ಬೆಂಗಳೂರು:ನಮ್ಮನ್ನು ಸರ್ವನಾಶ ಮಾಡುವುದೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಪ್ರತಿನಿತ್ಯದ ಆಲೋಚನೆಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮನ್ನು ಸರ್ವನಾಶ ಮಾಡಲು ಕುಮಾರಸ್ವಾಮಿ ಪ್ರತಿನಿತ್ಯ ರಾಜಕಾರಣ ಮಾಡುತ್ತಿದ್ದಾರೆ, ಅವರ ನಡೆ, ಹೆಜ್ಜೆ, ಭಾವನೆ, ಚಿಂತನೆ, ಆಚಾರ-ವಿಚಾರ ಎಲ್ಲವೂ ನಮಗೆ ಗೊತ್ತಿದೆ ಎಂದರು.
ರಾಮನಗರ ಹೆಸರು ಬದಲಿಸುತ್ತಿಲ್ಲ
ರಾಮನಗರದ ಹೆಸರನ್ನು ಬದಲಿಸುತ್ತಿಲ್ಲ, ಇದು ನಮ್ಮ ಜಿಲ್ಲೆ, ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ತಾಲೂಕಿನ ಜನ ನಮ್ಮವರು, ಅಂದರೆ ಬೆಂಗಳೂರಿನವರು.
ನಾನು ಬೆಂಗಳೂರು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ, ಕುಮಾರಸ್ವಾಮಿ ಹಾಗೂ ದೇವೇಗೌಡರು ಹಾಸನದಿಂದ ಬಂದವರು, ಆಗ ಇದು ಬೆಂಗಳೂರಾಗಿಯೇ ಇತ್ತು, ಪ್ರಧಾನಮಂತ್ರಿ, ಮುಖ್ಯಮಂತ್ರಿಯಾದಾಗಲೂ ಬೆಂಗಳೂರಾಗಿಯೇ ಇತ್ತು, ನಾವು ಭಾರತೀಯರೆಂಬುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆಯೋ ಅದೇ ರೀತಿ ಬೆಂಗಳೂರಿನವರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ, ಕುಮಾರಸ್ವಾಮಿ ಅಧಿಕಾರಕ್ಕೆ ಬಂದಾಗ ಜಿಲ್ಲೆಯನ್ನು ಒಡೆದು ಬೇರೆ ಹೆಸರು ಕೊಟ್ಟರು.
ಜಿಲ್ಲೆಯನ್ನು ಪ್ರತ್ಯೇಕ ಮಾಡುವಾಗ ಬೆಂಗಳೂರು ಹೆಸರು ಉಳಿಸಿಕೊಳ್ಳುವಂತೆ ಸಲಹೆ ನೀಡಿದ್ದೆವು, ಪೂರ್ವಜರು ಕೊಟ್ಟಿರುವ ಹೆಸರನ್ನು ಯಾಕೆ ಕಳೆದುಕೊಳ್ಳಬೇಕು ಎಂದು ಪ್ರಶ್ನಿಸಿದರು.
ಜನರು ಸಂತೋಷವಾಗಿದ್ದಾರೆ
ಜಿಲ್ಲಾಡಳಿತ ಕೇಂದ್ರ ರಾಮನಗರದಲ್ಲೇ ಇರಲಿದೆ, ಜಿಲ್ಲೆಯ ಜನಕ್ಕೆ ಹೊಸ ದಿಕ್ಕು ನೀಡಬೇಕು, ಹೊಸ ಆಲೋಚನೆ, ಅಭಿವೃದ್ಧಿ ನೀಡಬೇಕು, ಮುಂದಿನ ಪೀಳಿಗೆ ದೃಷ್ಟಿಯಿಂದ ಆಲೋಚನೆ ಮಾಡಿ ತೀರ್ಮಾನ ಮಾಡಿದ್ದೇವೆ, ತೀರ್ಮಾನಕ್ಕೆ ಜನರು ಪಕ್ಷಾತೀತವಾಗಿ ಸಂತೋಷವಾಗಿದ್ದಾರೆ ಎಂದರು.
ಮತ್ತೆ ಅಧಿಕಾರಕ್ಕೆ ಬಂದು ರಾಮನಗರ ಎಂದು ಮರುನಾಮಕರಣ ಮಾಡುವುದು ಕುಮಾರಸ್ವಾಮಿ ಅವರ ಹಣೆಯಲ್ಲಿ ಬರೆದಿಲ್ಲ, 2028ರಲ್ಲೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ, ಬರೆದಿಟ್ಟುಕೊಳ್ಳಿ ಎಂದು ಸವಾಲು ಹಾಕಿದರು.
ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಕೆಆರ್‌ಎಸ್ ಬೃಂದಾವನವನ್ನು ವಿಶ್ವದರ್ಜೆಗೆ ಏರಿಸುವ ಯೋಜನೆ ಕೈಗೊಳ್ಳಲಾಗಿದೆ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ.