ಬೆಂಗಳೂರು:ಮುಡಾ ಹಗರಣದಲ್ಲಿ ಯಾವುದೇ ಅವ್ಯವಹಾರವಾಗಲೀ, ಭ್ರಷ್ಟಾಚಾರವಾಗಲೀ ನಡೆದಿಲ್ಲ, ಇದರಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನದಟ್ಟು ಮಾಡುವ ಪ್ರಯತ್ನ ಮಾಡಿದ್ದಾರೆ.
ದೆಹಲಿಗೆ ಒಂದು ದಿನದ ಭೇಟಿ ನೀಡಿರುವ ಅವರು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಅಧಿನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಹಲವು ಮುಖಂಡರಿಗೆ ತಮ್ಮ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಿದ್ದಾರೆ.
ಜಮೀನಿಗೆ ಬದಲಾಗಿ 14 ನಿವೇಶನ
ಮುಡಾ ಹಗರಣದಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ, ಮುಡಾ ಸ್ವಾಧೀನಪಡಿಸಿಕೊಂಡ ತಮ್ಮ ಧರ್ಮಪತ್ನಿಯ ಜಮೀನಿಗೆ ಬದಲಾಗಿ 14 ನಿವೇಶನಗಳನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರ ತಮ್ಮ ಕುಟುಂಬಕ್ಕೆ ನೀಡಿದ್ದು, ಇದರಲ್ಲಿ ಯಾವುದೇ ಅವ್ಯವಹಾರ ಅಥವಾ ಭ್ರಷ್ಟಾಚಾರ ನಡೆದಿಲ್ಲ.
ಮುಡಾ ನಿವೇಶನ ಪಡೆಯಲು ಮುಖ್ಯಮಂತ್ರಿಯಾಗಿ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ, ಪ್ರಾಧಿಕಾರದ ತೀರ್ಮಾನದಂತೆ ತಮ್ಮ ಕುಟುಂಬಕ್ಕೆ ನಿವೇಶನ ಹಂಚಿಕೆಯಾಗಿದೆ, ಇದರಲ್ಲಿ ಸರ್ಕಾರದ ಪಾತ್ರವೂ ಇಲ್ಲ ಎಂದು ಪಕ್ಷದ ವರಿಷ್ಠರಿಗೆ ಸ್ಪಷ್ಟಪಡಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಜಾಯಿಷಿ ನೀಡಿರುವ ಮುಖ್ಯಮಂತ್ರಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಈಗಾಗಲೇ ತನಿಖೆ ನಡೆಸುತ್ತಿದೆ, ಆರೋಪ ಎದುರಿಸುತ್ತಿರುವ ಕೆಲವು ಅಧಿಕಾರಿಗಳ ಬಂಧನವೂ ಆಗಿದ್ದು, ಆರೋಪಿಗಳಿಂದ ಬಹಳಷ್ಟು ಪ್ರಮಾಣದಲ್ಲಿ ಹಣವನ್ನೂ ವಾಪಸ್ ಪಡೆಯಲಾಗಿದೆ.
ಹೈಕಮಾಂಡ್‌ಗೆ ಪೂರ್ಣ ವಿವರ
ಹಗರಣದ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಸಂಬಂಧಪಟ್ಟ ಸಚಿವರ ರಾಜೀನಾಮೆಯನ್ನೂ ಪಡೆಯಲಾಗಿದೆ, ಅಲ್ಲದೆ, ಅವರನ್ನು ತನಿಖಾ ಸಂಸ್ಥೆ ವಿಚಾರಣೆಗೂ ಒಳಪಡಿಸಿದೆ ಎಂಬುದಾಗಿ ಪ್ರಕರಣದ ಪೂರ್ಣ ವಿವರಗಳನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ.
ಹಗರಣ ಸಂಬಂಧ ಕೇಂದ್ರ ಸರ್ಕಾರ ರಾಜಕೀಯ ಸೇಡಿನ ಕ್ರಮಕೈಗೊಳ್ಳುತ್ತಿದ್ದು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ದೂರಿನ ಆಧಾರದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಸಿಬಿಐ ತನಿಖೆ ನೆಪದಲ್ಲಿ ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತಿವೆ.
ಮುಡಾ ಆಡಳಿತ ಲೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೂ ಆದೇಶ ಮಾಡಿದ್ದೇನೆ
ಎಂದು ಮುಖ್ಯಮಂತ್ರಿ ಸಮಜಾಯಿಷಿ ನೀಡಿದ್ದಾರೆ.
ವರ್ಚಸ್ಸಿಗೆ ಮಸಿ ಬಳಿಯುವ ಯತ್ನ
ಕರ್ನಾಟಕದಲ್ಲಿನ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ನಿರಾಧಾರ ಹಗರಣಗಳನ್ನೇ ಮುಂದಿಟ್ಟುಕೊಂಡು, ರಾಜಕೀಯ ದುರುದ್ದೇಶದಿಂದ ಬೀದಿಗಿಳಿದು ಹೋರಾಡುವ ನೆಪದಲ್ಲಿ ತಮ್ಮ ವರ್ಚಸ್ಸಿಗೆ ಮಸಿ ಬಳಿಯುವ ಯತ್ನದಲ್ಲಿ ತೊಡಗಿವೆ ಎಂದು ದೂರಿದ್ದಾರೆ.
ಕರ್ನಾಟಕ ವಿಧಾನಮಂಡಲದ ಅಧಿವೇಶನ ಸಂದರ್ಭದಲ್ಲೂ ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಎತ್ತಿದ ವಾಲ್ಮೀಕಿ ಹಗರಣ ಚರ್ಚೆಗೆ ಸದನದಲ್ಲೇ ಸಮರ್ಪಕ ಉತ್ತರ ನೀಡಿದ್ದು, ಆದಾಗ್ಯೂ ವಿರೋಧ ಪಕ್ಷಗಳು ಪ್ರಕರಣಗಳನ್ನು ಅನಗತ್ಯವಾಗಿ ಸಾರ್ವಜನಿಕವಾಗಿ ಚರ್ಚೆಯ ವಿಷಯವನ್ನಾಗಿಸುತ್ತಿವೆ ಎಂದು ಸಿದ್ದರಾಮಯ್ಯ ಹೈಕಮಾಂಡ್‌ಗೆ ತಿಳಿಸಿದ್ದಾರೆ.