ಬೆಂಗಳೂರು:ದೇವರಾಜ ಅರಸು ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ರೀತಿಯಲ್ಲೇ ಸಿದ್ದರಾಮಯ್ಯ ಅವರನ್ನೂ ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಲು ಸಂಚು ನಡೆಸುತ್ತಿರುವ ಕೋಮುವಾದಿ ಶಕ್ತಿಗಳ ವಿರುದ್ಧ ಮೈಸೂರಿನಲ್ಲಿ ಇದೇ ಶುಕ್ರವಾರ ಸಿದ್ದರಾಮಯ್ಯ ಬೆಂಬಲಿಗರು ಬೃಹತ್ ಜನಾಂದೋಲನ ಸಭೆ ನಡೆಸಲಿದ್ದಾರೆ.
ರಾಜ್ಯದ ಮೂಲೆ ಮೂಲೆಗಳಿಂದ ಪ್ರತಿಭಟನಾ ಸಭೆಗೆ ಹಾಜರಾಗಿ ಕೋಮು ಶಕ್ತಿಗಳ ವಿರುದ್ಧ ಬಲ ಪ್ರದರ್ಶಿಸೋಣ ಎಂದು ಕರೆ ನೀಡಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ವಿರೋಧಿ ಸಮಾವೇಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾದಲ್ಲಿ ತಮ್ಮ ಕುಟುಂಬದವರಿಗೆ 14 ನಿವೇಶನಗಳನ್ನು ಪಡೆದಿದ್ದಾರೆ ಎಂಬುದೂ ಸೇರಿದಂತೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಹಾಗೂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ, ಬಿಜೆಪಿ ಮತ್ತು ಜೆಡಿಎಸ್ ಬೆಂಗಳೂರು-ಮೈಸೂರು ಪಾದಯಾತ್ರೆ ನಡೆಸುತ್ತಿರುವವರ ವಿರುದ್ಧ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಆಗಸ್ಟ್ 3ರಿಂದ ಆರಂಭಗೊಂಡಿರುವ ಬಿಜೆಪಿ-ಜೆಡಿಎಸ್ ಪಾದಯಾತ್ರೆ 9ಕ್ಕೆ ಅಂತ್ಯಗೊಂಡು ಆಗಸ್ಟ್ 10ರ ಶನಿವಾರದಂದು ಎನ್‌ಡಿಎ ಮೈತ್ರಿ ಕೂಟ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಇದಕ್ಕೂ ಮುನ್ನವೇ ಆಗಸ್ಟ್ 9ರಂದು ಮೈಸೂರಿನ ಮಹಾರಾಜ ಕಾಲೇಜ್ ಆವರಣದಲ್ಲಿ ಶಕ್ತಿ ಹಾಗೂ ಸತ್ಯ ಸಂದೇಶ ಸಾರುವ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ
ಸಮಾವೇಶದ ಮೂಲಕ ರಾಜ್ಯಪಾಲರಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳನ್ನು ಅಂತ್ಯಗೊಳಿಸೋಣ ಇದಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಸಿದ್ದರಾಮಯ್ಯ ಅಭಿಮಾನಿಗಳೆಲ್ಲಾ ಪಾಲ್ಗೊಳ್ಳೋಣ.
ತಮ್ಮ ಅಭಿಮಾನಿಗಳು ಸಿದ್ಧಪಡಿಸಿರುವ ವೇದಿಕೆ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಆಡಳಿತದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರಗಳನ್ನು ಜನರ ಮುಂದಿಡಲು ಹಾಗೂ ತಮ್ಮ ಮೇಲಿರುವ ಆರೋಪದಲ್ಲಿ ಹುರುಳಿಲ್ಲ ಎಂಬುದನ್ನು ಸಾಬೀತುಪಡಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ.
ಇತ್ತೀಚೆಗೆ ರಾಜ್ಯದಲ್ಲಿ ಕೋಮುವಾದಿಗಳು ಮತ್ತು ಜಾತಿವಾದಿ ಪಟ್ಟಭದ್ರ ಹಿತಾಸಕ್ತಿಗಳು ಅಧಿಕಾರದ ಖುರ್ಚಿ ಆಸೆಗಾಗಿ ಜನಪರ ಇರುವ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ ಎಂದು ಅವರ ಅಭಿಮಾನಿಗಳು ಮತ್ತು ಸಂಘಟನೆಗಳು ಆರೋಪಿಸಿವೆ.
ಕಪ್ಪು ಚುಕ್ಕೆ ಇಲ್ಲದ ನಾಯಕ
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ದೊಡ್ಡ ಮಟ್ಟದ ಷಡ್ಯಂತ್ರ ರೂಪಿಸಿದ್ದಾರೆ, ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ 15 ಬಾರಿ ರಾಜ್ಯ ಬಜೆಟ್ ಮಂಡಿಸಿರುವ, 40 ವರ್ಷಗಳ ಸುದೀರ್ಘ ರಾಜಕೀಯದಲ್ಲಿ ಹಲವು ಮಹತ್ವದ ಅಧಿಕಾರದ ಹುದ್ದೆಯಲ್ಲಿದ್ದರೂ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ನಾಯಕನ ವರ್ಚಸ್ಸಿಗೆ ಮಸಿ ಬಳಿಯಲು ಹೊರಟಿದ್ದಾರೆ.
ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಿಯೇ ಬಿಡುವ ಹುನ್ನಾರ ಮಾಡುತ್ತಿದ್ದಾರೆ, ಬಿಜೆಪಿ ಮತ್ತು ಜೆಡಿಎಸ್ ರಾಜ್ಯ ನಾಯಕರ ಕುತಂತ್ರಕ್ಕೆ ಆ ಪಕ್ಷದ ರಾಷ್ಟ್ರೀಯ ನಾಯಕರೂ ಕುಮ್ಮಕ್ಕು ನೀಡಿ, ರಾಜ್ಯಪಾಲರನ್ನು ಬಳಸಿಕೊಂಡು ಅಧಿಕಾರದಿಂದ ಕೆಳಗಿಳಿಸಲು ಹೊರಟಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಬಿ.ಎಲ್.ಸಂತೋಷ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆಯಲ್ಲಿನ ಪ್ರತಿಪಕ್ಷ ನಾಯಕ ಆರ್.ಅಶೋಕ್, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತಿತರರು ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ.
ರಾಜಕೀಯವಾಗಿ ಮುಗಿಸುವ ಹುನ್ನಾರ
ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಿಬಿಟ್ಟರೆ, ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಶಾಶ್ವತವಾಗಿ ಹಿಂದುಳಿದ ವರ್ಗಗಳನ್ನು ಅಧಿಕಾರದಿಂದ ದೂರ ಇಡಬಹುದು ಎಂಬುದು ಹುನ್ನಾರವಾಗಿದೆ.
ತಮ್ಮ ಮೇಲಿನ ಆರೋಪಕ್ಕೆ ಸ್ವತಃ ತನಿಖಾ ಆಯೋಗ ರಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದು ವಿರೋಧಿಗಳಿಗೆ ಅರ್ಥವಾಗಬೇಕು. ಈ ಹಿಂದೆಯೂ ಹಿಂದುಳಿದ ವರ್ಗಗಳ ನಾಯಕರಾದ ದೇವರಾಜ ಅರಸು, ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರಂಸಿಂಗ್ ಮತ್ತಿತರರ ವಿರುದ್ಧ ಇಂತಹುದೇ ಷಡ್ಯಂತ್ರ ರೂಪಿಸಲಾಗಿತ್ತು.
ಕೇಂದ್ರದ ನಾಯಕರುಗಳ ಬೆಂಬಲದಿಂದ ನಮ್ಮ ರಾಜ್ಯದ ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ನಾಯಕರು ಈ ಮಟ್ಟದ ಕೊಳಕು ರಾಜಕೀಯಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ.
ಇಂತಹ ಹಿಂದುಳಿದ, ದಲಿತ, ಅಲ್ಪಸಂಖ್ಯಾತ, ಶೋಷಿತರ ವಿರೋಧಿಗಳಿಗೆ ತಕ್ಕ ಪಾಠ ಕಲಿಸುವ ಅನಿವಾರ್ಯತೆ ರಾಜ್ಯದಲ್ಲಿ ನಿರ್ಮಾಣವಾಗಿದೆ, ಆದ್ದರಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.