ಸ್ಲ್ಯಾಬ್‌ಗಳ ಇಳಿಕೆಯಿಂದ ಸೆಕೆಂಡ್ಸ್ ಹಾವಳಿ ತಡೆ
ಬೆಂಗಳೂರು : ಪೆಟ್ರೋಲ್, ಡೀಸೆಲ್, ಹಾಲಿನ ದರ ಹೆಚ್ಚಿಸಿದ ಬಳಿಕ ಕರ್ನಾಟಕ ಸರ್ಕಾರ ಮದ್ಯ ಬೆಲೆಗಳ ಇಳಿಕೆ ಮಾಡಲು ನಿರ್ಧರಿಸಿದೆ.
ದರ ಇಳಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಮೇಲ್ವರ್ಗದವರು ಹೆಚ್ಚು ಸೇವಿಸುವ ಮದ್ಯಗಳ ಬೆಲೆ ಇಳಿಕೆಗೆ ತೀರ್ಮಾನಿಸಿದ್ದಾರೆ.
ಬೆಲೆ ಇಳಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ನಿರೀಕ್ಷಿಸಿರುವ ಮುಖ್ಯಮಂತ್ರಿ ಅವರು, ಸೆಕೆಂಡ್ಸ್ ಹಾವಳಿಯನ್ನು ಒಂದಷ್ಟು ಪ್ರಮಾಣದಲ್ಲಿ ತಡೆಗಟ್ಟಬಹುದೆಂಬ ತೀರ್ಮಾನಕ್ಕೆ ಬಂದಿದ್ದಾರೆ.
ಬಡತನ ರೇಖೆಗಿಂತ ಕೆಳಗಿನವರು ಮತ್ತು ಕಾರ್ಮಿಕರು ಸೇವಿಸುವ ಮದ್ಯದ ದರವನ್ನು ಹಾಗೇ ಉಳಿಸಿಕೊಳ್ಳಲಿದ್ದಾರೆ.
ಹಾಲಿ ಇರುವ ಮದ್ಯದ ದರ ಸ್ಲ್ಯಾಬ್‌ಗಳನ್ನು 18ರಿಂದ 16ಕ್ಕೆ ಇಳಿಸಲು ಮುಂದಾಗಿದ್ದು, ಇದರಿಂದ ಮಧ್ಯಮ ಹಾಗೂ ಶ್ರೀಮಂತ ವರ್ಗ ಸೇವಿಸುವ ಮದ್ಯದ ದರಗಳು ಗಣನೀಯವಾಗಿ ಇಳಿಕೆಯಾಗಲಿದೆ.
ಯಾವ ಮದ್ಯಕ್ಕೆ ಎಷ್ಟು ದರ ಇಳಿಕೆ ಆಗಲಿದೆ ಎಂಬ ಸರ್ಕಾರಿ ಆದೇಶ ಇನ್ನು ಎರಡು-ಮೂರು ದಿನಗಳಲ್ಲಿ ಹೊರಬರಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕರ್ನಾಟಕಕ್ಕಿಂತ ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಮದ್ಯದ ದರ ಕಡಿಮೆ ಇರುವುದರಿಂದ ಆ ರಾಜ್ಯಗಳಿಂದ ಯಥೇಚ್ಛವಾಗಿ ಕಳ್ಳ ಮಾರ್ಗದಲ್ಲಿ ರಾಜ್ಯಕ್ಕೆ ಮದ್ಯ ರವಾನೆ ಆಗುತ್ತಿತ್ತು.
ಮಧ್ಯಮ ವರ್ಗದವರು ಸೇವನೆ ಮಾಡುವ ಮದ್ಯವೇ ಅಪಾರ ಪ್ರಮಾಣದಲ್ಲಿ ಸೆಕೆಂಡ್ಸ್ ಅಲ್ಲದೆ, ಹೊರ ರಾಜ್ಯಗಳಿಂದ ಕಳ್ಳ ಸಾಗಣೆ ಆಗುವುದರಿಂದ ಇಲ್ಲಿನ ಮದ್ಯಗಳ ಬೇಡಿಕೆ ಕುಂಠಿತಗೊಂಡಿತ್ತು.
ಇದನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಸ್ಲ್ಯಾಬ್‌ಗಳಲ್ಲಿ ಇಳಿಕೆ ಮಾಡಿ ಸೋರಿಕೆ ತಡೆಗಟ್ಟುವ ಮೂಲಕ ಬೊಕ್ಕಸಕ್ಕೆ ಆದಾಯ ತರಲು ಮುಂದಾಗಿದೆ.
ಮದ್ಯ ಸನ್ನದುದಾರರ ವಿವಿಧ ಒಕ್ಕೂಟಗಳು 18ರಷ್ಟು ಇರುವ ದರದ ಸ್ಲ್ಯಾಬ್‌ಗಳನ್ನು 12ಕ್ಕೆ ಇಳಿಸುವಂತೆ ಒತ್ತಡ ತಂದಿದ್ದವು.
ಸ್ಲ್ಯಾಬ್‌ಗಳ ಇಳಿಕೆಯಿಂದ ಸೆಕೆಂಡ್ಸ್ ಹಾವಳಿ ತಡೆಗಟ್ಟಬಹುದು ಮತ್ತು ಕರ್ನಾಕಟದಲ್ಲಿ ಉತ್ಪಾದನೆಯಾಗಿ ತೆರಿಗೆ ಪಾವತಿಸುವ ಮದ್ಯಗಳ ಮಾರಾಟ ಹೆಚ್ಚಾಗುತ್ತದೆ, ಇದರಿಂದ ವಾರ್ಷಿಕ ಸಂಪನ್ಮೂಲ ಶೇಕಡ 30ರಿಂದ 50ರಷ್ಟು ಹೆಚ್ಚಬಹುದೆಂದು ಒಕ್ಕೂಟಗಳು ತಿಳಿಸಿದ್ದವು.