ಬೆಂಗಳೂರು:ಅರ್ಹತಾ ಕಂಡಿಕೆಗಳಡಿ ವೈದ್ಯಕೀಯ ಕೋರ್ಸ್ಗಳಿಗೆ ದಾಖಲಾಗಬಯಸುವ ಹಾಗೂ ಇದುವರೆಗೆ ದಾಖಲೆಗಳ ಪರಿಶೀಲನೆಗೆ ಒಳಪಡದ ಅಭ್ಯರ್ಥಿಗಳು ಆಗಸ್ಟ್ 9ರ ಒಳಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಚೇರಿಗೆ ಖುದ್ದಾಗಿ ಹಾಜರಾಗಿ ಅರ್ಹ ಶೈಕ್ಷಣಿಕ ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳಬೇಕು ಎಂದು ಪ್ರಾಧಿಕಾರ ತಿಳಿಸಿದೆ.
ಅರ್ಹತಾ ಕಂಡಿಕೆಗಳಾದ ಬಿ, ಸಿ, ಡಿ, ಐ, ಜೆ, ಕೆ, ಎಲ್, ಎಂ, ಎನ್- ಕ್ಲೇಮ್ ಮಾಡಿರುವ ಹಾಗೂ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ನಿಗದಿತ ದಿನಾಂಕಗಳಂದು ದಾಖಲೆಗಳ ಪರಿಶೀಲನೆಗೆ ಹಾಜರಾಗದವರು ಆಗಸ್ಟ್ 9ರ ಒಳಗೆ ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳದವರು ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಅರ್ಹರಾಗುವುದಿಲ್ಲ.
ಯುಜಿ-ನೀಟ್ ಪ್ರವೇಶ
ಈ ಮೇಲ್ಕಂಡ ಕಂಡಿಕೆಗಳಡಿ ದಾಖಲೆಗಳ ಪರಿಶೀಲನೆ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಆಯಾ ದಿನದಂದೇ ಪರಿಶೀಲನಾ ಪತ್ರ ನೀಡಲಾಗಿದ್ದು, ಇದನ್ನೇ ಯುಜಿ-ನೀಟ್ ಪ್ರವೇಶಕ್ಕೂ ಬಳಸಬಹುದಾಗಿದೆ.
ಯುಜಿ-ಸಿಇಟಿ ಅರ್ಜಿಗೆ ಯುಜಿ-ನೀಟ್ ರೋಲ್ ಸಂಖ್ಯೆ ಲಿಂಕ್ ಮಾಡಬೇಕು ಮತ್ತು ಅರ್ಜಿ ಪ್ರತಿಯನ್ನು ಮುದ್ರಿಸಿಕೊಳ್ಳಬೇಕು, ಈ ಅಭ್ಯರ್ಥಿಗಳು ಯುಜಿ-ನೀಟ್ ವೆರಿಫಿಕೇಷನ್ ಸ್ಲಿಪ್ ಡೌನ್ಲೋಡ್ ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ.
ಯುಜಿ-ಸಿಇಟಿ ಪರಿಶೀಲನಾ ಪತ್ರದಲ್ಲಿ ಮುದ್ರಿತವಾಗಿರುವ ಸೀಕ್ರೆಟ್-ಕೀ ಮತ್ತು ಅರ್ಜಿ ಸಂಖ್ಯೆ ನಮೂದಿಸಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ಗಳಿಗೆ ಆಯ್ಕೆಗಳನ್ನು ದಾಖಲಿಸಬಹುದಾಗಿದ್ದು, ಇದಕ್ಕಾಗಿ ಸದ್ಯದಲ್ಲೇ ಪೋರ್ಟಲ್ ತೆರೆಯಲಾಗುವುದು, ಹೆಚ್ಚಿನ ವಿವರಗಳಿಗೆ ಕೆಇಎ ಜಾಲತಾಣಕ್ಕೆ ಭೇಟಿ ನೀಡಬೇಕು ಎಂದು ಸಂಸ್ಥೆ ತಿಳಿಸಿದೆ.