ಸಂಘಟನೆಗಾಗಿ ಕಠಿಣ ನಿರ್ಧಾರ ಕೈಗೊಳ್ಳುತ್ತೇವೆ : ಹೆಚ್ ಡಿಕೆ
ಬೆಂಗಳೂರು : ಪಕ್ಷ ಸಂಘಟನೆಗಾಗಿ ಸಮಿತಿಯೊಂದನ್ನು ರಚನೆ ಮಾಡಿ, ಎಲ್ಲಾ ಹಂತಗಳಲ್ಲಿಯೂ ಪಕ್ಷಕ್ಕೆ ಕಾಯಕಲ್ಪ ನೀಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮುಂಬರುವ ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ, ಪಕ್ಷ ಸಂಘಟನೆ, ಸದಸ್ಯತ್ವ ಅಭಿಯಾನ, ಪದಾಧಿಕಾರಿಗಳ ಕಾರ್ಯನಿರ್ವಹಣೆ ಸೇರಿದಂತೆ ವಿವಿಧ ಮಹತ್ವದ ವಿಷಯಗಳ ಬಗ್ಗೆ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಹಾಗೂ ನಾಯಕರ ಜತೆ ಸಮಾಲೋಚನೆ ನಡೆಸಿದ ವೇಳೆ ಅವರು ಮಾತನಾಡಿದರು.
ಸಮಿತಿ ರಚನೆಯಾದ ಮೇಲೆ ಇನ್ನು ಹತ್ತು ದಿನಗಳ ನಂತರ ಆ ಸಮಿತಿಯಲ್ಲಿ ಇರುವವರು ಎಲ್ಲಾ ಮುಖಂಡರ ಜತೆಗೂಡಿ ಎಲ್ಲಾ 31 ಜಿಲ್ಲೆಗಳಲ್ಲಿಯೂ ಕಾರ್ಯಕ್ರಮ ಹಾಕಿಕೊಳ್ಳಬೇಕು. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಬೇಕು, ಕಾರ್ಯಕರ್ತರ ಪಡೆ ಕಟ್ಟಬೇಕು ಎಂದು ಅವರು ನಿರ್ದೇಶನ ನೀಡಿದರು.
ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ.ದೇವೇಗೌಡರು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಎಲ್ಲ ಹಿರಿಯ ಕಿರಿಯ ನಾಯಕರೂ ರಾಜ್ಯ ಪ್ರವಾಸ ಮಾಡಬೇಕು. ಇನ್ನೊಂದು ತಿಂಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ನಾಯಕರು ಪ್ರವಾಸ ಮಾಡಬೇಕು ಎಂದು ಅವರು ಸೂಚನೆ ನೀಡಿದರು.
ಪಕ್ಷ ಸಂಘಟನೆ ನಿರ್ಲಕ್ಷ್ಯ ಸಹಿಸಲ್ಲ
ಪಕ್ಷ ಸಂಘಟನೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಸಹಿಸುವ ಪ್ರಶ್ನೆ ಇಲ್ಲ. ಚುನಾವಣೆ ಬಂದಾಗ ಕಾರ್ಯಕರ್ತರ ಕೈಕಾಲು ಹಿಡಿಯುತ್ತೇವೆ. ಆಮೇಲೆ ಮತ್ತೊಂದು ಚುನಾವಣೆ ಬರುವ ತನಕ ಸಂಘಟನಾ ಕೆಲಸ ಅಲಕ್ಷ್ಯ ಮಾಡುತ್ತೇವೆ. ಇಂಥ ಪ್ರವೃತ್ತಿ ಪಕ್ಷದಲ್ಲಿ ಬದಲಾಗಬೇಕು ಎಂದು ಅವರು ತಾಕೀತು ಮಾಡಿದರು.
ಸದಸ್ಯತ್ವ ನೋಂದಣಿ ಅಭಿಯಾನದ ಬಗ್ಗೆ ನಿರ್ಲಕ್ಷ್ಯ ಸರಿಯಲ್ಲ. ನಿಷ್ಠಾವಂತ ಕಾರ್ಯಕರ್ತರ ಶ್ರಮದಿಂದ ಪಕ್ಷ ಉಳಿದಿದೆ. ಹೊಸ ಹೊಸ ರಕ್ತ ಪಕ್ಷಕ್ಕೆ ಹರಿದು ಬರಬೇಕಿದೆ. ಅದಕ್ಕೆ ಪೂರಕವಾದ ವೇದಿಕೆಯನ್ನು ನಾವು ಕಲ್ಪಿಸಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.
ಸಂಘಟನೆಗಾಗಿ ಕಠಿಣ ನಿರ್ಧಾರ ಕೈಗೊಳ್ಳುತ್ತೇವೆ
ಸಂಘಟನೆಯ ಬಗ್ಗೆ ನಿರ್ಲಕ್ಷ್ಯ ಮನೋಭಾವ ಪದೇ ಪದೆ ಪುನರಾವರ್ತನೆ ಆಗಬಾರದು. ಸಂಘಟನೆ ಬಲವಾದರೆ ನಾವು ಉಳಿಯುತ್ತೇವೆ. ಜನರ ಹಿತರಕ್ಷಣೆಗೆ ನಾವು ಸಂಘಟನೆಗೆ ಒತ್ತು ಕೊಡಬೇಕು. ಹೀಗಾಗಿ ಪಕ್ಷದಲ್ಲಿ ಗಂಭೀರ ಹಾಗೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಗ್ಗೆ ಹಿಂಜರಿಕೆ ಇರಬಾರದು ಎಂದು ಅವರು ನೇರ ಮಾತುಗಳಲ್ಲಿ ಹೇಳಿದರು.
ಜನತಾ ಪರಿವಾರ ಹುಟ್ಟಿದಾಗ ಬಲವಾಗಿತ್ತು. ಆಮೇಲೆ ಜನತಾ ಪರಿವಾರ ಕುಸಿಯುತ್ತಾ, ಒಡೆಯುತ್ತ ಹೋಯಿತು. ಇಂಥ ಪರಿಸ್ಥಿತಿ ಅನ್ಯಪಕ್ಷಗಳಿಗೆ ಲಾಭವಾಯಿತು. ವೈಯಕ್ತಿಕ ಸಮಸ್ಯೆ ಮುಂದು ಮಾಡಿ ನೆಪ ಹುಡುಕೋದು ಬೇಡ. ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಅಭ್ಯರ್ಥಿಗಳು ಪಕ್ಷದ ಸಂಘಟನೆಗಾಗಿ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಪಕ್ಷದ ಕೆಲಸ ಮಾಡದೇ ವರ್ಷಾನುಗಟ್ಟಲೆ ಪದಾಧಿಕಾರಿಯಾಗಿ ಉಳಿಯಬೇಕು ಎಂದು ಭಾವಿಸಿದರೆ ಹೇಗೆ? ಹಾಗೆ ಭಾವಿಸುವ ಅಗತ್ಯ ಇಲ್ಲ. ಕ್ರಿಯಾಶೀಲರಿಗೆ ಅವಕಾಶ ಕೊಡಬೇಕು. ಸಂಘಟನಾ ಶಕ್ತಿಗೆ ಚಾಲನೆ ಕೊಡಬೇಕು. ಪಕ್ಷದ ಕೆಲಸ ಸಮರ್ಪಕವಾಗಿ ಮಾಡದಿದ್ದರೆ ಅಂಥ ಪದಾಧಿಕಾರಿಗಳನ್ನು ಮುಲಾಜಿಲ್ಲದೆ ಬದಲಾವಣೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.