ಬೆಂಗಳೂರು:ಪೋಡಿ ಪ್ರಕರಣಗಳ ತ್ವರಿತ ಇತ್ಯರ್ಥ ಹಾಗೂ ಗ್ರಾಮೀಣ ಭಾಗದ ಜನರ ಕಷ್ಟ-ಸುಖಗಳಿಗೆ ಸ್ಪಂದಿಸಲು 1,000 ಗ್ರಾಮ ಲೆಕ್ಕಿಗರು, 750 ಸರ್ವೇಯರ‍್ಸ್, 36 ಎಡಿಎಲ್‌ಆರ್‌ಗಳ ನೇಮಕ ಮಾಡುವುದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಇಂದಿಲ್ಲಿ ಪ್ರಕಟಿಸಿದ್ದಾರೆ.
ಕಾವೇರಿ, ಕೃಷ್ಣ ಕೊಳ್ಳ ವ್ಯಾಪ್ತಿಯಲ್ಲಿ ಆಗಸ್ಟ್ 15ರ ನಂತರ ಭಾರೀ ಮಳೆ ಬೀಳುವ ಮುನ್ಸೂಚನೆ ಇದ್ದು ಸಾರ್ವಜನಿಕರು ಎಚ್ಚರ ವಹಿಸುವಂತೆ ಮನವಿ ಮಾಡಿದ್ದಾರೆ.
ನೌಕರರ ಕಾರ್ಯಕ್ಕೆ ಅಸಮಾಧಾನ
ರಾಜ್ಯದಲ್ಲಿ ಬಿದ್ದಿರುವ ಮಳೆ ಪರಿಸ್ಥಿತಿ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಗರ್‌ಹುಕುಂ ಸಕ್ರಮಕ್ಕೆ ಅರ್ಜಿ ಸಲ್ಲಿಸಿ 40 ವರ್ಷ ಕಳೆದರೂ ಇಲಾಖಾ ಅರ್ಜಿಗಳ ನೌಕರರು ವಿಲೇವಾರಿ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸೆಪ್ಟೆಂಬರ್ ತಿಂಗಳಿನಿಂದ ರಾಜ್ಯಾದ್ಯಂತ ಪೋಡಿ ಅಭಿಯಾನ ಆರಂಭಿಸುತ್ತೇವೆ, ಆ ವೇಳೆಗೆ ನಮ್ಮಲ್ಲಿ ಕೊರತೆ ಇರುವ ಈ ಸಿಬ್ಬಂದಿ ನೇಮಕಾತಿ ಕಾರ್ಯ ಪೂರ್ಣಗೊಳಿಸಲು ಸೂಚಿಸಿದ್ದೇನೆ ಎಂದರು.
ಕಾನೂನಿನಲ್ಲಿ ಅವಕಾಶಗಳಿದ್ದರೂ ರೈತರನ್ನು ದಿನನಿತ್ಯ ಕಚೇರಿಗಳಿಗೆ ಅಲೆಸಿ ಅವರಿಗೆ ಕಿರಿಕಿರಿ ಮಾಡುವುದು ಅಧಿಕಾರಿಗಳ ಕಸುಬಾಗಿ ಹೋಗಿದೆ.
ಜನಸಾಮಾನ್ಯರಿಗೆ ಕಿರಿಕಿರಿ
ಪ್ರಕರಣಗಳ ಇತ್ಯರ್ಥಪಡಿಸಲು ಎಷ್ಟೇ ಕಾನೂನುಗಳನ್ನು ಅಳವಡಿಸಿದರೂ ಅವುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಅಧಿಕಾರಿಗಳು ಬಳಸಿಕೊಂಡು ಜನಸಾಮಾನ್ಯರಿಗೆ ಕಿರಿಕಿರಿ ಮಾಡುತ್ತಿದ್ದಾರೆ.
ಕೆಲವೆಡೆ 50 ಎಕರೆ ಪೋಡಿ ಮಾಡಿಕೊಡಿ ಎಂದರೆ 100 ಎಕರೆ ಮಾಡಿಕೊಟ್ಟಿದ್ದಾರೆ, ಬಡ ರೈತನೊಬ್ಬ ತಾನು ಮಾಡುತ್ತಿರುವ ಸಾಗುವಳಿ ಭೂಮಿಗೆ ದಾಖಲೆಗಳನ್ನು ಮಾಡಿಕೊಳ್ಳಲು ಹೊರಟರೆ ಆತನನ್ನು ಅಲೆದಾಡಿಸುತ್ತಿದ್ದಾರೆ.
ಇದಕ್ಕೆಲ್ಲಾ ಇತಿಶ್ರೀ ಹಾಡುವ ಉದ್ದೇಶದಿಂದಲೇ ಪೋಡಿ ಅಭಿಯಾನ ಆರಂಭಿಸಿದ್ದೇವೆ, ಈ ಸಂದರ್ಭದಲ್ಲಿ ಇಲಾಖಾ ನೌಕರರು ಮತ್ತು ಅಧಿಕಾರಿಗಳು ಕಾನೂನಿನ ಚೌಕಟ್ಟನಡಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು, ಇಲ್ಲದಿದ್ದರೆ ನಾವು ನಿಮ್ಮ ಮೇಲೆ ಕಠಿಣ ಕ್ರಮ ಜರುಗಿಸಬೇಕಾದೀತು ಎಂದು ಎಚ್ಚರಿಸಿದ್ದೇನೆ ಎಂದರು.
80 ಸಾವಿರ ಎಕರೆ ಬೆಳೆ ನಾಶ
ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ, ಈ ವರ್ಷ ರಾಜ್ಯದ ಎಲ್ಲಾ ಭಾಗದಲ್ಲೂ ವಾಡಿಕೆಗಿಂತ ಶೇಕಡ 20ರಷ್ಟು ಮಳೆ ಹೆಚ್ಚಾಗಿದ್ದು, 80 ಸಾವಿರ ಎಕರೆ ಭೂಮಿಯಲ್ಲಿ ಬೆಳೆ ನಾಶವಾಗಿದೆ.
ಮುಂಜಾಗ್ರತಾ ಕ್ರಮದಿಂದಾಗಿ ಬೆಳೆ ನಷ್ಟ ಕಡಿಮೆಯಾಗಿದೆ, ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾಗಿರುವುದರಿಂದ ಈ ಬಾರಿ ಕೃಷಿ ಉತ್ಪಾದನೆಯಲ್ಲಿ ದಾಖಲೆ ನಿರ್ಮಿಸುವ ಲಕ್ಷಣಗಳಿವೆ.
ಬೆಳೆ ಹಾನಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ.
ಬೆಳೆ ಪರಿಹಾರ ನೀಡಲು ಸೂಚನೆ
ಎಲ್ಲಿ ಬೆಳೆ ನಷ್ಟವಾಗಿದೆ ಎಂಬುದನ್ನು ಪೋರ್ಟೆಲ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡಿ, ಅರ್ಜಿ ಪಡೆದು ಬೆಳೆ ನಷ್ಟ ಪರಿಹಾರ ನೀಡುವಂತೆ ಸೂಚಿಸಿದ್ದೇವೆ.
ನಮ್ಮಲ್ಲಿ ಸಾಕಷ್ಟು ಹಣವಿದೆ, ಇದನ್ನೇ ಬೆಳೆ ಕಳೆದುಕೊಂಡ ರೈತರಿಗೆ ವಿತರಿಸಿ ಎಂದು ಹೇಳಿದ್ದೇನೆ.
ಮಳೆಯಿಂದ ಇದುವರೆಗೂ 58 ಮಂದಿ ಅಸುನೀಗಿದ್ದಾರೆ, ಅವರ ಕುಟುಂಬಗಳಿಗೂ ಪರಿಹಾರ ನೀಡುವಂತೆ ಸೂಚಿಸಲಾಗಿದೆ.
ಭಾಗಶಃ ಮನೆ ಹಾನಿಗೆ ಲಕ್ಷ ರೂ. ಪರಿಹಾರ
ಭಾಗಶಃ ಮನೆ ಕಳೆದುಕೊಂಡವರಿಗೆ ಒಂದು ಲಕ್ಷ ರೂ. ಪರಿಹಾರ ನೀಡಲಾಗುವುದು, ಸಂಪೂರ್ಣ ಮನೆ ಹಾನಿಗೆ ಸರ್ಕಾರವೇ ಮನೆ ಕಟ್ಟಿಸಿಕೊಡಲಿದೆ.
ಆಗಸ್ಟ್ 15ರ ನಂತರ ಮುಂಗಾರು ಮತ್ತಷ್ಟು ಚುರುಕುಗೊಂಡು ಭಾರೀ ಮಳೆ ಆಗುವ ಸಾಧ್ಯತೆ ಇದ್ದು, ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಶಿಥಿಲ ಮನೆಗಳಲ್ಲಿ ವಾಸವಿರುವವರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸುವಂತೆ ಮತ್ತು ನದಿ ಪಾತ್ರದ ಜನರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವಂತೆ ಸೂಚಿಸಲಾಗಿದೆ ಎಂದರು.