ನವದೆಹಲಿಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಡಾ ಹಾಗೂ ಮಹರ್ಷಿ ವಾಲ್ಮೀಕಿ ನಿಗಮದ ಹಗರಣಗಳನ್ನು ಮುಂದಿಟ್ಟುಕೊಂಡು ಬೆಂಗಳೂರು-ಮೈಸೂರು ಪಾದಯಾತ್ರೆಗೆ ಮುಂದಾಗಿದ್ದ ಬಿಜೆಪಿ ಮತ್ತು ಜೆಡಿಎಸ್ ನಡುವೆ ವಿಭಿನ್ನ ರಾಗ ಮೊಳಗುತ್ತಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬೆಂಗಳೂರು-ಮೈಸೂರು ಪಾದಯಾತ್ರೆ ತೀರ್ಮಾನ ಕೈಗೊಳ್ಳಲಾಗಿದೆ, ಇದರಿಂದ ಯಾವುದೇ ಲಾಭ ಇಲ್ಲ, ಇದಕ್ಕಿಂತ ಕಾನೂನು ಹೋರಾಟ ಮುಖ್ಯ, ರಾಜಕೀಯವೇ ಪ್ರಾಮುಖ್ಯವಲ್ಲ, ಈ ಪಾದಯಾತ್ರೆಗೆ ಜೆಡಿಎಸ್ನ ನೈತಿಕ ಬೆಂಬಲವೂ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಕುಮಾರಸ್ವಾಮಿ ಅಸಮಾಧಾನ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ನಾಶ ಮಾಡಲು ಹೊರಟ ಪ್ರೀತಂಗೌಡನನ್ನು ಸಭೆಯಲ್ಲಿ ಕೂರಿಸಿಕೊಂಡು, ಆ ಸಭೆಗೆ ನನ್ನನ್ನೂ ಕರೆಯಲಾಯಿತು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಲೋಕಸಭಾ ಚುನಾವಣೆ ವೇಳೆ ಹಾಸನದಲ್ಲಿ ಪೆನ್ಡ್ರೈವ್ ಹಂಚಿದೋರು ಯಾರು ಎಂಬುದು ಗೊತ್ತಿರಲಿಲ್ವಾ, ಚುನಾವಣಾ ಮೈತ್ರಿಯೇ ಬೇರೆ, ರಾಜಕೀಯವೇ ಬೇರೆ ಎಂದು ಖಡಕ್ಕಾಗಿ ಮಾತನಾಡಿದ್ದಾರೆ.
ಬಿಜೆಪಿ ಪಾದಯಾತ್ರೆಯಲ್ಲಿ ಭಾಗಿಯಾಗಬಾರದು ಎಂಬ ನಿರ್ಧಾರವನ್ನು ಜೆ.ಟಿ.ದೇವೇಗೌಡ ನೇತೃತ್ವದಲ್ಲಿ ನಡೆದ ಜೆಡಿಎಸ್ ಕೋರ್ ಕಮಿಟಿ ಸದಸ್ಯರು ತೆಗೆದುಕೊಂಡಿದ್ದಾರೆ, ಬಿಜೆಪಿ ತನ್ನ ತೀರ್ಮಾನ ತೆಗೆದುಕೊಂಡು ಹೋರಾಟ ಮಾಡುತ್ತಿದೆ, ಪಾದಯಾತ್ರೆಗೆ ಇದು ಸೂಕ್ತ ಸಂದರ್ಭವಲ್ಲ ಅನ್ನೋ ಕಾರಣಕ್ಕೆ ಜೆಡಿಎಸ್ ಹಿಂದೆ ಸರಿದಿದೆ.
ಮೈಸೂರುವರೆಗೂ ನಮ್ಮ ಶಕ್ತಿ ಇದೆ
ಜನರಿಂದ ಟೀಕೆ ವ್ಯಕ್ತವಾಗುವ ಸಾಧ್ಯತೆ ಇದ್ದು, ನಾವು ಪಾದಯಾತ್ರೆಯಿಂದ ಹಿಂದೆ ಸರಿದಿದ್ದೇವೆ, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಾಗ ಯಾಕೆ ಬೆಂಬಲ ಕೊಡಬೇಕು, ಬೆಂಗಳೂರಿನಿಂದ ಮೈಸೂರುವರೆಗೂ ನಮ್ಮ (ಜೆಡಿಎಸ್) ಶಕ್ತಿ ಇದೆ, ನಮ್ಮನ್ನು ಪರಿಗಣಿಸದಿದ್ದರೆ ಹೇಗೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಮೊದಲು ಮುಡಾ ಮತ್ತು ವಾಲ್ಮೀಕಿ ನಿಗಮ ಹಗರಣದ ಆಳ-ಅಗಲವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಬೆಂಗಳೂರು-ಮೈಸೂರು ಪಾದಯಾತ್ರೆ ನಡೆಸಲು ಎರಡೂ ಪಕ್ಷಗಳ ಮುಖಂಡರು ಮುಂದಾಗಿದ್ದರು.
ಬೆಂಗಳೂರಿನಲ್ಲಿ ನಿನ್ನೆ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪಕ್ಷದ ಮುಖಂಡರಾದ ಜಿ.ಟಿ.ದೇವೇಗೌಡ ಮತ್ತು ನಿಖಿಲ್ ಕುಮಾರಸ್ವಾಮಿ, ರಾಜ್ಯದಾದ್ಯಂತ ಭಾರಿ ಮಳೆಯಾಗುತ್ತಿದ್ದು, ಅನಾಹುತಗಳು ಸಂಭವಿಸುತ್ತಿವೆ, ಮಳೆ ಕಡಿಮೆಯಾದ ನಂತರ ಬಿಜೆಪಿ ಪಾದಯಾತ್ರೆ ಕೈಗೊಳ್ಳಬೇಕು ಎಂದಿದ್ದರು.
ಮಳೆ ಕಡಿಮೆ ನಂತರ ಪಾದಯಾತ್ರೆ
ಪಾದಯಾತ್ರೆ ವೇಳೆ ಭಾರಿ ಮಳೆಯಾದರೆ ಪಕ್ಷಗಳ ಕಾರ್ಯಕರ್ತರು ಮತ್ತು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಜನರು ಅನಗತ್ಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ, ಮಳೆ ಕಡಿಮೆಯಾದ ನಂತರ ಬಿಡದಿಯಿಂದ ಪಾದಯಾತ್ರೆ ಆರಂಭಿಸಬಹುದು.
ಪಾದಯಾತ್ರೆ ಕುರಿತು ಪಕ್ಷದ ಸ್ಥಳೀಯ ಮುಖಂಡರ ಸಲಹೆಗಳನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಾಗುವುದು ಎಂದಿದ್ದರು.
ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕಿರುವುದರಿಂದ ಅವರಿಲ್ಲದೆ ಪಾದಯಾತ್ರೆ ಯಶಸ್ವಿಯಾಗದು ಎಂಬ ಅಭಿಪ್ರಾಯವನ್ನು ಜಿ.ಟಿ.ದೇವೇಗೌಡ ವ್ಯಕ್ತಪಡಿಸಿದ್ದರು.
ಇತ್ತೀಚಿನ ಈ ಬೆಳವಣಿಗೆಗೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಎರಡೂ ಪಕ್ಷಗಳ ಮುಖಂಡರು ಸಭೆ ನಡೆಸಿ, ಆಗಸ್ಟ್ 3ರಿಂದ ಪಾದಯಾತ್ರೆ ಆರಂಭಿಸುವುದಾಗಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಿದ್ದರು.
ತೀರ್ಮಾನ ಕೈಗೊಂಡ ಎರಡೇ ದಿನದಲ್ಲಿ ಜೆಡಿಎಸ್ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.