ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಈ ಹಿಂದೆ ಡಿ-ನೋಟಿಫೈ ಮಾಡಿಸಿರುವ ಆರೋಪ ರಾಜಭವನದ ಅಂಗಳಕ್ಕೆ ತಲುಪಿದೆ.
ಈ ಪ್ರಾಧಿಕಾರದ ವತಿಯಿಂದಲೇ ಮುಖ್ಯಮಂತ್ರಿ ಅವರು ತಮ್ಮ ಕುಟುಂಬಕ್ಕೆ ಕೋಟ್ಯಂತರ ರೂ. ಬೆಲೆ ಬಾಳುವ ಬಿಡಿ ನಿವೇಶನಗಳನ್ನು ಪಡೆದ್ದಾರೆ ಎಂಬ ಎರಡು ಪ್ರತ್ಯೇಕ ದೂರುಗಳು ದಾಖಲಾಗಿ ರಾಜ್ಯಪಾಲರು, ಮುಖ್ಯಮಂತ್ರಿ ಅವರಿಂದ ವಿವರಣೆ ಕೇಳಿದ ಬೆನ್ನಲ್ಲೇ ಮತ್ತೊಂದು ದೂರು ದಾಖಲಾಗಿದೆ.
ಡಿ-ನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದೂರು ಸಲ್ಲಿಸುತ್ತಾರೆಂಬ ಮಾಹಿತಿ ಬರುತ್ತಿದ್ದಂತೆ ಮುಖ್ಯಮಂತ್ರಿ ಅವರು ಇಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗೊಳ್ಳಲಿದ್ದ ಮೂರು ದಿನದ ಪ್ರವಾಸ ರದ್ದು ಮಾಡಿ, ಸೋಮವಾರ ರಾತ್ರಿಯೇ ದಿಢೀರನೆ ಮೈಸೂರಿಗೆ ತೆರಳಿದ್ದರು.
30 ವರ್ಷ ಬಳಿಕ ಡಿ-ನೋಟಿಫೈ
ಮೈಸೂರು ತಾಲ್ಲೂಕು ವರುಣಾದ ಉತ್ತನಹಳ್ಳಿಯಲ್ಲಿ ಆಶ್ರಯ ಮನೆಗಳಿಗಾಗಿ ಭೂಸ್ವಾಧೀನ ಮಾಡಿದ್ದ ಜಮೀನನ್ನು ಮೂವತ್ತು ವರ್ಷದ ಬಳಿಕ ಡಿ-ನೋಟಿಫೈ ಮಾಡುವಂತೆ ಸಿದ್ದರಾಮಯ್ಯ ಪತ್ರ ಬರೆದಿದ್ದರು ಎನ್ನುವುದೇ ಗುರುತರ ಆರೋಪ.
ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಎಂಬುವರು ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ಸಮೇತ ರಾಜ್ಯಪಾಲರಿಗೆ ಇಂದು ದೂರು ನೀಡಿದ್ದಾರೆ.
ಮರಪ್ಪ ಹೆಸರಿಗೆ 1.39 ಎಕರೆ
ಮರಪ್ಪ ಎಂಬುವರ ಹೆಸರಿಗೆ 1.39 ಎಕರೆ ಜಮೀನು ಡಿ-ನೋಟಿಫೈ ಮಾಡುವಂತೆ ಸಿದ್ದರಾಮಯ್ಯ ಶಿಫಾರಸು ಮಾಡಿದ್ದರು.
ಈ ಜಮೀನಿಗೂ ಮರಪ್ಪ ಎಂಬುವವರಿಗೂ ಯಾವುದೇ ಸಂಬಂಧ ಇಲ್ಲ, ನಕಲಿ ದಾಖಲೆ ಸೃಷ್ಠಿಸಿ ನಂತರ ಅವರ ಹೆಸರಿನಲ್ಲಿ ಡಿ-ನೋಟಿಫೈ ಮಾಡಲಾಗಿದೆ.
ಸಿದ್ದರಾಮಯ್ಯ ಅವರ ಪತ್ರ ಆಧರಿಸಿ 14 ತಿಂಗಳ ಬಳಿಕ 1.39 ಎಕರೆಯನ್ನು ಅಂದಿನ ಮೈಸೂರು ಜಿಲ್ಲಾಧಿಕಾರಿ ಅವರು ಡಿ-ನೋಟಿಫೈ ಮಾಡಿದ್ದಾರೆ.
ವಾರಸುದಾರರಲ್ಲದವರಿಗೆ ಡಿ-ನೋಟಿಫೈ
ನಕಲಿ ದಾಖಲೆ ಆಧಾರದ ಮೇಲೆ ವಾರಸುದಾರರಲ್ಲದವರಿಗೆ ಡಿ-ನೋಟಿಫೈ ಮಾಡಿಸುವಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರುದಾರರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.