ಬೆಂಗಳೂರು:ಮುಡಾದ ಬಿಡಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿರುವ ಅಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದವರು ಪಾಲುದಾರರಾಗಿದ್ದು ಇವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ರಾಜ್ಯಪಾಲರ ಅನುಮತಿ ಕೋರಿ ಭ್ರಷ್ಟಾಚಾರ ವಿರೋಧಿ, ಪರಿಸರ ವೇದಿಕೆ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಮನವಿ ಸಲ್ಲಿಸಿದ್ದಾರೆ.
ಸಂಸ್ಥೆಯ ಇತರ ಸದಸ್ಯರ ಜೊತೆ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಇಂದು ಭೇಟಿ ಮಾಡಿ, ಮುಖ್ಯಮಂತ್ರಿ ಅವರ ಕುಟುಂಬ 14 ಬಿಡಿ ನಿವೇಶನಗಳನ್ನು ಪಡೆಯುವ ಮೂಲಕ ಸರ್ಕಾರದ ಬೊಕ್ಕಸಕ್ಕೆ 44.64 ಕೋಟಿ ರೂ. ನಷ್ಟ ಉಂಟು ಮಾಡಿದ್ದಾರೆ ಎಂದಿದ್ದಾರೆ.
ಮುಖ್ಯಮಂತ್ರಿ ಪತ್ನಿ ಹೆಸರಿನಲ್ಲಿ ನಿವೇಶನ
ಇದರಲ್ಲಿ ಮುಖ್ಯಮಂತ್ರಿ ಅವರ ಪತ್ನಿ ಬಿ.ಎಂ.ಪಾರ್ವತಿ ಹೆಸರಿನಲ್ಲಿ ಈ ನಿವೇಶನಗಳನ್ನು ಪಡೆಯಲಾಗಿದೆ.
ಹಗರಣದಲ್ಲಿ ಮುಖ್ಯಮಂತ್ರಿ ಅವರಲ್ಲದೆ, ಅವರ ಪುತ್ರ ಡಾ.ಎಸ್.ಯತೀಂದ್ರ, ಪ್ರಾಧಿಕಾರ ಆಯುಕ್ತರಾಗಿದ್ದ ಡಿ.ಬಿ.ನಟೇಶ್, ಅಧ್ಯಕ್ಷ ಎಚ್.ವಿ.ರಾಜೀವ್, 2005ರಲ್ಲಿ ತಹಸೀಲ್ದಾರ್ ಆಗಿದ್ದ ಮಲ್ಲಿಗೆ ಶಂಕರ್, ಉಪನೋಂದಣಾಧಿಕಾರಿ ಎಸ್.ಕೆ.ಸಿದ್ದಯ್ಯ, ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಜಿ.ಕುಮಾರ ನಾಯಕ್ ಮತ್ತು ಎ.ಸೆಲ್ವಕುಮಾರ್ ಭಾಗಿಯಾಗಿದ್ದಾರೆ.
ಮುಡಾ ಹಗರಣ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅನುಮತಿ ನೀಡಬೇಕೆಂದು ಅವರು ಕೋರಿದ್ದಾರೆ.