ಬೆಂಗಳೂರು:ಬಿಜೆಪಿ ಮತ್ತು ಜೆಡಿಎಸ್ ನಾಳೆ (ಆಗಸ್ಟ್ 3) ಹಮ್ಮಿಕೊಂಡಿರುವ ’ಮೈಸೂರು ಚಲೋ’ ಪಾದಯಾತ್ರೆಗೆ ಅನುಮತಿ ಕೊಡಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿಯುತವಾಗಿ ಪಾದಯಾತ್ರೆ ಮಾಡುತ್ತೇವೆ ಎಂಬುದಾಗಿ ಹೇಳಿದ್ದಾರೆ, ಆದ್ದರಿಂದ ಪಾದಯಾತ್ರೆಗೆ ಅನುಮತಿ ಕೊಡಲು ಸರ್ಕಾರ ನಿರ್ಧರಿಸಿದೆ ಎಂದರು.
ಸರ್ಕಾರದ ಸಮ್ಮತಿ
ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಹೋರಾಟವನ್ನು ಮತ್ತಷ್ಟು ದೊಡ್ಡಮಟ್ಟಕ್ಕೆ ಕೊಂಡೊಯ್ಯಲು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ನಾಳೆ ನಡೆಸಲು ಉದ್ದೇಶಿಸಿರುವ ಮೈಸೂರು ಚಲೋ ಪಾದಯಾತ್ರೆಗೆ ಅನುಮತಿ ನೀಡಲು ಸರ್ಕಾರ ಕೊನೆಗೂ ಸಮ್ಮತಿಸಿದೆ.
ಈ ಮೊದಲು ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಅನುಮತಿ ಕೊಡದಿರಲು ಸರ್ಕಾರ ತೀರ್ಮಾನಿಸಿತ್ತು.
ಇಂದು ಬೆಳಗ್ಗೆಯಷ್ಟೇ ಮಾತನಾಡಿದ್ದ ನಗರ ಪೊಲಿಸ್ ಆಯುಕ್ತ ಬಿ.ದಯಾನಂದ್, ಪಾದಯಾತ್ರೆಗೆ ಬೆಂಗಳೂರಿನಲ್ಲಿ ಅನುಮತಿ ನೀಡುವುದಿಲ್ಲ ಎಂದಿದ್ದರು.
ಆತುರದಲ್ಲಿ ಶೋಕಾಸ್ ನೋಟಿಸ್
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ಅಕ್ರಮ ನಿವೇಶನ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಾ.ಪರಮೇಶ್ವರ್, ಆತುರಾತುರವಾಗಿ ರಾಜ್ಯಪಾಲರು ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ ಎಂಬ ಅನುಮಾನವಿದೆ, ಏಕೆಂದರೆ ಜುಲೈ ೨೬ರಂದು ಟಿ.ಜೆ.ಅಬ್ರಹಾಂ ರಾಜ್ಯಪಾಲರಿಗೆ ಮನವಿ ಕೊಟ್ಟಿದ್ದರು, ದೂರು ಪಡೆದ ದಿನವೇ ನೋಟಿಸ್ ಕಳುಹಿಸಿದ್ದಾರೆ, ಬಹುಶಃ ಒತ್ತಡದಲ್ಲಿ ನೊಟೀಸ್ ಕೊಟ್ಟಿರಬಹುದು ಎನಿಸುತ್ತದೆ ಎಂದರು.
ನೋಟಿಸ್ ಹಿಂಪಡೆಯುವಂತೆ ರಾಜ್ಯಪಾಲರಿಗೆ ಮನವಿ ಮಾಡಿಕೊಳ್ಳುವ ಸಂಪುಟದ ನಿರ್ಣಯವನ್ನು ನಿನ್ನೆ ರಾತ್ರಿಯೇ ರಾಜಭವನಕ್ಕೆ ಕಳುಹಿಸಲು ತೀರ್ಮಾನಿಸಲಾಗಿತ್ತು, ಆದರೆ, ರಾಜ್ಯಪಾಲರು ರಾಜ್ಯದಲ್ಲಿ ಇಲ್ಲದಿರುವ ಹಿನ್ನೆಲೆಯಲ್ಲಿ ರಾಜಭವನದ ಕಚೇರಿಗೆ ತಲುಪಿಸಿರಬಹುದು.
ರಾಜ್ಯಪಾಲರ ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಈ ಮೊದಲೇ ಉತ್ತರ ನೀಡಿದ್ದಾರೆ, ಈ ಬೆಳವಣಿಗೆ ನಂತರ ರಾಜ್ಯಪಾಲರಿಂದ ಶೋಕಾಸ್ ನೋಟಿಸ್ ಬಂದಿದೆ.
ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುವುದಿಲ್ಲವೆಂಬ ವಿಶ್ವಾಸವಿದೆ, ಒಂದು ವೇಳೆ ಕೊಟ್ಟರೂ ಅದನ್ನು ಕಾನೂನು ಪ್ರಕಾರ ಎದುರಿಸುತ್ತೇವೆ, ರಾಜ್ಯಪಾಲರು ಏನೇ ನಿರ್ಧಾರ ಕೈಗೊಂಡರೂ ನಾವು ಎದುರಿಸುತ್ತೇವೆ, ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದರು.