ಬೆಂಗಳೂರು:ಮುಡಾ ಬಿಡಿ ನಿವೇಶನಗಳ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಪರ ಹಾಗೂ ವಿರೋಧ ಧರಣಿ ಪ್ರತಿಭಟನೆ, ಮುತ್ತಿಗೆ ಯತ್ನಗಳು ರಾಜ್ಯಾದ್ಯಂತ ಇಂದು ನಡೆದವು.
ರಾಜ್ಯಪಾಲರ ನಿರ್ಧಾರವನ್ನು ಸ್ವಾಗತಿಸಿ ಬಿಜೆಪಿ-ಜೆಡಿಎಸ್ ಶಾಸಕರು ಮತ್ತು ಕಾರ್ಯಕರ್ತರು ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದರು.
ಮತ್ತೊಂದೆಡೆ ಕಾಂಗ್ರೆಸ್‌ನ ಸಚಿವರು, ಜನಪ್ರತಿನಿಧಿಗಳು, ಕಾರ್ಯಕರ್ತರು ರಾಜ್ಯಪಾಲರ ನಿಲುವಿನ ಬಗ್ಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜಭವನ ಮುತ್ತಿಗೆ ಯತ್ನ
ರಾಜ್ಯಪಾಲರ ನಿಲುವನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಜಭವನ ಮುತ್ತಿಗೆಗೂ ಮುಂದಾದರು.
ಪ್ರದೇಶ ಕಾಂಗ್ರೆಸ್ ಕರೆ ಮೇರೆಗೆ ಕೇವಲ ರಾಜಧಾನಿ ಅಷ್ಟೇ ಅಲ್ಲದೆ, ರಾಜ್ಯಾದ್ಯಂತ, ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರ ವಿರುದ್ಧ ಪ್ರತಿಭಟನೆಗಳು ನಡೆದವು.
ಫ್ರೀಡಂಪಾರ್ಕ್‌ನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಿದ್ದರಾಮಯ್ಯ ಸಂಪುಟದ ಹಲವು ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿ, ಸಂವಿಧಾನ ವಿರೋಧಿ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿ ಎಂದು ಒತ್ತಾಯ ಮಾಡಿದರು.
ಕೇಂದ್ರದ ಕೈಗೊಂಬೆ
ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಿರುವ ಈ ರಾಜ್ಯಪಾಲರು ನಮಗೆ ಬೇಕಿಲ್ಲ, ಏನೂ ತಪ್ಪು ಮಾಡದ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಆದೇಶಿಸಿರುವುದು ಎಷ್ಟರ ಮಟ್ಟಿಗೆ ಸರಿ.
ತಮ್ಮ ವಿರುದ್ಧ ದೂರು ಬಂದಾಕ್ಷಣ ನ್ಯಾಯಾಂಗ ತನಿಖೆಗೆ ಮುಖ್ಯಮಂತ್ರಿ ಅವರು ಆದೇಶ ಮಾಡಿದ್ದಾರೆ, ಇದರ ನಡುವೆ ಮೈಸೂರು ಲೋಕಾಯುಕ್ತದಲ್ಲೂ ತನಿಖೆ ನಡೆಯುತ್ತಿದೆ.
ಇಷ್ಟೆಲ್ಲಾ ಇದ್ದರೂ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಬೇಕೆಂಬ ಏಕೈಕ ಉದ್ದೇಶದಿಂದ ಮುಖ್ಯಮಂತ್ರಿ ಅವರ ವಿರುದ್ಧ ತನಿಖೆಗೆ ಆದೇಶ ಮಾಡಿದ್ದಾರೆ.
ಇವರ ಷಡ್ಯಂತ್ರಕ್ಕೆ ನಾವು ಬಗ್ಗುವುದಿಲ್ಲ, ಕೇಂದ್ರ ಸರ್ಕಾರದ ಸವಾಲನ್ನು ಎದುರಿಸುತ್ತೇವೆ ಎಂದು ಹೇಳಿದ್ದಲ್ಲದೆ, ರಾಜ್ಯಪಾಲರು ಮತ್ತು ಎನ್‌ಡಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಪ್ರತಿಪಕ್ಷಗಳ ಆಕ್ರೋಶ
ಮತ್ತೊಂದೆಡೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆದು, ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಿಜಯೇಂದ್ರ ಮಾತನಾಡಿ, ಬಿಜೆಪಿ-ಜೆಡಿಎಸ್ ಒಂದಾಗಿ ರಾಜ್ಯದಲ್ಲಿನ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿವೆ, ಹೋರಾಟ ತಾರ್ಕಿಕ ಅಂತ್ಯಕ್ಕೆ ಬಂದಿದೆ, ಮುಖ್ಯಮಂತ್ರಿ ವಿರುದ್ಧ ಅನೇಕ ಭ್ರಷ್ಟಾಚಾರ ಹಗರಣದ ಆರೋಪಗಳು ಕೇಳಿ ಬಂದಿವೆ ಎಂದರು.
ಮುಖ್ಯಮಂತ್ರಿ ವಿರುದ್ಧ ಸಾಕಷ್ಟು ದಾಖಲೆಗಳನ್ನು ಸಲ್ಲಿಸಿದ ನಂತರವೇ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ, ಸಿದ್ದರಾಮಯ್ಯ ರಾಜೀನಾಮೆ ಕೊಡದೆ, ಬೆಂಬಲಿಗರು ಹಾಗೂ ಹೈಕಮಾಂಡ್ ಜೊತೆ ಸೇರಿ ಗೂಂಡಾಗಿರಿ ಮಾಡುತ್ತಿದ್ದಾರೆ.
ಭಂಡತನ ಬಿಟ್ಟು ರಾಜೀನಾಮೆ ಕೊಡಿ
ರಾಜ್ಯಪಾಲರ ಮೇಲೆ ದಬ್ಬಾಳಿಕೆ ಮಾಡುವುದನ್ನು ಬಿಟ್ಟು, ಮುಖ್ಯಮಂತ್ರಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು, ತಮ್ಮ ಬೆಂಬಲಕ್ಕೆ ಸಚಿವರು, ಶಾಸಕರು ನಿಲ್ಲುತ್ತಾರೆ ಎಂಬ ಭಂಡತನ ಬಿಟ್ಟು ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ನ್ಯಾಯಾಲಯದಲ್ಲಿ ಹೋರಾಟ ಮಾಡಲಿ, ಬೇಡ ಎನ್ನುವುದಿಲ್ಲ, ಕಾನೂನಾತ್ಮಕವಾಗಿ ಏನೇ ಹೋರಾಟ ಮಾಡಿ, ಆದರೆ, ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿ, ನಿಮ್ಮ ಸಾಮಾಜಿಕ ನ್ಯಾಯದ ಮುಖವಾಡ ಕಳಚಿರುವುದನ್ನು ರಾಜ್ಯದ ಜನ ನೋಡುತ್ತಿದ್ದಾರೆ ಎಂದರು.
ಅಶೋಕ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಎಷ್ಟು ಲೂಟಿ ಆಗುತ್ತಿದೆ ಎಂಬುದಾಗಿ ಜನ ಕೇಳುತ್ತಿದ್ದಾರೆ, ಸದನದಲ್ಲೂ ಉತ್ತರ ಕೊಡದೆ ಓಡಿಹೋದಿರಿ, ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹಾಳಾದರೆ ನೀವೇ ನೇರ ಹೊಣೆ, ಮುಡಾ ಹಗರಣ ಸಂಬಂಧ ಮಾಧ್ಯಮಗಳಲ್ಲಿ ದಾಖಲೆಗಳ ಪ್ರದರ್ಶನ ಆಗುತ್ತಿದೆ, ಪ್ರಾಸಿಕ್ಯೂಷನ್ ಅನುಮತಿ ಕೇಳಿರೋದು ಒಬ್ಬ ಅಲ್ಪಸಂಖ್ಯಾತ ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣಾ, ಪ್ರದೀಪ್ ಅವರುಗಳು,
ಈಗ ಗಲಾಟೆ ಮಾಡುತ್ತಿದ್ದೀರಾ
ಕಾಗೆ ಬೆಳ್ಳಗಿದೆಯಾ, ಕಪ್ಪಗಿದೆಯಾ ಎಂದು ತೀರ್ಮಾನ ಮಾಡುವುದು ಬಿಜೆಪಿ ಅಲ್ಲ, ನ್ಯಾಯಾಲಯ ಎಂದು ಕಾಂಗ್ರೆಸ್ ಹೇಳಿತ್ತು, ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಕೊಟ್ಟಾಗ ಹಬ್ಬ ಮಾಡಿದ್ದಿರಿ, ಈಗ ಗಲಾಟೆ ಮಾಡುತ್ತಿದ್ದೀರಾ.
ಒಂದೇ ಸರ್ಕಾರ, ಒಂದೇ ಮಂತ್ರಿಮಂಡಲ, ಒಂದೇ ಕ್ಯಾಬಿನೆಟ್, ಎರಡು ನೀತಿ, ದ್ವಂದ್ವ ಏಕೆ, ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಒಂದು ಕಾನೂನು, ಸಿದ್ದರಾಮಯ್ಯ ಅವರಿಗೆ ಒಂದು ಕಾನೂನಾ ಎಂದು ಪ್ರಶ್ನಿಸಿದರು.