ಬೆಂಗಳೂರು:ಕೇಂದ್ರ ಸ್ವಾಮ್ಯದ ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಪುನಃಶ್ಚೇತನಕ್ಕೆ ರಾಜ್ಯ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಕೈಗಾರಿಕೆ ಮತ್ತು ಗಣಿ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರದ ಸಂಪನ್ಮೂಲ ಹೆಚ್ಚಿಸಿ ಉದ್ಯೋಗ ಸೃಷ್ಟಿಗೆ ನಾವು ಮಾಡುತ್ತಿರುವ ಎಲ್ಲಾ ಪ್ರಯತ್ನಗಳಿಗೆ ರಾಜ್ಯ ಸರ್ಕಾರ ಅಡ್ಡಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ
ನಾನು ಕೇಂದ್ರ ಸಚಿವನಾಗಿ ಕಾರ್ಯನಿರ್ವಹಿಸುವುದೇ ಸಿದ್ದರಾಮಯ್ಯ ಸರ್ಕಾರಕ್ಕೆ ಇಷ್ಟ ಇದ್ದಂತಿಲ್ಲ, ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಕುದುರೆಮುಖ ಹಾಗೂ ಎಚ್‌ಎಂಟಿ ಕಾರ್ಖಾನೆಗಳ ಪುನಃಶ್ಚೇತನಕ್ಕೆ ಅಲ್ಪಾವಧಿಯಲ್ಲೇ ನಮ್ಮ ಇಲಾಖೆ ಕಾರ್ಯಕ್ರಮ ರೂಪಿಸುತ್ತಿದ್ದಂತೆ ರಾಜ್ಯ ಸರ್ಕಾರ ಅದರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ.
ಅಷ್ಟೇ ಅಲ್ಲ, ಕೇಂದ್ರ ಸ್ವಾಮ್ಯದ ಅಡಿ ಬರುವ ಕೈಗಾರಿಕೆಗಳ ನೂರಾರು ಎಕರೆ ಭೂಮಿಯನ್ನು ಅನ್ಯ ಮಾರ್ಗದಲ್ಲಿ ವಶಪಡಿಸಿಕೊಂಡು ಖಾಸಗಿ ಬಿಲ್ಡರ್‌ಗಳಿಗೆ ಸಹಾಯ ಮಾಡಲು ಹೊರಟಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಒಬ್ಬರೇ ಒಬ್ಬ ಸಚಿವರು ಇದುವರೆಗೂ ನನ್ನನ್ನು ಭೇಟಿ ಮಾಡಿ, ಕರ್ನಾಟಕಕ್ಕೆ ಆಗಬೇಕಿರುವ ಕೆಲಸ ಮಾಡಿಕೊಡುವಂತೆ ಕೇಳಿಲ್ಲ.
ಉದ್ಯೋಗ ಯೋಜನೆಗಳಿಗೂ ಅಡ್ಡಿ
ಅವರು ಬರುವುದು ಬೇಡ, ನಿರುದ್ಯೋಗಿಗಳಿಗೆ ಉದ್ಯೋಗ ಕೊಡಲು ನಾನು ಹಾಕುವ ಯೋಜನೆಗಳಿಗೂ ಸಿದ್ದರಾಮಯ್ಯ ಸರ್ಕಾರ ಅಡ್ಡಿ ಉಂಟು ಮಾಡುತ್ತಿದೆ.
ಹಾಲಿ ಕೈಗಾರಿಕೆಗಳ ವಿಸ್ತರಣೆ ಮತ್ತು ಪುನಃಶ್ಚೇತನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಷ್ಟು ಕೋಟಿ ರೂ.ಗಳನ್ನು ಬೇಕಾದರೂ ನೀಡಲು ಸಿದ್ಧರಿದ್ದಾರೆ, ಅದನ್ನು ಬಳಸಿಕೊಂಡು ನಮ್ಮ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿರುವುದನ್ನೂ ಇವರು ಸಹಿಸಿಕೊಳ್ಳುತ್ತಿಲ್ಲ.
ಕೇಂದ್ರ ಸಚಿವನಾಗಿ ನಾಲ್ಕೈದು ದಿನದಲ್ಲೇ ಕುದುರೆಮುಖ ಕಂಪನಿಗೆ ಕೇಂದ್ರ ಸರ್ಕಾರದ ಆರ್ಥಿಕ ಗ್ಯಾರಂಟಿ ಕೇಳಿದ್ದೆ, ಆದರೆ, ರಾಜ್ಯ ಸರ್ಕಾರ, ಕುಮಾರಸ್ವಾಮಿ, ಪರಿಸರ ಹಾಳು ಮಾಡಲು ಹೊರಟಿದ್ದಾರೆ ಎಂದು ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತು.
ಇದೇ ಸಿದ್ದರಾಮಯ್ಯ ಸರ್ಕಾರ ಸಂಡೂರಿನ ದೇವದಾರದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ, ನಾನು ಕೇಳಿದ ಪ್ರದೇಶಗಳಲ್ಲಿ ಮರಗಳಿಲ್ಲ, ನಾವು ಪರಿಸರ ಸಂರಕ್ಷಣೆಗಾಗಿ ಹಣ ನೀಡಿದರೂ ಸಮ್ಮತಿ ಕೊಡಲಿಲ್ಲ ಎಂದರು.
ಕಾರ್ಖಾನೆ ಭೂಮಿ ವಶಕ್ಕೆ ಯತ್ನ
ಸರ್ಕಾರ ಇದೇ ರೀತಿ ತನ್ನ ಧೋರಣೆ ಮುಂದುವರೆಸಿದರೆ ಸಾವಿರಾರು ಕುಟುಂಬಗಳು ಬೀದಿಗೆ ಬರುಲಿವೆ, ಅಲ್ಲದೆ, ಎಚ್‌ಎಂಟಿ ಕಾರ್ಖಾನೆ ಭೂಮಿಯನ್ನು ಅರಣ್ಯ ಜಾಗವೆಂದು ವಶಪಡಿಸಿಕೊಳ್ಳಲು ಸಿದ್ದರಾಮಯ್ಯ ಸರ್ಕಾರ ಹೊಸ ನಖರಾ ಶುರು ಮಾಡಿದೆ.
ಕಾರ್ಖಾನೆ 1964ರಲ್ಲೇ ಉಳುಮೆದಾರರಿಂದ ನೇರವಾಗಿ ಭೂಮಿ ಖರೀದಿಸಿದೆ, ಆದರೆ ಇದೀಗ, ಅಲ್ಲಿ ಮರಗಳು ಬೆಳೆದಿರುವ ನೂರಾರು ಎಕರೆ ಅರಣ್ಯ ಇಲಾಖೆಗೆ ಸೇರಿದ್ದು, ಅದನ್ನು ಸ್ವಾಧೀನಪಡಿಸಿಕೊಳ್ಳುವಂತೆ ಇಲ್ಲಿನ ಇಲಾಳಾ ಕಾರ್ಯದಶಿಗಳು ಪತ್ರ ಬರೆದಿದ್ದಾರೆ.
ನಾನು ಈ ಕರ್ಖಾನೆಗೆ ಭೇಟಿ ಕೊಟ್ಟೆ ಎಂಬ ಒಂದೇ ಕಾರಣಕ್ಕೆ ತನ್ನದಲ್ಲದ ಭೂಮಿಯನ್ನು ತನ್ನದೆಂದು ತಗಾದೆ ತೆಗೆದು ರಾಜ್ಯ ಸರ್ಕಾರ ಖಾಸಗಿಯವರಿಗೆ ನೀಡಲು ಹೊರಟಿದೆ.
ನ್ಯಾಯಾಲಯದ ಮೆಟ್ಟಿಲು ಹತ್ತಿಲಿದೆ
ಎಚ್‌ಎಂಟಿ ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಈಗಾಗಲೇ ರಾಜ್ಯ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ, ಆದರೂ ಇವರು ಮತ್ತೆ ಈ ವಿಷಯದಲ್ಲಿ ಕೈಹಾಕುತ್ತಿದ್ದಾರೆ, ಕಾರ್ಖಾನೆ ವಿಚಾರ ನ್ಯಾಯಾಲಯದ ಮೆಟ್ಟಿಲು ಹತ್ತಿಲಿದೆ ಎಂದರು.
ನಾನು ಕೇಂದ್ರದಲ್ಲಿ ಮಂತ್ರಿಯಾದ ಮೇಲೆ ಕೆಲಸ ನಿರ್ವಹಣೆ ಮಾಡಲು ಬಿಡದೆ ರಾಜ್ಯ ಸರ್ಕಾರ ಯಾವ ರೀತಿ ನಡೆದುಕೊಳ್ಳುತ್ತಿದೆ ಎಂಬುದಕ್ಕೆ ಇದು ಉದಾಹರಣೆ.
ಇವರು ಏನೇ ಅಸಹಾಕಾರ ತೋರಲಿ, ಪ್ರಧಾನಿ ಅವರ ಸಹಕಾರದಿಂದ ಕೇಂದ್ರ ಸ್ವಾಮ್ಯದ ಕೈಗಾರಿಕೆಗಳ ಅಭಿವೃದ್ಧಿ ಜೊತೆಗೆ ಉದ್ಯೋಗ ಸೃಷ್ಠಿಗೆ ಒತ್ತು ಕೊಡುವುದಾಗಿ ತಿಳಿಸಿದರು.
