ಬೆಂಗಳೂರು:ಸರ್ಕಾರದ ವಿರುದ್ಧ ಬರುತ್ತಿರುವ ಆರೋಪಗಳಿಗೆ ಸಂಬಂಧಿಸಿದಂತೆ ವರಿಷ್ಠರಿಗೆ ಮನದಟ್ಟು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎರಡು ದಿನಗಳ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಜುಲೈ 30ರಂದು ದೆಹಲಿಗೆ ತೆರಳಿ ಎರಡು ದಿನಗಳ ಕಾಲ ದೆಹಲಿಯಲ್ಲೇ ಬಿಡಾರ ಹೂಡಿ ಪಕ್ಷದ ಮುಖಂಡರನ್ನಷ್ಟೇ ಅಲ್ಲದೆ, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಾಕಿ ಇರುವ ಯೋಜನೆಗಳಿಗೆ ಅನುಮತಿ ದೊರಕಿಸುವಂತೆ ಕೇಂದ್ರ ಸಚಿವರುಗಳನ್ನೂ ಭೇಟಿ ಮಾಡಲಿದ್ದಾರೆ.
ಪಕ್ಷಕ್ಕೆ ಮುಜುಗರ
ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣ, ಮುಡಾ ಬಿಡಿ ನಿವೇಶನಗಳ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪ, ಇದರಿಂದ ಸರ್ಕಾರ ಮತ್ತು ಪಕ್ಷಕ್ಕೆ ಆಗಿರುವ ಮುಜುಗರದ ಬಗ್ಗೆಯೂ ವರಿಷ್ಠರಿಗೆ ಮಾಹಿತಿ ನೀಡಲಿದ್ದಾರಂತೆ.
ಕರ್ನಾಟಕ ವಿಧಾನಮಂಡಲದಲ್ಲೂ ಪ್ರತಿಪಕ್ಷಗಳು ಈ ಆರೋಪಗಳನ್ನು ರಾಜಕೀಯವಾಗಿ ಬಳಸಿಕೊಂಡವು.
ಈ ವಿಷಯವನ್ನೇ ರಾಷ್ಟ್ರಮಟ್ಟದಲ್ಲಿ ಬಿಂಬಿಸಲು ಬಿಜೆಪಿ ಸದಸ್ಯರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮತ್ತೆ ಪ್ರಸ್ತಾಪಿಸುವ ಸಾಧ್ಯತೆ ಇದೆ, ಇಂತಹ ಸನ್ನಿವೇಶದಲ್ಲಿ ನಮ್ಮ ನೆರವಿಗೆ ಧಾವಿಸುವಂತೆ, ಸಂಬಂಧಪಟ್ಟ ದಾಖಲೆಗಳನ್ನು ವರಿಷ್ಠರಿಗೆ ನೀಡುವ ಉದ್ದೇಶ ಹೊಂದಿದ್ದಾರೆ.
ಜನತೆ ದಾರಿ ತಪ್ಪಿಸುತ್ತಿದ್ದಾರೆ
ಎರಡು ವಿಷಯಗಳನ್ನು ಪ್ರತಿಪಕ್ಷಗಳು ಮುಂದಿಟ್ಟುಕೊಂಡು ಕರ್ನಾಟಕದ ಜನತೆಯನ್ನು ಬಿಜೆಪಿ ಮತ್ತು ಜೆಡಿಎಸ್ ನಾಯಕರು ದಾರಿ ತಪ್ಪಿಸುತ್ತಿದ್ದಾರೆ ಎಂದು ಹಗರಣಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆ ಮತ್ತು ಈ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮುಖಂಡರ ಗಮನಕ್ಕೆ ತರಲಿದ್ದಾರೆ.
ದೆಹಲಿ ಭೇಟಿ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಲಿದ್ದಾರೆ.
ಕೆಪಿಸಿಸಿ ಕಚೇರಿ ನಿರಾಕರಣೆ
ಉನ್ನತ ಮೂಲಗಳ ಪ್ರಕಾರ ವರಿಷ್ಟರೇ ಉಭಯ ನಾಯಕರನ್ನು ದೆಹಲಿಗೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ, ಆದರೆ, ಇದನ್ನು ಕೆಪಿಸಿಸಿ ಕಚೇರಿ ನಿರಾಕರಿಸಿ, ಎರಡು ವಾರಗಳ ಮುಂಚೆಯೇ ದೆಹಲಿ ಪ್ರವಾಸ ನಿರ್ಧಾರವಾಗಿತ್ತು ಎಂದಿದೆ.
ದೆಹಲಿ ಭೇಟಿ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ, ಅಮಿತ್ ಷಾ, ಜಲಶಕ್ತಿ ಹಾಗೂ ಕೃಷಿ ಸಚಿವರನ್ನೂ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಭೇಟಿ ಮಾಡುವ ಸಾಧ್ಯತೆ ಇದೆ.