ಬೆಂಗಳೂರು:ಶೋಷಿತ ಸಮುದಾಯಗಳ ಮನೆ ಬಾಗಿಲಿಗೆ ಸರ್ಕಾರದ ಕಾರ್ಯಕ್ರಮಗಳನ್ನು ತಲುಪಿಸಿದಾಗ ಮಾತ್ರ ಸರ್ಕಾರ ಮತ್ತು ಸರ್ಕಾರಿ ನೌಕರರ ಶ್ರಮ ಸಾರ್ಥಕವಾಗುತ್ತದೆ, ನಾವು-ನೀವು ಸೇರಿ ಸ್ವಾಸ್ಥ್ಯ ಸಮಾಜ ರೂಪಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಕರೆ ನೀಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ಮುಖ್ಯಮಂತ್ರಿಗಳಿಗೆ ನಮ್ಮ ಅಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮಸಮಾಜದ ಆಶಯದಿಂದ ಸರ್ಕಾರ ಜಾರಿ ಮಾಡುವ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ನಿಮ್ಮಗಳ ಮೇಲಿದೆ ಎಂದರು.
ಸಮಸಮಾಜದ ಕನಸು
ಡಾ.ಅಂಬೇಡ್ಕರ್, ಮಹಾತ್ಮ ಗಾಂಧಿ, ಬಸವಾದಿ ಶರಣರು ಸಮಸಮಾಜದ ಕನಸು ಕಂಡಿದ್ದರು, ಇವರೆಲ್ಲರ ಕನಸು ನನಸು ಮಾಡುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ, ಇದಕ್ಕಾಗಿ ಶ್ರಮಿಸೋಣ.
ಇದು ನಿಮ್ಮೆಲ್ಲರ ಸರ್ಕಾರ, ಸರ್ಕಾರಿ ನೌಕರರ ಹಿತ ಕಾಯಲು ನಾನು ಮತ್ತು ನಮ್ಮ ಸಚಿವ ಸಂಪುಟ ಸದಾ ಸಿದ್ಧವಿದೆ, ಸರ್ಕಾರ ಅಂದ್ರೆ ಎಲ್ಲಾ ಸರ್ಕಾರಿ ನೌಕರರೂ ಒಳಗೊಂಡಿರುತ್ತಾರೆ, ನೀವೆಲ್ಲಾ ಒಟ್ಟು ಸೇರಿದರೇನೇ ಸರ್ಕಾರ.
ವೇತನ ಆಯೋಗದ ಶಿಫಾರಸ್ಸು
ನಾನು ಮುಖ್ಯಮಂತ್ರಿಯಾಗಿ ಎರಡು ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಿದ್ದೇನೆ.
ನಿಮ್ಮೆಲ್ಲರ ಬೇಡಿಕೆಯಂತೆ ಹಳೇ ಪಿಂಚಣಿ ಯೋಜನೆ ಮತ್ತು ಆರೋಗ್ಯ ಸಂಜೀವಿನಿ ಬಗ್ಗೆಯೂ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ, ನಾನು ನಿಮ್ಮ ಜೊತೆ ಇರುತ್ತೇನೆ, ನಾವು-ನೀವು ಒಟ್ಟಾಗಿ ಇದ್ದು, ಜನರ ಋಣ ತೀರಿಸೋಣ ಎಂದರು.