ಸರ್ಕಾರಿ ನೌಕರರಿಗೂ ಗ್ಯಾರಂಟಿ ಸೌಲಭ್ಯ ದೊರೆಯುತ್ತಿದೆ
ಬೆಂಗಳೂರು : ಗ್ಯಾರಂಟಿ ಯೋಜನೆ ಪರಿಷ್ಕರಿಸಿ, ಬಡವರಿಗಷ್ಟೇ ಸೀಮಿತಗೊಳಿಸಬೇಕೆಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಇಂದಿಲ್ಲಿ ಅಭಿಪ್ರಾಯಿಸಿದ್ದಾರೆ.
ಉಳ್ಳವರಿಗೂ ಈ ಯೋಜನೆ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದರ ಬದಲು ಕಡುಬಡವರಿಗೆ ಸವಲತ್ತುಗಳನ್ನು ನೀಡಿ, ಅವರ ಆರ್ಥಿಕ ಮಟ್ಟವನ್ನು ಹೆಚ್ಚಿಸೋಣ.
ಇದು ನನ್ನ ಸ್ವಂತ ಅಭಿಪ್ರಾಯವಲ್ಲ. ರಾಜ್ಯದ ಬಹುಜನರ ಅಭಿಪ್ರಾಯವಾಗಿದೆ. ಸಾರ್ವಜನಿಕರ ಅಭಿಪ್ರಾಯದಂತೆ ಯೋಜನೆ ಪರಿಷ್ಕರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇವೆ ಎಂದರು.
ದೆಹಲಿಯಿಂದ ಹಿಂತಿರುಗಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಮತ್ತು ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳುತ್ತದೋ ಅದಕ್ಕೆ ನಾವು ಬದ್ದರಾಗಿರುತ್ತೇವೆ. ಆದರೆ ಸಾರ್ವಜನಿಕರ ಅಭಿಪ್ರಾಯದಂತೆ ಬಡವರಿಗಷ್ಟೇ ಸವಲತ್ತು ಮೀಸಲಿರಬೇಕು.
ಗ್ಯಾರಂಟಿ ಯೋಜನೆಗಳಲ್ಲಿ ಕೆಲವು ನನಗೂ ದೊರೆಯುತ್ತಿದೆ. ಅಷ್ಟೇ ಅಲ್ಲ ಸರ್ಕಾರಿ ನೌಕರರಿಗೂ ಇದರ ಸೌಲಭ್ಯ ದೊರೆಯುತ್ತಿದೆ.
ಇತಿಮಿತಿಯಲ್ಲಿ ವಿದ್ಯುತ್ ಬಳಕೆ ಮಾಡುವುದರಿಂದ ನನ್ನ ಮನೆಯ ವಿದ್ಯುತ್ ಬಿಲ್ ಶೂನ್ಯ ಬರುತ್ತದೆ. ನನಗೆ ಯೋಜನೆ ಕೊಡಿ ಎಂದು ನಾವೇನು ಅರ್ಜಿ ಹಾಕಿಲ್ಲ. ಅದು ಸ್ವಯಂ ಪ್ರೇರಿತವಾಗಿ ಬಂದಿದೆ.
ಇನ್ನು ಶಕ್ತಿ ಯೋಜನೆಯಡಿ ನಮ್ಮ ಕುಟುಂಬದವರು ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣಿಸಿದರೆ, ಅವರಿಗೂ ಸವಲತ್ತು ದೊರೆಯುತ್ತಿದೆ. ಹೀಗಾಗಿ ಯೋಜನೆಯನ್ನು ಪರಿಷ್ಕರಿಸಿ, ಕಡುಬಡವರಗಷ್ಟೇ ಮೀಸಲಿರಿಸಲು ನನ್ನ ಮನವಿ.
ರಾಜ್ಯಾದ್ಯಂತ ಕಾರ್ಯಕರ್ತರು, ಸಾರ್ವಜನಿಕರು, ಸರ್ಕಾರಿ ನೌಕರರು ಇದೇ ಅಭಿಪ್ರಾಯ ಹೊಂದಿದ್ದಾರೆ.
ನನ್ನ ಇಲಾಖೆಯ ಹಿರಿಯ ಅಧಿಕಾರಿಯ ಮನೆಯಲ್ಲಿ ಏಳು ಮಂದಿ ಸರ್ಕಾರಿ ನೌಕರರಿದ್ದಾರೆ. ಅವರೆಲ್ಲ ಕುಟುಂಬದವರು ಗೃಹ ಜ್ಯೋತಿ ಸವಲತ್ತು ದೊರೆಯುತ್ತಿದೆ.
ನಮಗೆ ಇದರ ಅವಶ್ಯಕತೆ ಇಲ್ಲ ಎಂದು ಅವರೇ ನನ್ನ ಬಳಿ ಹೇಳಿಕೊಂಡಿದ್ದಾರೆ. ನಾವು ವಿದ್ಯುತ್ ಬಿಲ್ ಭರಿಸುವ ಶಕ್ತಿ ನಮಗಿದೆ. ನಮ್ಮಂಥವರಿಗೆ ನೀಡುವ ಬದಲು ಬಡವರಿಗೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ನನ್ನ ಕುಟುಂಬದಲ್ಲೇ ಐವರು ಜನಪ್ರತಿನಿಧಿಗಳಿದ್ದಾರೆ. ಅರೆಲ್ಲರಿಗೂ ಈ ಸೌಲಭ್ಯ ದೊರೆಯುತಿದೆ. ನಮಗೆ ಇದರ ಅವಶ್ಯಕತೆ ಇಲ್ಲ ಎಂದರು.
ಉಳ್ಳವರಿಗೆ ಈ ಸವಲತ್ತಿನ ಅಗತ್ಯವಿಲ್ಲ ಎಂದು ವರಿಷ್ಠರ ಗಮನಕ್ಕೆ ತಂದಿದ್ದೇವೆ. ಅಲ್ಲದೆ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ತಿಳಿ ಹೇಳಿದ್ದೇವೆ.
ವರಿಷ್ಠರು ಯಾವ ನಿರ್ಧಾರ ಕೈಗೊಳ್ಳುತ್ತಾರೂ, ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನೆಡೆಯಾಗಿದೆ ಎಂಬ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆ ಕಡಿತ ಮಾಡಲು ಹೊರಟಿದ್ದೀರಾ ಎಂಬ ಪ್ರಶ್ನೆಯನ್ನು ಸರಾಸಗಟವಾಗಿ ತಳ್ಳಿ ಹಾಕಿ, ಹಿಂದೆ ಬಿಜೆಪಿಯವರು ಎರಡು-ಮೂರು ಲಕ್ಷ ಅಂತರದಿಂದ ಆಯ್ಕೆಯಾಗುತ್ತಿದ್ದರು.
ಆದರೆ ಈ ಬಾರಿ ನಮ್ಮ ಕಡೆ ಶೇ. 50 ರಷ್ಟು ಸ್ಥಾನಗಳು ಕಾಂಗ್ರೆಸ್‌ಗೆ ಲಭ್ಯವಾಗಿದೆ. ಆದರೆ ಬಿಜೆಪಿಯ ಆಯ್ಕೆ ಅಂತರ 20 ರಿಂದ 25 ಸಾವಿರಕ್ಕೆ ಕುಸಿದಿದೆ.
ಗ್ಯಾರಂಟಿಯಿಂದ ಲಾಭವಾಗಿಲ್ಲ ಎನ್ನಲು ಸಾಧ್ಯವಿಲ್ಲ. ಆದರೆ ನೀರಿಕ್ಷಿತ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ ಎಂದು ಸಮರ್ಥಿಸಿಕೊಂಡರು.