ದೂರುದಾರ ಟಿ.ಜೆ.ಅಬ್ರಹಾಂರಿಂದ ರಾಜ್ಯಪಾಲರಿಗೆ ಹೆಚ್ಚಿನ ಮಾಹಿತಿ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬ ಮುಡಾದಿಂದ ಪಡೆದ ಬಿಡಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ದೂರುದಾರ ಟಿ.ಜೆ.ಅಬ್ರಹಾಂ ಅವರಿಂದ ರಾಜ್ಯಪಾಲ ಥಾವರ್‌ಚಂದ್ ಗೆಲ್ಹೋಟ್ ಇಂದು ಮತ್ತಷ್ಟು ಮಾಹಿತಿ ಪಡೆದಿದ್ದಾರೆ.
ಅಬ್ರಹಾಂ ಅವರನ್ನು ರಾಜಭವನಕ್ಕೆ ಕರೆಸಿಕೊಂಡ ರಾಜ್ಯಪಾಲರು, ಸುಮಾರು 90 ನಿಮಿಷಗಳ ಕಾಲ ಮುಡಾ ಹಗರಣ ಹಾಗೂ ಅಬ್ರಹಾಂ ವಿರುದ್ಧ ಮುಖ್ಯಮಂತ್ರಿ ಮತ್ತು ಸರ್ಕಾರ ಮಾಡಿರುವ ದೂರಿನ ಬಗ್ಗೆಯೂ ವಿವರಣೆ ಪಡೆದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ರಹಾಂ ನೀಡಿದ ಮತ್ತಷ್ಟು ದಾಖಲೆ ಹಾಗೂ ಆತ ಮುಡಾಗೆ ನೀಡಿರುವ ಅರ್ಜಿ ಮತ್ತು ಲೋಕಾಯುಕ್ತರಿಗೆ ನೀಡಿರುವ ದೂರಿಗೆ ಸಂಬಂಧಿಸಿದಂತೆಯೂ ಮಾಹಿತಿ ಪಡೆದುಕೊಂಡರು.
ಅಬ್ರಹಾಂ ದೂರಿನ ಮೇಲೆ ಸರ್ಕಾರಕ್ಕೆ ನೀಡಿದ್ದ ನೋಟಿಸ್‌ಗೆ ಬಂದಿರುವ ಎರಡು ಪತ್ರಗಳಲ್ಲಿ ತಮಗೆ ಎದುರಾದ ಸಂಶಯಗಳ ಬಗ್ಗೆ ರಾಜ್ಯಪಾಲರು ವಿವರಣೆ ಪಡೆದರೆನ್ನಲಾಗಿದೆ.
ಈ ಸಂದರ್ಭದಲ್ಲಿ ಕಾನೂನು ತಜ್ಞರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದು, ಅವರ ನಡುವೆ ನಡೆದ ಕಲಾಪದ ಪೂರ್ಣ ವಿವರ ಲಭ್ಯವಾಗಿಲ್ಲ.
ರಾಜ್ಯಪಾಲರನ್ನು ಭೇಟಿ ಮಾಡಿ ರಾಜಭವನದಿಂದ ಹೊರಬಂದ ಅಬ್ರಹಾಂ, ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುತ್ತಾರೆಂಬ ವಿಶ್ವಾಸವಿದೆ.
ಭೇಟಿ ಸಂದರ್ಭದಲ್ಲಿ ನಾನು ಸಾಕಷ್ಟು ವಿವರಣೆ ನೀಡಿದ್ದೇನೆ, ಅದಕ್ಕೆ ರಾಜ್ಯಪಾಲರಿಂದ ನ್ಯಾಯ ದೊರೆಯಲಿದೆ.
ನನ್ನಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೇಳುತ್ತಾರೆ ಎಂದರೆ, ಅವರಿಗೆ ಇದನ್ನು ಮುಂದುವರೆಸಲು ಆಸಕ್ತಿ ಇದೆ ಎಂದಲ್ಲವೆ.
ನನ್ನ ವಿರುದ್ಧ ಮುಖ್ಯಮಂತ್ರಿ ಹಾಗೂ ಸಂಪುಟ ಕೆಲವು ಆರೋಪಗಳನ್ನು ಮಾಡಿದೆ, ಅದಕ್ಕೆ ಸಂಬಂಧಿಸಿದಂತೆಯೂ ನಾನು ಸ್ಪಷ್ಟನೆ ನೀಡಿದ್ದೇನೆ.
ನನ್ನ ವಿರುದ್ಧ ರಾಜ್ಯದ ಯಾವುದೇ ಭಾಗದಲ್ಲಿ ಯಾವುದೇ ದೂರು ಇಲ್ಲ, ನಾನು ಸರ್ಕಾರಕ್ಕೆ ಸವಾಲು ಹಾಕುತ್ತೇನೆ, ಪ್ರಕರಣ ದಾಖಲಾಗಿದ್ದರೆ ಅದನ್ನು ಹುಡುಕಿಕೊಡಲಿ ಎಂದರು.
ಇದಕ್ಕೂ ಮುನ್ನ ಮುಡಾ ಬಿಡಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಂದಿರುವ ಆರೋಪಕ್ಕೆ ರಾಜ್ಯಪಾಲರು ಎರಡನೇ ದಿನವಾದ ಇಂದೂ ಅಧಿಕಾರಿಗಳು ಮತ್ತು ಕಾನೂನು ತಜ್ಞರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ಕರ್ನಾಟಕದ ಅಡ್ವೋಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದ ಹಿರಿಯ ನ್ಯಾಯವಾದಿ ಹಾಗೂ ಸುಪ್ರೀಂಕೋರ್ಟ್‌ನ ಹಿರಿಯ ವಕೀಲರೊಬ್ಬರನ್ನು ರಾಜಭವನಕ್ಕೆ ಕರೆಸಿಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನೀಡಿರುವ ಉತ್ತರಗಳ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿ, ಅಧಿಕಾರಿಗಳ ಸಮ್ಮುಖದಲ್ಲೇ ಕೆಲವು ಮಾಹಿತಿ ಪಡೆದುಕೊಂಡರು.
ಇದಾದ ನಂತರ ರಾಜ್ಯಪಾಲರಿಗೆ ಪ್ರಕರಣ ಸಂಬಂಧ ಎದುರಾದ ಸಂಶಯಗಳ ಬಗ್ಗೆಯೂ ಕಾನೂನು ತಜ್ಞರೊಂದಿಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸಿದರು.
ರಾಜಭವನ ನೀಡಿದ ನೋಟಿಸ್‌ಗೆ ಸರ್ಕಾರ ಪ್ರತ್ಯೇಕವಾಗಿ ಮೂರು ಸಮಜಾಯಿಷಿ ನೀಡಿದೆ, ಅದರಲ್ಲಿ ಮುಖ್ಯಮಂತ್ರಿ ಅವರು, ಸ್ವಯಂ ಪ್ರೇರಿತವಾಗಿ 60 ಪುಟಗಳ ಉತ್ತರ ಹಾಗೂ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನ ಹಾಗೂ ಮನವಿ ಕುರಿತು ಇಡೀ ದಿನ ಪರಿಶೀಲನೆ ಮತ್ತು ಚರ್ಚೆಯೇ ನಡೆಯಿತು.
ತದ ನಂತರ ಪ್ರಮುಖ ದೂರುದಾರ, ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರನ್ನು ಸಂಪರ್ಕಿಸಿದ ರಾಜಭವನ, ಮಧ್ಯಾನ್ಹ 3 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡುವಂತೆ ಸೂಚಿಸಿತು.
ರಾಜಭವನಕ್ಕೆ ಆಗಮಿಸಿದ ಅಬ್ರಹಾಂ ಅವರಿಂದ, ರಾಜ್ಯಪಾಲರು ಮತ್ತು ಕಾನೂನು ತಜ್ಞರು ತಮ್ಮಲ್ಲಿ ಮೂಡಿದ್ದ ಸಂಶಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಣೆ ಪಡೆದುಕೊಂಡರು.