ಬೆಂಗಳೂರು:ಕೃಷ್ಣರಾಜ ಸಾಗರ (ಕೆಆರ್‌ಎಸ್), ಆಲಮಟ್ಟಿ ಸೇರಿದಂತೆ ರಾಜ್ಯದ ಎಲ್ಲಾ ಅಣೆಕಟ್ಟೆಗಳ ಸ್ಥಿತಿಗತಿ ಬಗ್ಗೆ ತಾಂತ್ರಿಕ ತಜ್ಞರಿಂದ ಪರಿಶೀಲಿಸಿ ವರದಿ ಪಡೆಯಲಾಗುವುದು ಎಂದು ಜಲಸಂಪನ್ಮೂಲ ಇಲಾಖೆ ಹೊಣೆ ಹೊತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಆತಂಕ ಪಡುವ ಅಗತ್ಯವಿಲ್ಲ, ನಮ್ಮೆಲ್ಲಾ ಅಣೆಕಟ್ಟುಗಳ ಸುರಕ್ಷತೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಅಣೆಕಟ್ಟುಗಳ ಸ್ಥಿತಿಗತಿಗಳ ಪರಿಶೀಲಿನೆಗಾಗಿ ನೀರಾವರಿ ಮತ್ತು ತಾಂತ್ರಿಕ ತಜ್ಞರ ಸಮಿತಿ ರಚಿಸಿ ವರದಿ ಪಡೆಯಲಾಗುವುದು.
ಎಲ್ಲ ಮಾಹಿತಿ ಕುರಿತು ವರದಿ
ಸಮಿತಿಯು ಅಣೆಕಟ್ಟುಗಳ ಸ್ಥಿತಿಗತಿ, ಏನಾದರೂ ಲೋಪಗಳಿದ್ದಲ್ಲಿ, ದುರಸ್ತಿ ಕೈಗೊಳ್ಳಬೇಕಿದ್ದಲ್ಲಿ, ಬದಲಾವಣೆಗಳೂ ಸೇರಿದಂತೆ ಎಲ್ಲ ಮಾಹಿತಿಯನ್ನು ವರದಿಯಲ್ಲಿ ನೀಡಲಿದೆ.
ಇದರ ಆಧಾರದ ಮೇಲೆ ನಾವು ಅಣೆಕಟ್ಟುಗಳ ಸುರಕ್ಷತೆಗೆ ಮತ್ತಷ್ಟು ಕ್ರಮ ತೆಗೆದುಕೊಳ್ಳುತ್ತೇವೆ.
ಅಣೆಕಟ್ಟೆಗಳ ನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳಿಂದ ತಾತ್ಕಾಲಿಕವಾಗಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದಿರುವುದಾಗಿ ಶಿವಕುಮಾರ್ ತಿಳಿಸಿದರು.
ಇಲ್ಲಸಲ್ಲದ ಹೇಳಿಕೆ
ಕೃಷ್ಣರಾಜ ಅಣೆಕಟ್ಟೆಯಲ್ಲಿ ಯಾವುದೇ ಲೋಪವಿಲ್ಲ, ನಾನೇ ಖುದ್ದಾಗಿ ಎಲ್ಲವನ್ನೂ ಪರಿಶೀಲಿಸಿದ್ದೇನೆ, ಕೆಲವರು ರೈತರನ್ನು ಆತಂಕಕ್ಕೆ ಈಡು ಮಾಡಲು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದರು.
ತುಂಗಭದ್ರಾ ಡ್ಯಾಂನ ಒಂದು ಗೇಟ್‌ನ ಸರಪಳಿ ತುಂಡಾಗಿದ್ದರಿಂದ ಅನಾಹುತ ಸಂಭವಿಸಿದೆ, ದುರಸ್ತಿ ಕಾರ್ಯ ಮತ್ತು ಹೊಸ ಕ್ರೆಸ್ಟ್‌ಗೇಟ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಜಿಂದಾಲ್ ಕಂಪನಿ ಸಹಕಾರದೊಂದಿಗೆ ಗೇಟ್ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ, ಅಣೆಕಟ್ಟೆಯಿಂದ 40 ಟಿಎಂಸಿಯಷ್ಟು ನೀರು ಹರಿದ ನಂತರವೇ ನಾವು ಹೊಸ ಕ್ರೆಸ್ಟ್‌ಗೇಟ್ ಕೂಡಿಸಲು ಸಾಧ್ಯ.
ಕನಿಷ್ಠ ಒಂದು ಬೆಳೆಗೆ ನೀರು
ಸದ್ಯಕ್ಕೆ ಏನೂ ಮಾಡಲಾಗದು, ಒಂದಷ್ಟು ನೀರು ಹರಿದುಹೋಗಲಿದೆ ಆದರೆ, ಕನಿಷ್ಠ ಒಂದು ಬೆಳೆಗಾದರೂ ನೀರನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ.
ತುಂಗಾಭದ್ರಾ ಅಣೆಕಟ್ಟೆಯ ಪರಿಶೀಲನೆ ಖುದ್ದಾಗಿ ವೀಕ್ಷಿಸಿದ್ದು 70 ವರ್ಷ ಹಳೆಯದಾದ ಸರಪಳಿ ತುಂಡಾಗಿದ್ದರಿಂದ ಕ್ರೆಸ್ಟ್‌ಗೇಟ್ ಮುರಿದಿದೆ, ಬೇರೆ ಅಣೆಕಟ್ಟೆಗಳಲ್ಲಿ ಪ್ರತಿ ಕ್ರೆಸ್ಟ್‌ಗೇಟ್‌ಗೆ ಎರಡು ಸರಪಳಿಗಳಿರುತ್ತವೆ, ಇಲ್ಲಿ ಒಂದೇ ಸರಪಳಿ ಮೇಲೆ ನಿಂತಿದ್ದರಿಂದ ಈ ಅನಾಹುತ ಸಂಭವಿಸಿದೆ ಎಂದರು.
ಘಟನೆಗೆ ಯಾರನ್ನೂ ಹೊಣೆ ಮಾಡುವುದಿಲ್ಲ, ಮೊದಲು ಕ್ರೆಸ್ಟ್‌ಗೇಟ್ ಕೂರಿಸುವ ಕೆಲಸ ಮಾಡಲಾಗುವುದು ಎಂದರು.