪರಿಶೀಲಿಸಿ ನನ್ನ ಪತ್ನಿಯಿಂದ ಪರಿತ್ಯಾಜನ ಪತ್ರ ಬರೆಸಿಕೊಂಡು 3.16 ಎಕರೆ ಜಮೀನಿನ ಹಕ್ಕುಗಳನ್ನು ಪ್ರಾಧಿಕಾರದ ಹೆಸರಿಗೆ ವರ್ಗಾಯಿಸಿಕೊಂಡು ಜಮೀನಿಗೆ ಬದಲಿ ಜಾಗ ನೀಡುವ ಬಗ್ಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಆಯುಕ್ತರು ಅಧಿಕೃತ ಜ್ಞಾಪನಾ ಆದೇಶ ಹೊರಡಿಸಿ 38,284 ಚದರಡಿ ಅಳತೆಗೆ ಪ್ರತಿಯಾಗಿ ನಿವೇಶನಗಳನ್ನು ಪರಿಹಾರ ರೂಪದಲ್ಲಿ ಮಂಜೂರು ಮಾಡಿರುತ್ತಾರೆ.
ಜಸ್ಟೀಸ್ ದೇಸಾಯಿ ಆಯೋಗ
ಇದರ ಪರಿಶೀಲನೆಗೆ ಜಸ್ಟೀಸ್ ಪಿ.ಎನ್.ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ವಿಚಾರಣಾ ಆಯೋಗ ರಚಿಸಲಾಗಿದೆ, ಆಯೋಗ ತನಿಖೆ ಪ್ರಾರಂಭಿಸಿದೆ.
ಬಿಜೆಪಿ, ಜೆಡಿಎಸ್‌ನವರು ಮುಡಾದ ವಿಚಾರದಲ್ಲೂ, ವಾಲ್ಮೀಕಿ ಹಗರಣದಲ್ಲೂ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.