ಮೈಸೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಗೆ ಹೋಗುವ ಕಾಲ ಹತ್ತಿರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಭವಿಷ್ಯ ನುಡಿದಿದ್ದಾರೆ.
ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಿಂದ ಯಾರು ನಿವೃತ್ತಿಯಾಗುತ್ತಾರೆ ಎಂಬುದು ಸದ್ಯದಲ್ಲೇ ಪರದೆ ಮೇಲೆ ಬರಲಿದೆ.
ಹತಾಶೆಯಿಂದ ಸಿಡಿಮಿಡಿ
ಅವರು ಮನೆಗೆ ಹೋಗುವ ಸಮಯ ಹತ್ತಿರವಾಗುತ್ತಿದ್ದಂತೆ ಹತಾಶೆಯಿಂದ ಇನ್ನೊಬ್ಬರ ಮೇಲೆ ಸಿಡಿಮಿಡಿಗೊಳ್ಳುತ್ತಿರುವುದು ಸಹಜ ಎಂದರು.
ನಾನು ಅಪ್ಪಟ ಸ್ಫಟಿಕ ಎಂದು ಹೇಳಿಕೊಂಡು ರಾಜಕಾರಣ ಮಾಡಿಕೊಂಡು ಬಂದವರಿಗೆ ದಿಢೀರನೆ ಭ್ರಷ್ಟಾಚಾರದ ಹಗರಣಗಳು ಒಂದರ ಹಿಂದೆ ಒಂದು ಸುತ್ತಿಕೊಂಡು ಅವರ ಬಣ್ಣ ಬಯಲು ಮಾಡಿದೆ.
ಇವರ ಭ್ರಷ್ಟಾಚಾರದ ವಿರುದ್ಧ ಬಿಜೆಪಿ-ಜೆಡಿಎಸ್ ಬೆಂಗಳೂರಿನಿಂದ ಮೈಸೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ದೊರೆತಿರುವ ಜನಬೆಂಬಲ ಅವರನ್ನು ಮತ್ತಷ್ಟು ಅಲುಗಾಡಿಸಿದೆ.
ಸುಳ್ಳು ಪ್ರಕರಣ
ಇದನ್ನು ಸಹಿಸಲಾಗದೆ ನನ್ನ ಮೇಲಿನ ಸುಳ್ಳು ಪ್ರಕರಣವನ್ನು ಮುಂದಿಟ್ಟುಕೊಂಡು ದೊಡ್ಡದಾಗಿ ಮಾತನಾಡುತ್ತಿದ್ದಾರೆ, ಇನ್ನು ಕೆಲವೇ ದಿನಗಳಲ್ಲಿ ಅವರ ವಿರುದ್ಧ ನ್ಯಾಯಾಲಯಗಳಲ್ಲಿ ತೀರ್ಪುಗಳು ಹೊರಬಂದಾಗ, ಯಾರು ನಿವೃತ್ತಿ ತೆಗೆದುಕೊಳ್ಳಬೇಕೆಂದು ಅವರೇ ಹೇಳಲಿ.
ರಾಷ್ಟ್ರದ ಇತಿಹಾಸದಲ್ಲೇ ಮುಖ್ಯಮಂತ್ರಿ ಒಬ್ಬರು ತಮ್ಮ ಕುಟುಂಬಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ನಿವೇಶನಗಳನ್ನು ಪಡೆದುಕೊಂಡ ಉದಾಹರಣೆ ಇಲ್ಲ.
ತಮ್ಮ ಧರ್ಮ ಪತ್ನಿಗೇ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿಕೊಂಡಿರುವುದು ಅಕ್ಷಮ್ಯ ಅಪರಾಧ, ನನ್ನ ವಿರುದ್ಧದ ಫೊಕ್ಸೊ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪಿನ ಬಳಿಕ ಸತ್ಯ ಸಂಗತಿ ಹೊರಬರುತ್ತದೆ, ಆಗ ಸಿದ್ದರಾಮಯ್ಯ ಅವರಿಗೆ ಉತ್ತರಿಸುತ್ತೇನೆ ಎಂದರು.