ಮೈಸೂರು:ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಉದ್ಯಮಿ ಸಿದ್ಧಾರ್ಥ್ ಆತ್ಮಹತ್ಯೆ ಹಿಂದಿನ ರಹಸ್ಯ ಜನತೆಗೆ ತಿಳಿಸಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ನನ್ನ ಮಗನನ್ನು ರಾಜಕೀಯಕ್ಕೆ ತರಬೇಕೆಂದು ನನ್ನ ಅಣ್ಣನ ಮಗನನ್ನು ಜೈಲಿಗೆ ಕಳುಹಿಸಿದೆ ಎಂದು ನಿನ್ನೆ ಇದೇ ವೇದಿಕೆಯಲ್ಲಿ ಹೇಳಿದೆಯಲ್ಲಪ್ಪಾ, ಸಿದ್ಧಾರ್ಥ್ ಸಾವಿನ ಕಥೆಯನ್ನು ಮೊದಲು ಬಯಲು ಮಾಡಪ್ಪಾ.
ಮ್ಯಾನ್‌ಹೋಲ್ ಮುಚ್ಚಳ ಕದ್ದವರು
ಬೆಂಗಳೂರು ನಗರದ ಹೊರವಲಯದ ಜೇಡರಹಳ್ಳಿ ಸಮೀಪ ಮ್ಯಾನ್‌ಹೋಲ್‌ಗಳ ಮುಚ್ಚಳಗಳನ್ನು ಕದ್ದು ಗುಜರಿಗೆ ಹಾಕಿ ಹಣ ಸಂಪಾದನೆ ಮಾಡಿದವನಿಂದ ಬುದ್ಧಿವಾದ ಕೇಳಬೇಕೆ ಎಂದು ಮಾತಿನಲ್ಲಿ ಚುಚ್ಚಿದರು.
ಮೈಸೂರು ಚಲೋ ಸಮಾರೋಪದಲ್ಲಿ ಮಾತನಾಡಿದ ಅವರು, ನಮ್ಮಣ್ಣ ರೇವಣ್ಣ, ವಿಧಾನಸಭೆಯಲ್ಲಿ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಲು ಮುಂದಾದಾಗ, ಸಿದ್ದರಾಮಯ್ಯ ಅಂತಹವರಲ್ಲ ಆರೋಪ ಮಾಡಬೇಡ ಎಂದು ನನಗೆ ಬುದ್ಧಿವಾದ ಹೇಳಿದ್ದ.
ದೇವೇಗೌಡರ ಕುಟುಂಬವನ್ನು ಬೀದಿಗೆ ತರಬೇಕೆಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇಬ್ಬರೂ ಸೇರಿ ರೇವಣ್ಣ ಮಕ್ಕಳನ್ನು ಜೈಲಿಗೆ ಕಳುಹಿಸಿದಿರಿ.
ವಕೀಲರಿಗೆ ಕೊಟ್ಟ ಹಣ ಯಾರದು
ಅದಲ್ಲದೆ, ಗಂಡ-ಹೆಂಡತಿ ವಿರುದ್ಧ ಸುಳ್ಳು ಮೊಕದ್ದಮೆ ಹಾಕಿಸಿ ರೇವಣ್ಣನನ್ನೂ ಜೈಲಿಗೆ ಹಾಕಿಸಿದಿರಿ, ರೇವಣ್ಣ ಪತ್ನಿ ಅವರಿಗೆ ಜಾಮೀನು ದೊರೆತರೆ ಅದನ್ನು ರದ್ದುಪಡಿಸಲು, ಸುಪ್ರೀಂಕೋರ್ಟ್‌ನಲ್ಲಿ ಕಪಿಲ್ ಸಿಬಲ್ ಅಂತಹ ವಕೀಲರನ್ನು ಇಟ್ಟು ದಿನಕ್ಕೆ 20ರಿಂದ 30 ಲಕ್ಷ ರೂ. ಕೊಡುತ್ತೀರಿ, ಹಣ ಯಾರದು ಎಂದು ಪ್ರಶ್ನಿಸಿದರು.
ಚಾಮುಂಡಿ ತಾಯಿ ಮಡಿಲಲ್ಲಿ ಹೇಳುತ್ತಿದ್ದೇನೆ, ನೀವು ನಮ್ಮ ಕುಟುಂಬವನ್ನು ಒಡೆಯಲು ಸಾರ್ವಜನಿಕ ವೇದಿಕೆಯಲ್ಲೇ ಎತ್ತಿ ಕಟ್ಟು ಕೆಲಸ ಮಾಡಿದಿರಿ.
ಅವರ ಇಡೀ ಕುಟುಂಬವನ್ನು ಜೈಲಿಗೆ ಹಾಕಿಸಿ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತೀರಾ, ಶಿವಕುಮಾರ್, ಸಿದ್ಧಾರ್ಥ್ ಸಾವಿನ ಬಗ್ಗೆ ನಿನ್ನಲ್ಲಿರುವ ಮಾಹಿತಿ ಬಹಿರಂಗ ಪಡಿಸಪ್ಪಾ ಎಂದು ಸವಾಲು ಹಾಕಿದರು.
ರಾಜಕೀಯವಾಗಿ ಬೆಳಸಿದವರಿಗೇ ದೋಖಾ
ನಿನ್ನನ್ನು ರಾಜಕೀಯವಾಗಿ ಬೆಳಸಿ ಇಷ್ಟು ಸಂಪತ್ತು ಮಾಡಲು ಕಾರಣರಾದ ಕೃಷ್ಣ ಅವರಿಗೇ ದೋಖಾ ಮಾಡಿದವನು ಬೇರೆಯವರನ್ನು ಬಿಡುತ್ತೀಯಾ.
ನಿನ್ನೆ ನೀನು ತೊಡೆ ತಟ್ಟಿ ಹಾಕಿರುವ ಸವಾಲನ್ನು ಸ್ವೀಕರಿಸಿದ್ದೇನೆ ಶಿವಕುಮಾರ್, ನಮ್ಮದು ತೆರೆದ ಪುಸ್ತಕ, ಯಾವುದೋ 50 ಡಿ-ನೋಟಿಫೈ ಮಾಡಿದ್ದೀನಿ ಅನ್ನುತ್ತೀಯಾ, ಆ ಬಗ್ಗೆ ತನಿಖೆ ಮಾಡಿಸಪ್ಪಾ.
ನನ್ನ ಮೇಲೆ ಇರುವ ಮೊಕದ್ದಮೆಗಳ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿವೆ, ಅವನ್ನು ಮುಂದಿಟ್ಟುಕೊಂಡು ಹಾದಿ-ಬೀದಿಯಲ್ಲಿ ಫ್ಲೆಕ್ಸ್ ಹಾಕಿಸುತ್ತೀರಾ.
ಹೆಣ್ಣು ಮಕ್ಕಳ ಆಸ್ತಿ ಲೂಟಿ
ಹೆಣ್ಣು ಮಕ್ಕಳನ್ನು ಹಿಡಿದು ತಂದು ಹೆದರಿಸಿ-ಬೆದರಿಸಿ ಆಸ್ತಿ ಲಪಟಾಯಿಸುವ ಸಹೋದರರಿಂದ ನಾನು ಬುದ್ಧಿವಾದ ಕೇಳಬೇಕಿಲ್ಲ.
ನಿಮ್ಮ ಪಾಪದ ಕೊಡ ತುಂಬಿದೆ, ಅದಕ್ಕೆ ನೀವೇ ತಲೆ ದಂಡ ತೆತ್ತುತ್ತೀರಿ, ಸಿದ್ದರಾಮಯ್ಯ ಅವರ ಅರ್ಕಾವತಿಯ ಕರ್ಮಕಾಂಡದ ವರದಿಯನ್ನು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.
ಕುಮಾರಸ್ವಾಮಿ ಮೇಲೆ ಕಣ್ಣು ಹಾಕಿದರೆ ನಿಮಗೆ ಉಳಿಗಾಲವಿಲ್ಲ ಎಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ಎಚ್ಚರಿಸಿದ ಅವರು, ಈಗಲಾದರೂ ನಿಮ್ಮನ್ನು ಸರಿದಾರಿಗೆ ತಂದುಕೊಳ್ಳಿ, ಇಲ್ಲದಿದ್ದರೆ ಜನರೇ ಸರ್ಕಾರವನ್ನು ಕಿತ್ತೊಗೆಯುತ್ತಾರೆ ಎಂದರು.
ನಿಮ್ಮವರಿಂದಲೇ ಸರ್ಕಾರ ಅಸ್ಥಿರ
ಬಿಜೆಪಿ-ಜೆಡಿಎಸ್ ಒಗ್ಗಟ್ಟಾಗಿ ನಿಮ್ಮನ್ನು ಕೆಳಗಿಳಿಸುವ ಕೆಲಸ ಮಾಡುತ್ತಿಲ್ಲ, ನಿಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸಕ್ಕೆ ಕೈಹಾಕಿಲ್ಲ, ಆದರೆ ನಿಮ್ಮ ಪಕ್ಷದವರೇ ಸರ್ಕಾರ ಉರುಳಿಸಲು ಹೊರಟಿದ್ದಾರೆ.
ಸಚಿವರಾದ ರಾಜಣ್ಣ, ಸತೀಶ್ ಜಾರಕಿಹೊಳಿ ಅವರ ಹೇಳಿಕೆಗಳನ್ನು ನೋಡಿದ್ದೀರಾ ಎಂದು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ಪ್ರಶ್ನಿಸಿದರು.