ಬೆಂಗಳೂರು:ಮುಡಾ ಭೂಮಿಯನ್ನು ಸಿದ್ದರಾಮಯ್ಯ ಅವರ ಕುಟುಂಬ ಮುಕ್ಕಿ ತಿಂದಿದೆ ಎಂಬುದಾಗಿ ಇಡೀ ದೇಶವೇ ಮಾತನಾಡುತ್ತಿದ್ದು, ಮುಖ್ಯಮಂತ್ರಿ ಅವರ ಸಮಾಜವಾದಿ ಮುಖವಾಡ, ಅಹಿಂದಾ ಅಲಂಕಾರ, ಸತ್ಯವಂತನ ಸಿಂಗಾರ ಎಲ್ಲವೂ ಕಳಚಿಬಿದ್ದಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಠೋರ ಶಬ್ದಗಳಿಂದ ಟೀಕಾ ಪ್ರಹಾರ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಕುಟುಂಬದ ವಿರುದ್ಧದ ಮುಡಾ ಅವ್ಯವಹಾರದ ದಾಖಲೆಗಳು ಹಾದಿಬೀದಿಯಲ್ಲಿ ಹೊರಾಳಡುತ್ತಿವೆ, ಅಸಹ್ಯವಾಗುವಷ್ಟು ಅನಾಚಾರ ಮಾಡಿ ಅಸಹಾಯಕರಾಗಿ ಅಹಿಂದ ರಕ್ಷಣೆ ಪಡೆಯಲು ಯತ್ನಿಸುತ್ತಿರುವ ನಿಮಗೆ, ನಿಮ್ಮ ಪಕ್ಷದವರೇ ’ಶರಪಂಜರ’ ಸೃಷ್ಟಿಸುತ್ತಿದ್ದಾರೆ ಎಂದಿದ್ದಾರೆ.
ನಿವೇಶನ ಸುಪರ್ದಿಗೆ ಏಕೆ ಕೊಟ್ಟಿಲ್ಲ
ಮುಡಾ ನನಗೆ ನಿವೇಶನ ಹಂಚಿದೆ ನಿಜ, ಸ್ವಾಧೀನ ಪತ್ರವನ್ನೂ ನೀಡಿದೆ, ಅದನ್ನು ನಾನು ಮಾಧ್ಯಮಗಳ ಮುಂದೆಯೂ ತೋರಿಸಿದ್ದೇನೆ, ಆದರೆ, ಹಂಚಿದ ನಿವೇಶನವನ್ನು ಸುಪರ್ದಿಗೆ ಕೊಡಬೇಕಲ್ಲವೇ, ಏಕೆ ಇದುವರೆಗೂ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ.
ವಸ್ತುಸ್ಥಿತಿ ಹೀಗಿರುವಾಗ, ಮುಡಾ ಸಿದ್ದರಾಮಯ್ಯ ಮಾಡಿದ ಸಂಶೋಧನೆ ಏನಿದೆ, ಸುಳ್ಳು ಸಂಶೋಧಕರೇ, ನಿಮ್ಮ ಮುಖಕ್ಕೆ ಮೆತ್ತಿಕೊಂಡಿರುವ ಕೊಳಕನ್ನು ನನ್ನ ಮೇಲೆ ಹಾಗೂ ಇತರರ ಮೇಲೆ ಸಿಡಿಸಲು ಯತ್ನಿಸಿ ಲಜ್ಜೆಗೇಡಿತನದ ಪರಮಾವಧಿ ಮೆರೆದಿದ್ದೀರಿ.
ಹಸಿ ಹಸಿ ಸುಳ್ಳು
ಸಿದ್ದರಾಮಯ್ಯನವರೇ ನಿಮಗೆ ಸುಳ್ಳು ಹೇಳುವುದು ಅಭ್ಯಾಸವೋ, ಆಚಾರವೋ, ಚಾಳಿಯೋ ಗೊತ್ತಿಲ್ಲ, ಹಸಿ ಹಸಿ ಸುಳ್ಳು ಹೇಳುತ್ತಿರುವ ನಿಮ್ಮಲ್ಲಿ ನೈತಿಕತೆ ಸತ್ತಿದೆ, ನಮ್ಮ ಬಗ್ಗೆ ಮಾತನಾಡುವ ಯೋಗ್ಯತೆಯೂ ನಿಮಗಿದೆ ಎನಿಸುವುದಿಲ್ಲ.
ಮುಡಾ ಹಗರಣ ವಿಷಯದಲ್ಲಿ ಆರೋಪಿ ಸ್ಥಾನದಲ್ಲಿರುವ ನೀವು ನನ್ನ ಹಾಗೂ ನನ್ನ ತಂದೆಯವರ ಬಗ್ಗೆ ಆಡುತ್ತಿರುವ ಸುಳ್ಳುಗಳು ನಿಮ್ಮ ಯೋಗ್ಯತೆಗೆ ತಕ್ಕುದಲ್ಲ ಎಂದು ಟೀಕಿಸಿದ್ದಾರೆ.
ಕುಮಾರಸ್ವಾಮಿ ರಾಜ್ಯಕ್ಕೆ ಕೈಗಾರಿಕೆ ತರಲಿ, ರಾಜ್ಯಕ್ಕೆ ಒಳ್ಳೆಯದು ಮಾಡಲಿ ಎನ್ನುತ್ತೀರಿ, ಏನು ಮಾಡಬೇಕೆಂದು ನನಗೆ ಗೊತ್ತಿದೆ, ಕೇಂದ್ರ ಸಚಿವನಾಗಿ ಅಧಿಕಾರ ವಹಿಸಿಕೊಂಡು ಇನ್ನೂ ಎರಡು ತಿಂಗಳು ಕಳೆದಿಲ್ಲ, ರಾಜ್ಯದ ಕೆಲಸ ಮಾಡೋಣವೆಂದರೆ ನಿಮ್ಮಗಳ ಅಸಹಕಾರ, ಅಸೂಯೆ ಅಡ್ಡಿಯಾಗಿದೆ, ಒಂದು ನಾಲಿಗೆ ಮೇಲೆ ಸಹಕಾರ, ಇನ್ನೊಂದು ನಾಲಿಗೆಯಲ್ಲಿ ಅಸಹಕಾರ ಅಲ್ಲವೇ ಸಿದ್ದರಾಮಯ್ಯನವರೇ ಎಂದಿದ್ದಾರೆ.