ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಿಡಿ ನಿವೇಶನಗಳ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ.
ನಿನ್ನೆ ರಾತ್ರಿಯೇ ಇದರ ಸುಳಿವರಿತ ಮುಖ್ಯಮಂತ್ರಿ ಅವರು, ಕಾನೂನು ತಜ್ಞರೊಂದಿಗೆ ಮುಂಜಾನೆವರೆಗೂ ಸಮಾಲೋಚನೆ ನಡೆಸಿ, ಅವರುಗಳ ಸಲಹೆಯಂತೆ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಏರಲು ತೀರ್ಮಾನಿಸಿದ್ದಾರೆ.
ಭ್ರಷ್ಟಾಚಾರ ಆರೋಪ ಹಗರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಆಡಳಿತ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲಾಗಿತ್ತು.
ಎರಡನೇ ಮುಖ್ಯಮಂತ್ರಿ
ಕರ್ನಾಟಕ ಸರ್ಕಾರದ ಇತಿಹಾಸದಲ್ಲಿ ಬಿ.ಎಸ್.ಯಡಿಯೂರಪ್ಪ ನಂತರ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಅನುಮತಿ ಎದುರಿಸಿದ ಎರಡನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿದ್ದಾರೆ.
78ನೇ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿದ ಮರುದಿನವೇ ರಾಜ್ಯಪಾಲರು, ಮುಡಾ ಹಗರಣ ಸಂಬಂಧ ಬಂದಿದ್ದ ದೂರಿನ ಕಡತಕ್ಕೆ ಸಹಿ ಹಾಕಿ ಪ್ರಾಸಿಕ್ಯೂಷನ್ಗೆ ಹಸಿರು ನಿಶಾನೆ ನೀಡಿದ್ದಾರೆ.

ರಾಜ್ಯಪಾಲರ ಆದೇಶ ರವಾನೆ
ರಾಜ್ಯಪಾಲರ ಆದೇಶದ ಪ್ರತಿಯನ್ನು ಅವರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್, ಇಂದು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ರವಾನಿಸಿದ್ದಾರೆ.
ಮುಡಾ ವತಿಯಿಂದ ತಮ್ಮ ಪತ್ನಿ ಹೆಸರಿನಲ್ಲಿ 14 ಬದಲಿ ನಿವೇಶನಗಳನ್ನು ಅಭಿವೃದ್ಧಿ ಹೊಂದಿದ ಬಡಾವಣೆಯಲ್ಲಿ ಪಡೆದಿರುವ ಬಗ್ಗೆ ಫಿರ್ಯಾದುದಾರರು ಸಲ್ಲಿಸಿರುವ ದಾಖಲೆಗಳಿಂದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ದಾವೆಗೆ ಅನುಮತಿ ನೀಡಿರುವುದಾಗಿ ರಾಜ್ಯಪಾಲರು ಸರ್ಕಾರಕ್ಕೆ ಕಳುಹಿಸಿರುವ ಆರು ಪುಟಗಳ ಪತ್ರದಲ್ಲಿ ತಿಳಿಸಿದ್ದಾರೆ.
ದೂರುದಾರರಾದ ಪ್ರದೀಪ್ ಕುಮಾರ್ ಎಸ್.ಪಿ., ಟಿ.ಜೆ.ಅಬ್ರಹಾಂ ಹಾಗೂ ಮೈಸೂರಿನ ಸ್ನೇಹಮಯಿ ಕೃಷ್ಣ ಅವರು, ಮುಡಾದ ವತಿಯಿಂದ ಮುಖ್ಯಮಂತ್ರಿ ಅವರು ತಮ್ಮ ಕುಟುಂಬಕ್ಕೆ 14 ನಿವೇಶನಗಳನ್ನು ಪಡೆದು ಅಧಿಕಾರ ದುರುಪಯೋಗ ಮಾಡಿಕೊಂಡು ರಾಜ್ಯ ಬೊಕ್ಕಸಕ್ಕೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟು ಮಾಡಿದ್ದಾರೆ ಎಂದು ಪ್ರತ್ಯೇಕ ದೂರುಗಳು ಸಲ್ಲಿಕೆಯಾಗಿದ್ದವು.
ಭ್ರಷ್ಟಾಚಾರ ಆರೋಪ ಮೊಕದ್ದಮೆ
ದೂರಿನ ಜೊತೆಗೆ ಪೂರಕ ದಾಖಲೆಗಳನ್ನೂ ಸಲ್ಲಿಸಿದ್ದರು. ಇವೆಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ, ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 1988ರ ಸೆಕ್ಷನ್ 17ಎ ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023ರ ಸೆಕ್ಷನ್ 218ರಡಿ ಮೊಕದ್ದಮೆ ದಾಖಲಿಸಲು ಅನುಮತಿ ನೀಡಿರುವುದಾಗಿ ಮುಖ್ಯಕಾರ್ಯದರ್ಶಿ ಅವರಿಗೆ ಬರೆದಿರುವ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಮೂರು ಮಂದಿ ದೂರು ನೀಡಿದ ನಂತರ ಹಾಗೂ ಪೂರಕ ದಾಖಲೆಗಳನ್ನು ಪರಿಶೀಲಿಸಿದ ರಾಜ್ಯಪಾಲರು, ಜೂನ್ 27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯಕಾರ್ಯದರ್ಶಿ ಮೂಲಕ ಶೋಕಾಸ್ ನೋಟಿಸ್ ನೀಡಿದ್ದರು.
ಈ ನೋಟಿಸ್ಗೆ ಮುಖ್ಯಮಂತ್ರಿ ಅವರು, 70 ಪುಟಗಳ ಸವಿಸ್ತಾರವಾದ ಉತ್ತರವನ್ನು ರಾಜ್ಯಪಾಲರಿಗೆ ನೀಡಿ, ಸದರಿ ಪ್ರಕರಣದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ, ಶೋಕಾಸ್ ನೋಟಿಸ್ ಹಿಂಪಡೆಯುವಂತೆ ಮನವಿ ಮಾಡಿದ್ದರು.
ಸಂಪುಟ ಸಭೆ ನಿರ್ಣಯ
ಪತ್ರ ಬರೆಯುವುದಕ್ಕೂ ಮುನ್ನ ಪಕ್ಷದ ವರಿಷ್ಠರು ಹಾಗೂ ಸಂಪುಟ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ, ಅವರ ಸಲಹೆಯಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಸಿ, ರಾಜ್ಯಪಾಲರ ಪತ್ರದ ಬಗ್ಗೆ ಸವಿಸ್ತಾರ ಚರ್ಚೆ ನಡೆಸಿ, ಮುಖ್ಯಮಂತ್ರಿ ಅವರಿಗೆ ನೀಡಿರುವ ಶೋಕಾಸ್ ನೋಟಿಸ್ ಅನ್ನು ಹಿಂದಕ್ಕೆ ಪಡೆಯುವ ನಿರ್ಣಯ ತೆಗೆದುಕೊಳ್ಳಲಾಗಿತ್ತು.
ಸಂಪುಟದ ನಿರ್ಣಯವನ್ನು ಅಂದಿನ ಸರ್ಕಾರದ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್ ರಾಜಭವನಕ್ಕೆ ರವಾನಿಸಿದ್ದರು.
ಇದರ ನಡುವೆಯೇ ಮುಖ್ಯಮಂತ್ರಿ ಅವರು, ಬಿಜೆಪಿ ಆಡಳಿತದಲ್ಲಿ ಕೆಲವು ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಕ್ರಮ ಜರುಗಿಸಲು ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ರಾಜಭವನಕ್ಕೆ ಬಂದ ದೂರುಗಳ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದ್ದರು.
ಸುದೀರ್ಘ ಸಮಾಲೋಚನೆ
ಮುಖ್ಯಮಂತ್ರಿ ಹಾಗೂ ಸರ್ಕಾರದ ಪತ್ರಗಳು ರಾಜಭವನಕ್ಕೆ ತಲುಪಿದ ನಂತರ ರಾಜ್ಯಪಾಲರು, ಕಾನೂನು ತಜ್ಞರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದಲ್ಲದೆ, ದೂರುದಾರರನ್ನೂ ಕರೆಸಿಕೊಂಡು ಹೆಚ್ಚಿನ ವಿವರಣೆ ಪಡೆದಿದ್ದರು.
ಈ ಎಲ್ಲಾ ಬೆಳವಣಿಗೆಯ 20 ದಿನಗಳ ನಂತರ ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ.