ಬೆಂಗಳೂರು:ಕರ್ನಾಟಕದಲ್ಲಿ ನ್ಯಾನೋ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಲು ಸಾಧ್ಯವಿರುವ ಸಂಪೂರ್ಣ ಸಹಕಾರವನ್ನು ಸರ್ಕಾರ ಒದಗಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಭರವಸೆ ನೀಡಿದರು.
13ನೇ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, 2007ರಿಂದ ನಿರಂತರವಾಗಿ ಸಮಾವೇಶ ಆಯೋಜನೆಗೆ ಮಾರ್ಗದರ್ಶನ ನೀಡುತ್ತಿರುವ ಭಾರತರತ್ನ ಪ್ರೊ.ಸಿ.ಎನ್.ಆರ್.ರಾವ್ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಕರ್ನಾಟಕ ಶ್ರೀಮಂತ ಸಾಂಸ್ಕೃತಿಕ ಪರಂಪರೆಗಳಿಗೆ ಮಾತ್ರವಲ್ಲದೆ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳಿಗೂ ಭದ್ರ ತಳಹದಿ ಕಲ್ಪಿಸುವಲ್ಲಿ ಹೆಸರುವಾಸಿಯಾಗಿದೆ, ತಾಂತ್ರಿಕತೆ ಆಧಾರಿತ ಅನ್ವೇಷಣೆ ಕ್ಷೇತ್ರದಲ್ಲಿ ರಾಜ್ಯ ಎಂದಿಗೂ ಮುಂಚೂಣಿಯಲ್ಲಿದೆ.
ದೇಶದ ನ್ಯಾನೋ ಟೆಕ್ ಹಬ್ ಬೆಂಗಳೂರು
ಐಐಎಸ್ಸಿ, ಜೆಎನ್‌ಸಿಎಎಸ್‌ಆರ್, ಎನ್‌ಸಿಬಿಎಸ್, ಸಿಇಎನ್‌ಎಸ್‌ನಂತಹ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ನೆರವಿನೊಂದಿಗೆ, ದೇಶದ ನ್ಯಾನೋ ಟೆಕ್ ಹಬ್ ಆಗಿ ಬೆಂಗಳೂರು ರೂಪುಗೊಳ್ಳುವ ಪೂರ್ಣ ವಿಶ್ವಾಸವಿದೆ.
ಮುಂಬರುವ ವರ್ಷಗಳಲ್ಲಿ ಬೆಂಗಳೂರು ಆಧುನಿಕ ತಾಂತ್ರಿಕ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ನಿಭಾಯಿಸಲಿದೆ.
ಆಹಾರ ಭದ್ರತೆ, ಇಂಧನ ಸುರಕ್ಷತೆ, ಶುದ್ಧ ಜಲ, ಮೂಲಸೌಕರ್ಯ, ಆರೋಗ್ಯ ಸೇವೆ, ಔಷಧ, ತ್ಯಾಜ್ಯವಸ್ತುಗಳ ನಿರ್ವಹಣೆ, ಪರಿಸರ ನಿರ್ವಹಣಾ ಕ್ಷೇತ್ರಗಳ ಸವಾಲುಗಳಿಗೆ ನ್ಯಾನೋ ಟೆಕ್ನಾಲಜಿ ಆಧಾರಿತ ಪರಿಹಾರ ಕಂಡುಕೊಳ್ಳಬೇಕಿದೆ.
ವಿಜ್ಞಾನಿಗಳು, ಇಂಜಿನಿಯರ್‌ಗಳಿಗೆ ಕರೆ
ಹೆಚ್ಚುತ್ತಿರುವ ನಗರೀಕರಣ, ಜನಸಂಖ್ಯೆ ಹೆಚ್ಚಳ ಹಾಗೂ ಬದಲಾಗುತ್ತಿರುವ ಜೀವನ ಶೈಲಿಯಿಂದ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳಿದ್ದು ಇವುಗಳಿಗೆ ನ್ಯಾನೋ ಟೆಕ್ನಾಲಜಿ ಆಧಾರಿತ ಪರಿಹಾರ ಸಂಶೋಧಿಸುವಲ್ಲಿ ವಿಜ್ಞಾನಿಗಳಿಗೆ ಮತ್ತು ಇಂಜಿನಿಯರ್‌ಗಳು ಮುಂದಾಗಬೇಕು ಎಂದರು.
ಹೊಸ ತಾಂತ್ರಿಕ ಕ್ಷೇತ್ರದ ಸಾಧ್ಯತೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಅಂತಾರಾಷ್ಟ್ರೀಯ ಸಂಶೋಧನಾ ಸಹಭಾಗಿತ್ವ ಅತ್ಯಗತ್ಯವಾಗಿದೆ, ಇದಕ್ಕಾಗಿ ಮಾಹಿತಿ ಹಾಗೂ ತಾಂತ್ರಿಕತೆಯ ಪರಸ್ಪರ ವಿಚಾರ ವಿನಿಮಯದಿಂದ ಸಮಾಜದ ಶ್ರೇಯೋಭಿವೃದ್ಧಿಗೆ ಪೂರಕ ಪ್ರತಿಭೆಗಳನ್ನು ಬೆಳೆಸುವ ಅಗತ್ಯವಿದೆ, ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮ ಸಹಭಾಗಿತ್ವಕ್ಕೆ ಸಾಕಷ್ಟು ಅವಕಾಶ ಕಲ್ಪಿಸಲಿದೆ.
ಯುವ ಉದ್ಯಮಿಗಳು ಕ್ಷೇತ್ರದ ತಜ್ಞರ ಮತ್ತು ದಿಗ್ಗಜರ ಸಹಕಾರ ಮತ್ತು ಸಹಭಾಗಿತ್ವದ ಸದುಪಯೋಗಪಡೆದು ಕರ್ನಾಟಕದಲ್ಲಿ ಹೊಸ ಉದ್ಯಮ ಆರಂಭಿಸಬೇಕು ಎಂದು ಮನವಿ ಮಾಡಿದರು.
ಬೆಂಗಳೂರು ಇಂಡಿಯಾ ನ್ಯಾನೋ ಸೈನ್ಸ್ ಪ್ರಶಸ್ತಿಗೆ ಭಾಜನರಾಗಿರುವ ಪ್ರೊ.ಅರಿಂದಮ್ ಘೋಷ್ ಅವರಿಗೆ ಮುಖ್ಯಮಂತ್ರಿ ಅಭಿನಂದನೆ ಸಲ್ಲಿಸಿದರು.