ಬೆಂಗಳೂರು:ಮುಡಾ ಹಗರಣ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಲು ದೆಹಲಿ ಮಟ್ಟದಲ್ಲಿ ಚಟುವಟಿಕೆಗಳು ನಡೆದಿವೆ.
ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡುವಂತೆ ನ್ಯಾಯವಾದಿ ಟಿ.ಜೆ.ಅಬ್ರಹಾಂ ಅವರು ಇತ್ತೀಚೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿ ಮನವಿ ಮಾಡಿಕೊಂಡಿದ್ದರು.
ವಿಷಯ ಮತ್ತಷ್ಟು ಗಂಭೀರ
ಈ ದೂರಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಾಜ್ಯಪಾಲರು ವಿವರಣೆ ಕೋರಿ ಪತ್ರ ಬರೆದಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ, ವಿಷಯವನ್ನು ಮತ್ತಷ್ಟು ಗಂಭೀರಗೊಳಿಸಲು ದೆಹಲಿ ಮಟ್ಟದಲ್ಲಿ ಪ್ರಯತ್ನಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
ಮುಡಾ ಹಗರಣ ಸಂಬಂಧ ಟಿ.ಜೆ.ಅಬ್ರಹಾಂ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವಿರುದ್ಧದ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡುವ ಪರಿಸ್ಥಿತಿ ಉದ್ಭವಿಸದಂತೆ ಪ್ರತಿ ತಂತ್ರಗಾರಿಕೆಯಲ್ಲಿ ರಾಜ್ಯ ಸರ್ಕಾರ ನಿರತವಾಗಿದೆ.
ದೆಹಲಿ ಮಟ್ಟದಲ್ಲಿ ರಾಜಕೀಯ ಪಿತೂರಿಗಳು ಆರಂಭವಾಗಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ತನ್ನ ದಾಳ ಉರುಳಿಸಲು ಸಜ್ಜಾಗಿದ್ದು, ಬರುವ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಮಹತ್ವದ ನಿರ್ಧಾರ ಕೈಗೊಳುವ ಸಾಧ್ಯತೆ ಇದೆ.
ಮೊಕದ್ದಮೆ ಹೂಡಲು ಅನುಮತಿ ಶಂಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮೊಕದ್ದಮೆ ಹೂಡಲು ರಾಜ್ಯಪಾಲರು ಅನುಮತಿ ನೀಡಬಹುದೆಂಬ ಶಂಕೆಗೆ ಕಾರಣವೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ, ಅವರ ವಿರುದ್ಧ ಶಿವಮೊಗ್ಗದ ನ್ಯಾಯವಾದಿಗಳಿಬ್ಬರು ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಮನವಿ ಸಲ್ಲಿಸಿ, ಮುಖ್ಯಮಂತ್ರಿಗಳ ವಿರುದ್ಧ ವಿಚಾರಣೆಗೆ ಅನುಮತಿ ಕೋರಿದ್ದರು.
ಈಗ ಸಿದ್ದರಾಮಯ್ಯ ವಿರುದ್ಧ ಅದೇ ತಂತ್ರಗಾರಿಕೆ ಬಳಸಲು ದೆಹಲಿ ಮಟ್ಟದಲ್ಲಿ ಯತ್ನಗಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ.