ಬೆಂಗಳೂರು:ರಾಜ್ಯದ ಸಂಪತ್ತು ಲೂಟಿ ಮಾಡಿ ದೆಹಲಿ ಕಾಂಗ್ರೆಸ್ ನಾಯಕರಿಗೆ ಒದಗಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನಿರತವಾಗಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಇಂದಿಲ್ಲಿ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ನಾಯಕರಿಗೆ ಸಂಪ್ಮೂಲ ಒದಗಿಸಲು ಹಗರಣಗಳ ಮೇಲೆ ಹಗರಣ ಮಾಡುತ್ತಿದೆ.
ಹಗರಣಗಳ ಸರಮಾಲೆ ಹೊತ್ತಿರುವ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಮೈಸೂರು ಚಲೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಎನ್‌ಡಿಎ ಮುಖಂಡರು ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ತರಾಟೆಗೆ ತೆಗೆದುಕೊಂಡರು.
ಸರ್ಕಾರ ಕಿತ್ತೊಗೆಯುವ ಶಕ್ತಿ
ಈ ಪಾದಯಾತ್ರೆ ಕರ್ನಾಟಕದ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಶಕ್ತಿ ಹೊಂದಿದೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬಿಡಿ ನಿವೇಶನಗಳ ಹಂಚಿಕೆಯಲ್ಲಿ ನಾಲ್ಕರಿಂದ ಐದು ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿದೆ.
ಮಹರ್ಷಿ ವಾಲ್ಮೀಕಿ ನಿಗಮದಲ್ಲಿನ ದಲಿತರ ಹಣ ನುಂಗಿ ಹಾಕಿದ್ದಾರೆ, ಗಾಂಧಿ ಕುಟುಂಬಕ್ಕೆ ಕಪ್ಪಕಾಣಿಕೆ ನೀಡಲು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದಾರೆ.
ಪಾದಯಾತ್ರೆ ಅಂತಿಮಗೊಳ್ಳುವ ಮುನ್ನವೇ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು.
ಕ್ರಿಮಿನಲ್ ಪ್ರೊಸೀಜರ್
ಈ ಸರ್ಕಾರದ ವಿರುದ್ಧ ಬಂದಿರುವ ಭ್ರಷ್ಟಾಚಾರ ಆರೋಪದ ಬಗ್ಗೆ ರಾಜ್ಯಪಾಲರು ಕೂಲಂಕಷವಾಗಿ ಪರಿಶೀಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಪ್ರೊಸೀಜರ್ ದಾಖಲಿಸಲು ನೋಟಿಸ್ ಜಾರಿ ಮಾಡಿದ್ದಾರೆ.
ಈ ನೋಟಿಸ್ ಅನ್ನು ಸಿದ್ದರಾಮಯ್ಯ ಅವರು ಪ್ರಶ್ನಿಸುತ್ತಿದ್ದಾರೆ, ನಾವು ಒಗ್ಗಟ್ಟಾಗಿ ಪಾದಯಾತ್ರೆ ಕೈಗೊಳ್ಳುತ್ತಿರುವುದು ಈ ಸರ್ಕಾರದ ಜಂಘಾಬಲ ಉಡುಗಿಸಿದೆ.
ಕಾಂಗ್ರೆಸ್‌ನವರು ಕಟ್ಟುಕಥೆ ಹೇಳುತ್ತಿದ್ದಾರೆ, ನಮಗೇ ಧಮ್ಕಿ ಹಾಕುತ್ತಿದ್ದಾರೆ, ಈ ಸರ್ಕಾರವನ್ನು ಕಿತ್ತೊಗೆಯುವವರೆಗೂ ವಿಶ್ರಮಿಸುವುದಿಲ್ಲ.
ಸಮಾಜವಾದಿ ಮುಖವಾಡ ಕಳಚಿದೆ
ಸಿದ್ದರಾಮಯ್ಯ ಅವರ ಸಮಾಜವಾದಿ ಮುಖವಾಡ ಕಳಚಿಬಿದ್ದಿದೆ, ನಮ್ಮ ಹೋರಾಟ ಯಾವ ವ್ಯಕ್ತಿಯ ವಿರುದ್ಧವಲ್ಲ, ಭ್ರಷ್ಟಾಚಾರದ ವಿರುದ್ಧ ಎಂದರು.
ಕುಂಟುನೆಪ ಹೇಳಿಕೊಂಡು ಅಧಿಕಾರದಲ್ಲಿ ಮುಂದುವರೆಯಬೇಡಿ, ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸಿ, ಬಿಜೆಪಿ-ಜೆಡಿಎಸ್ ಸರ್ಕಾರ ತರುವವರೆಗೂ ನಮ್ಮ ಹೋರಾಟ ನಿರಂತರ.
ನಮ್ಮ ಪಾದಯಾತ್ರೆಗೆ ಹೆದರಿ ಹೋರಾಟ ತಡೆಗಟ್ಟಲು ಕಾಂಗ್ರೆಸ್ ಹುನ್ನಾರ ನಡೆಸಿದೆ, ಈಗಾಗಲೇ ಸಭೆಗಳನ್ನು ಮಾಡುತ್ತಿದ್ದಾರೆ, ಇಂತಹ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ.
ಭ್ರಷ್ಟಾಚಾರ ಹಾಸು ಹೊಕ್ಕಾಗಿದೆ
ರಾಷ್ಟ್ರದಲ್ಲಿ ಎಲ್ಲಿಯೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಅವರಿಗೆ ಭ್ರಷ್ಟಾಚಾರ ಹಾಸು ಹೊಕ್ಕಾಗಿದೆ, ಯುಪಿಎ ಅಧಿಕಾರದಲ್ಲಿ ಇದ್ದಾಗ ಭ್ರಮ್ಮಾಂಡ ಭ್ರಷ್ಟಾಚಾರ ನಡೆದಿತ್ತು, ಆ ನಂತರ ಬಂದ ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ಸರ್ಕಾರ ಕಾಂಗ್ರೆಸ್‌ನವರ ಹಗರಣಗಳನ್ನು ಬಯಲಿಗೆಳೆದು ಕೆಲವರಿಗೆ ಶಿಕ್ಷೆ ಕೊಡಿಸಿದೆ.
ಕರ್ನಾಟಕದಲ್ಲೂ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದರು.
ಇದಕ್ಕೂ ಮುನ್ನ ಬೆಂಗಳೂರು ನಗರದ ಹೊರವಲಯದಲ್ಲಿ ನಗಾರಿ ಬಾರಿಸುವ ಮೂಲಕ ಪಾದಯಾತ್ರೆ ಉದ್ಘಾಟಿಸಿದರು.
ಆ ನಂತರ ಬಿ.ವೈ.ವಿಜಯೇಂದ್ರ ಹಾಗೂ ನಿಖಿಲ್ ಕುಮಾರಸ್ವಾಮಿ ನಾಯಕತ್ವದಲ್ಲಿ ಪಾದಯಾತ್ರೆ ಮುಂದುವರಿಯಿತು.
ಮೊದಲ ದಿನ ಸುಮಾರು 20 ಕಿಲೋ ಮೀಟರ್ ಪಾದಯಾತ್ರೆ ನಡೆದು ದಾರಿಯುದ್ದಕ್ಕೂ ಬಿಜೆಪಿ ಮತ್ತು ಜೆಡಿಎಸ್ ಮುಖಂಡರನ್ನು ಕಾರ್ಯಕರ್ತರು ಅಲ್ಲಲ್ಲಿ ಪಟಾಕಿ ಸಿಡಿಸಿ ಸ್ವಾಗತಿಸಿದರು.