ಕೊಪ್ಪಳ:ಹವಾಮಾನ ಮುನ್ಸೂಚನೆಯಂತೆ ಆಗಸ್ಟ್ 15ರ ನಂತರ ರಾಜ್ಯದಲ್ಲಿ ಮಳೆ ಬರುವ ನಿರೀಕ್ಷೆ ಇರುವುದರಿಂದ ತುಂಗಭದ್ರಾ ಜಲಾಶಯದಿಂದ ಪೋಲಾಗಿರುವ ನೀರು ಮತ್ತೆ ತುಂಬಿಕೊಳ್ಳಲಿದೆ, ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರುವ ಅಕ್ಟೋಬರ್‌ವರೆಗೂ ಮಳೆಗಾಲವಿದೆ, ಜಲಾಶಯದಲ್ಲಿ ಪುನಃ ನೀರು ತುಂಬುವ ಸಾಧ್ಯತೆಯಿದೆ ಎಂದರು.
ತುಂಗಭದ್ರಾ ಜಲಾಶಯದ ಕ್ರೆಸ್ಟ್‌ಗೇಟ್ ದುರ್ಘಟನೆ ಬಗ್ಗೆ ಬಿಜೆಪಿ ರಾಜಕೀಯ ಮಾಡುತ್ತಿದೆ, ತುಂಗಭದ್ರಾ ನೀರು ನಿರ್ವಹಣಾ ಮಂಡಳಿ ನೇತೃತ್ವವನ್ನು ಕೇಂದ್ರ ಸರ್ಕಾರ ನೇಮಿಸಿದವರು ನಿರ್ವಹಿಸುತ್ತಾರೆ ಎಂದರು.
ಯಾರನ್ನೂ ದೂಷಿಸುವುದಿಲ್ಲ
ಆಂಧ್ರ, ಕರ್ನಾಟಕ, ತೆಲಂಗಾಣ ರಾಜ್ಯದ ಸದಸ್ಯರು ಮಂಡಳಿಯಲ್ಲಿ ಇರುತ್ತಾರೆ, ಜಲಾಶಯದ ನಿರ್ವಹಣೆ ಜವಾಬ್ದಾರಿ ತುಂಗಭದ್ರಾ ಮಂಡಳಿಗೇ ಸೇರುತ್ತದೆ, ಈ ವಿಷಯದಲ್ಲಿ ನಾನು ಯಾರನ್ನೂ ದೂಷಿಸುವುದಿಲ್ಲ.
ತುಂಗಭದ್ರಾ ಜಲಾಶಯದಲ್ಲಿ 105 ಟಿಎಂಸಿ ನೀರು ತುಂಬಿತ್ತು, ತುಂಡಾಗಿರುವ ಕ್ರೆಸ್ಟ್‌ಗೇಟ್ ದುರಸ್ತಿ ಮಾಡಲು 50 ರಿಂದ 60 ಟಿಎಂಸಿ ನೀರು ಅಣೆಕಟ್ಟೆಯಿಂದ ಹೊರಗೆ ಬಿಡಬೇಕಾಗಿದೆ ಎಂದರು.