ಮೈಸೂರು:ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ನೀಡಿರುವ ನೋಟಿಸ್‌ಗೆ ಈಗಾಗಲೇ ಉತ್ತರ ನೀಡಿದ್ದು, ಅದನ್ನು ಒಪ್ಪಿಕೊಳ್ಳುವ ನಂಬಿಕೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ವಿಷಯದಲ್ಲಿ ಕಾನೂನು ಪ್ರಕಾರ ನಡೆದುಕೊಂಡಿದ್ದು, ನಿವೇಶನ ಹಂಚಿಕೆಯಲ್ಲಿ ನಾನು ಯಾವುದೇ ಪ್ರಭಾವ ಬೀರಿಲ್ಲ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನನ್ನ ಪತ್ನಿಗೆ 2021ರಲ್ಲಿ ಬದಲಿ ನಿವೇಶನ ನೀಡಲಾಗಿದೆ ಎಂದರು.
ಪತ್ನಿ ಪರ ಕ್ರಮ ಕೈಗೊಂಡಿಲ್ಲ
2014ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ, ಮುಡಾ ಅಕ್ರಮವಾಗಿ ನಮ್ಮ ಜಮೀನು ಸ್ವಾಧೀನಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಬದಲಿ ನಿವೇಶನ ಕೋರಿ ನನ್ನ ಪತ್ನಿ ಅರ್ಜಿ ಸಲ್ಲಿಸಿದ್ದರು, ಆ ಸಂದರ್ಭದಲ್ಲಿ ನಾನು ಈ ಕುರಿತು ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಬಿಜೆಪಿ ಮತ್ತು ಜೆಡಿಎಸ್ ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ನನ್ನ ಮೇಲೆ ಆಪಾದನೆಗಳನ್ನು ಮಾಡುತ್ತಿವೆ, ಆಪರೇಶನ್ ಕಮಲದಿಂದಲೂ ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಾಗದ್ದರಿಂದ ಹೀಗೆ ಮಾಡುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕಳೆದ ಒಂದು ವರ್ಷದ ಅವಧಿಯಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿ, ಬಡವರ ಪರವಾಗಿ ಕೆಲಸ ಮಾಡುತ್ತಿರುವುದನ್ನು ಸಹಿಸಲು ವಿಪಕ್ಷಗಳಿಗೆ ಸಾಧ್ಯವಾಗುತ್ತಿಲ್ಲ.
ಗ್ಯಾರಂಟಿ ಯಶಸ್ಸಿನಿಂದ ಹತಾಶ
ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಸ್ವತಃ ಪ್ರಧಾನಿಯವರೇ ಹೇಳಿದ್ದರು, ಮೊದಲ ದಿನದಿಂದಲೂ ಗ್ಯಾರಂಟಿ ಯೋಜನೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಒಂದು ವೇಳೆ ಗ್ಯಾರಂಟಿ ಯೋಜನೆ ಆರಂಭಿಸಿದರೂ, ಅದನ್ನು ನಿಲ್ಲಿಸಿ ಬಿಡುತ್ತಾರೆ ಎಂದಿದ್ದರು, ಆದರೆ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದಿಂದ ಅವರು ಹತಾಶರಾಗಿದ್ದಾರೆ ಎಂದರು.
ಈ ವಯಸ್ಸಿನಲ್ಲಿ ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯುಡಿಯೂರಪ್ಪ ಅವರು ನ್ಯಾಯಾಲಯದ ದಯೆಯಿಂದ ಜೈಲು ಪಾಲಾಗದೆ ಬಚಾವಾಗಿದ್ದಾರೆ, ತಮ್ಮ ೮೨ನೇ ವಯಸ್ಸಿನಲ್ಲಿ ಇಂತಹ ಪ್ರಕರಣದಲ್ಲಿ ಚಾರ್ಜ್‌ಶೀಟ್ ಹಾಕಿಸಿಕೊಂಡಿರುವ ಅವರಿಗೆ ನನ್ನ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ.
ಅವರಿಗೆ ನೈತಿಕತೆ ಇದ್ದರೆ ಸಾರ್ವಜನಿಕ ಜೀವನದಿಂದ ನಿವೃತ್ತರಾಗಬೇಕು, ಅವರ ವಿರುದ್ಧ ೨೦ಕ್ಕೂ ಅಧಿಕ ಪ್ರಕರಣಗಳು ಇದ್ದು, ಈ ಕುರಿತು ವಿವರವಾದ ಮಾಹಿತಿ ನೀಡಲಿದ್ದೇನೆ.
ಯಡಿಯೂರಪ್ಪ ಆಡಳಿತಾವಧಿಯಲ್ಲಿ ಚೆಕ್ ಮೂಲಕ ಲಂಚ ಪಡೆದುಕೊಂಡಿದ್ದರು, ಅಕ್ರಮವಾಗಿ ಡಿ-ನೋಟಿಫಿಕೇಶನ್ ಮಾಡಿದ್ದರು, ನಾವು ಅಂತಹ ಯಾವುದೇ ಅಕ್ರಮ ಎಸಗಿಲ್ಲ, ವಿರೋಧ ಪಕ್ಷಗಳು ಸುಳ್ಳನ್ನು ನಿರಂತರವಾಗಿ ಹೇಳುವ ಮೂಲಕ ಸತ್ಯ ಮಾಡಲು ಸಾಧ್ಯವಿಲ್ಲ, ಸತ್ಯಕ್ಕೇ ಅಂತಿಮ ಜಯ ಎಂದರು.