ಮುಡಾ ಹಗರಣ: ಕಾನೂನು ತಜ್ಞರೊಂದಿಗೆ ಸಮಾಲೋಚನೆ
ಬೆಂಗಳೂರು:ಮುಡಾ ಬಿಡಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿದರೆ ಕಾನೂನು ಹೋರಾಟದ ಜೊತೆಗೆ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆಯೂ ರಾಷ್ಟ್ರಪತಿಗಳಿಗೆ ಮನವಿ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ.
ಪ್ರಕರಣ ತೀವ್ರತೆ ಪಡೆಯುತ್ತಿದ್ದಂತೆ ನಗರಕ್ಕೆ ಧಾವಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ.
ರಾಜ್ಯಪಾಲರ ನಡೆಯ ಬಗ್ಗೆ ತಾವು ಹಿರಿಯ ವಕೀಲರಾದ ಪಿ.ಚಿದಂಬರಂ ಹಾಗೂ ಅಭಿಷೇಕ್ ಮನುಸಿಂಘ್ವಿ ಸೇರಿದಂತೆ ಪ್ರಮುಖ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದು, ಅವರ ಮಾರ್ಗದರ್ಶನದಂತೆ ಹೋರಾಟ ನಡೆಸೋಣ ಎಂದು ಮುಖ್ಯಮಂತ್ರಿ ಅವರಿಗೆ ವೇಣುಗೋಪಾಲ್ ತಿಳಿಸಿದ್ದಾರೆ.
ಪ್ರಾಸಿಕ್ಯೂಷನ್ ಸಾಧ್ಯತೆ
ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಕೊಡುವ ಸಾಧ್ಯತೆ ದಟ್ಟವಾಗಿದೆ, ನಾವೆಲ್ಲರೂ ಮಾನಸಿಕವಾಗಿ ಸಿದ್ಧರಾಗೋಣ, ಪ್ರಾಸಿಕ್ಯೂಷನ್‌ಗೆ ಕೊಟ್ಟಲ್ಲಿ ಕಾನೂನು ಹೋರಾಟ ನಡೆಸೋಣ.
ಟಿ.ಜೆ. ಅಬ್ರಹಾಂ ನ್ಯಾಯಾಲಯಕ್ಕೆ ಹೋದರೆ ನಾವೂ ಹೋಗೋಣ, ನ್ಯಾಯಾಲಯದಿಂದ ನೋಟಿಸ್ ಬಂದಲ್ಲಿ ಆಕ್ಷೇಪಣೆ ಸಲ್ಲಿಸೋಣ, ಇದಕ್ಕಾಗಿ ಸಮರ್ಥ ವಕೀಲರನ್ನ ನೇಮಿಸೋಣ.
ಮುಖ್ಯಮಂತ್ರಿ ವಿರುದ್ಧ ಯಾವುದೇ ತನಿಖೆ ನಡೆಯದಿರುವಾಗ ತಪ್ಪು ಮಾಡಿರೋದೆಲ್ಲಿ ಎಂದು ಪ್ರಶ್ನಿಸೋಣ, ಇದು ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳ ವಿಚಾರ ಆಗಿರದೆ, ಮುಖ್ಯಮಂತ್ರಿ ವರ್ಸಸ್ ಸರ್ಕಾರ ಎನ್ನುವಂತೆ ನೋಡಿಕೊಳ್ಳೋಣ.
ಸುಪ್ರೀಂಕೋರ್ಟ್‌ಗೂ ಹೋಗಲು ನಿರ್ಧಾರ
ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಬರದಿದ್ದರೆ ಸುಪ್ರೀಂಕೋರ್ಟ್‌ಗೂ ಹೋಗೋಣ, ರಾಜ್ಯಪಾಲರನ್ನ ವಾಪಸ್ ಕರೆಸಿಕೊಳ್ಳಿ ಎಂಬ ಮನವಿಯನ್ನೂ ರಾಷ್ಟ್ರಪತಿ ಅವರಿಗೆ ಮಾಡೋಣ.
ತಮಿಳುನಾಡು, ಪಶ್ಚಿಮಬಂಗಾಳ, ಕೇರಳ, ದೆಹಲಿ ರಾಜ್ಯಗಳಂತೆ ರಾಜ್ಯಪಾಲರ ವಿರುದ್ಧ ನಾವೂ ಹೋರಾಡೋಣ, ರಾಜ್ಯಪಾಲರ ನಿರ್ಧಾರ ಕಾನೂನಾತ್ಮಕವೇ ಎಂಬುದಾಗಿ ನಾವು ಪ್ರಶ್ನಿಸೋಣ.
ನ್ಯಾಯಾಲಯದಲ್ಲಿ ಹೋರಾಡೋಣ, ರಾಜ್ಯಪಾಲರ ನಡೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯೋಣ, ಜೊತೆಗೆ ಜನತಾ ನ್ಯಾಯಾಲಯದ ಮುಂದೆಯೂ ತೆಗೆದುಕೊಂಡು ಹೋಗಿ ಹೋರಾಟ ಮಾಡೋಣ.
ಪ್ರತಿಷ್ಠೆಗೆ ಧಕ್ಕೆ ಷಡ್ಯಂತ್ರ
ತಪ್ಪದೆ ಕಾನೂನು ಹೋರಾಟ ಮುಂದೆವರೆಸೋಣ, ಮುಖ್ಯಮಂತ್ರಿ ಹಾಗೂ ಸರ್ಕಾರದ ಪ್ರತಿಷ್ಠೆಗೆ ಧಕ್ಕೆ ತರುವ ಷಡ್ಯಂತ್ರಕ್ಕೆ ತೆರೆ ಎಳೆಯೋಣ, ಇದರ ಜೊತೆಯಲ್ಲೇ ಬಿಜೆಪಿ, ಜೆಡಿಎಸ್ ಕುತಂತ್ರದ ವಿರುದ್ಧವೂ ಹೋರಾಟ ನಡೆಸಲು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಎಂತಹ ಪರಿಸ್ಥಿತಿಯಲ್ಲೂ ಸಿದ್ದರಾಮಯ್ಯ ಬೆಂಬಲಕ್ಕೆ ಎಲ್ಲಾ ಸಚಿವರು, ನಾಯಕರು ನಿಲ್ಲಬೇಕು, ಜೊತೆಗೆ ರಾಜಕೀಯ ಹಾಗೂ ಕಾನೂನಾತ್ಮಕ ಹೋರಾಟಕ್ಕೂ ಮುಂದಾಗಲು ನಾಯಕರು ತೀರ್ಮಾನಿಸಿದ್ದಾರೆ.