ಬೆಂಗಳೂರು:ಗ್ರಾಮೀಣ ಮಕ್ಕಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಅರಿವು ಮೂಡಿಸಲು ಸರ್ಕಾರದ ವಸತಿ ಶಾಲೆಗಳಿಗೆ ಟೆಲಿಸ್ಕೋಪ್ ಒದಗಿಸುವುದಾಗಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಎನ್.ಎಸ್.ಬೋಸರಾಜ್ ಇಂದಿಲ್ಲಿ ಪ್ರಕಟಿಸಿದ್ದಾರೆ.
ರಾಜ್ಯದ 883 ವಸತಿ ಶಾಲೆಗಳಿಗೆ ಈ ಉಪಕರಣ ಒದಗಿಸಲು ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಮೂಲಕ ಇವುಗಳನ್ನು ಖರೀದಿಸಿ ಶೀಘ್ರದಲ್ಲೇ ಎಲ್ಲಾ ಶಾಲೆಗಳಿಗೆ ಒದಗಿಸುವುದಾಗಿ ತಿಳಿಸಿದ್ದಾರೆ.
ನೆಹರು ತಾರಾಲಯದಿಂದ ತರಬೇತಿ
ನಗರದ ಜವಹರಲಾಲ್ ನೆಹರು ತಾರಾಲಯದ ಸಹಯೋಗದಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುವುದು, ಆಯಾ ವಲಯಾವಾರು ತರಬೇತಿ ಸಮಯದಲ್ಲಿ ಟೆಲಿಸ್ಕೋಪ್ ಬಳಕೆ, ಅದರ ಮೂಲಕ ಅಧ್ಯಯನ ಮತ್ತು ಬೋಧನೆ ಹಾಗೂ ಅದನ್ನು ಸುಸ್ಥಿತಿಯಲ್ಲಿಡುವ ಬಗ್ಗೆ ವಿಜ್ಞಾನ ಶಿಕ್ಷಕರಿಗೆ ತರಬೇತಿ ನೀಡಲಾಗುವುದು ಎಂದರು.
ತಾರಾಲಯದ ಆವರಣವನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಅಭಿವೃದ್ಧಿಗೊಳಿಸುವ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಂತ್ರಿಕ ಆಧುನೀಕರಣಕ್ಕೆ ಅಗತ್ಯವಿರುವ ಪ್ರಸ್ತಾವನೆ ಸಲ್ಲಿಸಲು ಸಂಬಂಧಪಟ್ಟವರಿಗೆ ತಿಳಿಸಿದ್ದೇನೆ, ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆಯನ್ನೂ ಮಾಡಿದ್ದೇನೆ ಎಂದರು.
ಸ್ಮಾರ್ಟ್‌ಸಿಟಿ ಯೋಜನೆ
ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ಬಿಬಿಎಂಪಿ ವತಿಯಿಂದ ತಾರಾಲಯ ಆವರಣದಲ್ಲಿ ಆಧುನಿಕ ಸಭಾಂಗಣ, ಕ್ಲಾಸ್‌ರೂಂ ಸೇರಿದಂತೆ ಹಲವು ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ, ಈ ಕಟ್ಟಡ ಕಾಮಗಾರಿಯನ್ನು ಸೆಪ್ಟೆಂಬರ್ 15ರ ಒಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಜವಾಹರಲಾಲ್ ನೆಹರು ತಾರಾಲಯದಲ್ಲಿ ಪ್ರಸ್ತುತ ಇರುವಂತಹ ಅನಲಾಗ್ ಪ್ರೋಜೆಕ್ಟ್‌ರಗಳ ತಾಂತ್ರಿಕ ಉಪಕರಣಗಳು ಬಹಳ ಹಳೆಯ ತಂತ್ರಜ್ಞಾನದ್ದಾಗಿವೆ, ಇವುಗಳನ್ನು ಬದಲಿಸುವ ಮೂಲಕ ನೂತನ ತಂತ್ರಜ್ಞಾನದ ಎಲ್‌ಇಡಿ ಪ್ರೊಜೆಕ್ಟರ್‌ಗಳನ್ನು ಅಳವಡಿಸಲಾಗುವುದು ಎಂದರು.