ಬೆಂಗಳೂರು:ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪಾದಯಾತ್ರೆ ಮಾಡಿಕೊಳ್ಳಲಿ, ಅವರ ಆಡಳಿತವಿದ್ದಾಗ ನಡೆದ ಶೇ.40ರಷ್ಟು ಕಮೀಷನ್, ಕೋವಿಡ್ ಕಾಲದ ಅವ್ಯವಹಾರ, ಮಾರಿಷಸ್‌ನಲ್ಲಿ ಇಟ್ಟಿದ್ದಾರೆ ಎನ್ನಲಾದ ಹತ್ತು ಸಾವಿರ ಕೋಟಿ ರೂ. ಹಗರಣಗಳ ಬಗ್ಗೆ ರಾಜ್ಯದ ಜನತೆಗೆ ಸತ್ಯ ತಿಳಿಸಲಿ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಮಧ್ಯೆಯೇ ಒಮ್ಮತವಿಲ್ಲ, ಬಿಜೆಪಿ ಆಡಳಿತವಿದ್ದಾಗ ಸಾಲು ಸಾಲು ಹಗರಣಗಳು ನಡೆದಿದ್ದವು ಎಂದರು.
ಬಿಜೆಪಿಯಲ್ಲೂ ಗುಂಪುಗಳು
ಬಿಜೆಪಿಯಲ್ಲೂ ಬಿ.ವೈ.ವಿಜಯೇಂದ್ರ, ಡಾ.ಅಶ್ವತ್ಥನಾರಾಯಣ, ಆರ್.ಅಶೋಕ, ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಗುಂಪುಗಳಿವೆ.
ವಾಲ್ಮೀಕಿ ನಿಗಮ ಹಗರಣದ ತನಿಖೆಗೆ ಆದೇಶಿಸಲಾಗಿದೆ, ಮೈಸೂರು ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಏನೂ ಇಲ್ಲ, ಈಗಾಗಲೇ ಅವರು ಇದರ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ.
ಜನರ ದಿಕ್ಕು ತಪ್ಪಿಸಲು ಪಾದಯಾತ್ರೆ
ಮುಡಾದಲ್ಲಿ ಬದಲಿ ನಿವೇಶನ ಹಂಚಿಕೆ ನೀತಿ ಮಾಡಿದ್ದೇ ಬಿಜೆಪಿ ಆಡಳಿತದಲ್ಲಿ, ನಿವೇಶನಗಳನ್ನು ಹಂಚಿದ್ದೂ ಅವರೇ, ಈಗ ಜನರ ದಿಕ್ಕು ತಪ್ಪಿಸಲು ಪಾದಯಾತ್ರೆ ನಾಟಕ ಆಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಪಕ್ಷದ ಹಲವು ವಿಚಾರಗಳ ಬಗ್ಗೆ ಮಾತನಾಡಲು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ದೆಹಲಿಗೆ ಹೋಗಿದ್ದಾರೆ, ಸಂಪುಟ ಪುನಾರಚನೆ ವಿಷಯ ಏನೂ ಇಲ್ಲ, ಮಂತ್ರಿಸ್ಥಾನದ ಆಸೆ ಇರುವವರು, ಕೇಳುವುದು ಸ್ವಾಭಾವಿಕ.
ಸಚಿವ ಜಮೀರ್ ಅಹಮದ್ ಸಂಪುಟ ಪುನಾರಚನೆ ಕುರಿತು ಯಾವ ಅರ್ಥದಲ್ಲಿ ಮಾತನಾಡಿದ್ದಾರೋ ತಿಳಿಯದು, ಇದನ್ನೆಲ್ಲ ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.