ಎಲ್ಲಾ ಪ್ರತಿವಾದಿಗಳಿಗೂ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದ ವಿಚಾರಣೆಯನ್ನು ರಾಜ್ಯ ಹೈಕೋರ್ಟ್ ಈ ತಿಂಗಳ 29ಕ್ಕೆ ಮುಂದೂಡಿದೆ. ಅಷ್ಟೇ ಅಲ್ಲ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಳೆ ತನ್ನ ತೀರ್ಪನ್ನು ಪ್ರಕಟಿಸದಂತೆ ಹಾಗೂ ಈ ತಿಂಗಳ 29ರವರೆಗೂ ವಿಚಾರಣೆ ಮುಂದೂಡುವಂತೆ ಸೂಚಿಸಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರು ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ತಮ್ಮ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದನ್ನು ಸಿದ್ದರಾಮಯ್ಯ ಹೈಕೋರ್ಟ್‌ನಲ್ಲಿ ಇಂದು ಪ್ರಶ್ನಿಸಿದ್ದರು.
ಸಿದ್ದರಾಮಯ್ಯ ಪರ ವಕಾಲತ್ತು ವಹಿಸಿರುವ ಶತಬಿಷ ಶಿವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಬೆಳಗ್ಗೆ ಜನಪ್ರತಿನಿಧಿಗಳ ವಿರುದ್ಧದ ಅರ್ಜಿ ವಿಚಾರಣೆ ನಡೆಸುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ವಿಶೇಷ ನ್ಯಾಯಪೀಠದ ಮುಂದೆ ಬಂದಿತು.
ಮುಖ್ಯಮಂತ್ರಿ ಪರ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರೆ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಅಲ್ಲದೆ, ಪ್ರತಿವಾದಿಗಳ ಪರ ಘಟಾನುಘಟಿ ವಕೀಲರಾದ ರಂಗನಾಥ್ ರೆಡ್ಡಿ, ಪ್ರಭುಲಿಂಗ ನಾವಡಗಿ, ಲಕ್ಷ್ಮಿ ಐಯ್ಯಂಗಾರ್ ಮತ್ತಿತರರು ವಾದ ಮಂಡಿಸಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಪರ ವಾದ ಮಂಡಿಸಿದ ಸಿಂಘ್ವಿ, ಪ್ರಕರಣದಲ್ಲಿ ಸಂವಿಧಾನಾತ್ಮಕ ಮತ್ತು ಆಡಳಿತಾತ್ಮಕ ವಿಚಾರಗಳಿವೆ, ಆಗಸ್ಟ್ 20ರಂದು ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಬಾಕಿ ಇದೆ.
ರಾಜ್ಯಪಾಲರು ಇದಾವುದನ್ನೂ ಗಮನಕ್ಕೆ ತೆಗೆದುಕೊಂಡಿಲ್ಲ. ಅಲ್ಲದೆ, ರಾಜ್ಯ ಸಚಿವ ಸಂಪುಟ ಸಭೆ ತೆಗೆದುಕೊಂಡಿರುವ ತೀರ್ಮಾನಕ್ಕೂ ಸುದೀರ್ಘ ಸ್ಪಷ್ಟನೆ ನೀಡಿಲ್ಲ.
ರಾಜ್ಯಪಾಲರು ಯಾವ ಆಧಾರದ ಮೇಲೆ ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಆದೇಶ ನೀಡಿದ್ದಾರೆ ಎಂದು ತಿಳಿಸಿಲ್ಲ.
ಸ್ವತಃ ಸಿದ್ದರಾಮಯ್ಯ ಹಾಗೂ ಸಂಪುಟ ಸಭೆ, ರಾಜ್ಯಪಾಲರ ಶೋಕಾಸ್ ನೋಟಿಸ್‌ಗೆ ನೀಡಿದ್ದ ಉತ್ತರವನ್ನೂ ಪರಿಗಣಿಸಿಲ್ಲ.
ರಾಜ್ಯಪಾಲರಿಗೆ ಸಿದ್ದರಾಮಯ್ಯ ಅವರ ರಾಜೀನಾಮೆ ಅಷ್ಟೇ ಬೇಕಿದೆ. ಅದಕ್ಕೆ ಒಂದೇ ಒಂದು ಸರಿಯಾದ ಕಾರಣ ನೀಡದೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಲಾಗಿದೆ.
ಇಂತಹ ಕ್ರಮ ಸರ್ಕಾರ ಅಸ್ಥಿರಗೊಳಿಸುವುದಾಗಿದೆ. ಇಂತಹ ದೂರುಗಳನ್ನು ಮುಂದಿಟ್ಟುಕೊಂಡು ರಾಜೀನಾಮೆ ಪಡೆದು ರಾಷ್ಟ್ರಪತಿ ಆಡಳಿತ ಹೇರುವ ಸ್ಥಿತಿ ಇಲ್ಲ.
ಸರ್ಕಾರಿ ಸೇವಕನಾಗಿ ಮುಖ್ಯಮಂತ್ರಿ ಯಾವುದೇ ಶಿಫಾರಸು ಮಾಡಿಲ್ಲ. ಮುಡಾ ಕಡತಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ರಾಜ್ಯಪಾಲರು ನೂತನ ಬಿಎನ್‌ಎಸ್‌ಎಸ್ ಕಾಯಿದೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.
ಸ್ವತಂತ್ರವಾಗಿ ಪ್ರಾಸಿಕ್ಯೂಷನ್ ಅನುಮತಿಗೆ ನಿರ್ಧರಿಸಿದ್ದೇನೆ ಎಂದಷ್ಟೇ ರಾಜ್ಯಪಾಲರು ಹೇಳಿದ್ದಾರೆ.
ಅವರು ಸೆಕ್ಷನ್ 17ಎ ಅಡಿಯಲ್ಲಿ ತನಿಖೆಗೆ ಅನುಮತಿ ನೀಡುವಾಗ ಇರುವ ನಿಯಮಗಳನ್ನೂ ಪಾಲಿಸಿಲ್ಲ.
ಕರ್ನಾಟಕ ಸರ್ಕಾರದ ಸಂಪುಟ ನೀಡಿರುವ 100 ಪುಟಗಳ ಉತ್ತರಕ್ಕೆ ರಾಜ್ಯಪಾಲರು ಎರಡು ಪುಟಗಳ ಉತ್ತರ ನೀಡಿ ಮಂತ್ರಿಮಂಡಲದ ಸಭೆಯನ್ನೇ ಪರಿಗಣಿಸಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖಾಧಿಕಾರಿ ವರದಿ ನೀಡಿಲ್ಲ. ಅಷ್ಟೇ ಅಲ್ಲ, ಯಾವ ಆರೋಪವಿದೆ ಎಂದೂ ಹೇಳಿಲ್ಲ ಎಂದು ಬೇರೆ ಬೇರೆ ನ್ಯಾಯಾಲಯಗಳಲ್ಲಿ ಬಂದ ಪ್ರಕರಣಗಳ ತೀರ್ಪುಗಳನ್ನು ಉಲ್ಲೇಖಿಸಿದರು.
ಸಂವಿಧಾನ ವಿಧಿ 163ರಡಿ ಉತ್ತರ ಕೊಡುವ ಅಧಿಕಾರ ರಾಜ್ಯಪಾಲರಿಗೆ ಇದೆ. ಆದರೆ, ಸಂಪುಟದ ನಿರ್ಧಾರವನ್ನು ಒಂದು ಸಾಲಿನಲ್ಲಿ ತಿರಸ್ಕರಿಸಲು ಸಾಧ್ಯವಿಲ್ಲ.
ಮುಖ್ಯಮಂತ್ರಿ ವಿರುದ್ಧ ದೂರು ನೀಡಿರುವ ಟಿ.ಜೆ.ಅಬ್ರಹಾಂ ಬಗ್ಗೆಯೇ ಬಹಳಷ್ಟಿದೆ. ಆತನಿಗೆ ಸುಪ್ರೀಂಕೋರ್ಟ್ ದಂಡ ವಿಧಿಸಿದೆ. ಆತ ದೂರು ನೀಡಿದ ಒಂದೇ ದಿನದಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ.
ಈ ಪ್ರಕರಣದಲ್ಲಿ 2004 ರಿಂದ 2010ರ ತನಕ ಸಿದ್ದರಾಮಯ್ಯ ಅವರ ಪಾತ್ರವೇ ಇಲ್ಲ. 1992ರಲ್ಲಿ ಮುಡಾ ಸ್ವಾಧೀನಪಡಿಸಿಕೊಂಡ ಭೂಮಿಗೆ 1998ರಲ್ಲಿ ಡಿ-ನೋಟಿಫಿಕೇಷನ್ ಮಾಡಿದೆ. ಈ ಭೂಮಿಯನ್ನು 2004ರಲ್ಲಿ ಮುಖ್ಯಮಂತ್ರಿ ಅವರ ಬಾವಮೈದುನ ಖರೀದಿ ಮಾಡಿದ್ದಾರೆ.
2005ರಲ್ಲಿ ಕೃಷಿಯೇತರ ಜಮೀನಾಗಿ ಪರಿವರ್ತಿಸಲಾಗಿದೆ. 2010ರಲ್ಲಿ ಅದನ್ನು ಮುಖ್ಯಮಂತ್ರಿ ಅವರ ಪತ್ನಿಗೆ ದಾನದ ರೂಪದಲ್ಲಿ ನೀಡಲಾಗಿದೆ.
ಈ ಪ್ರಕ್ರಿಯೆಗಳ ಬಹುತೇಕ ಸಮಯದಲ್ಲಿ ಸಿದ್ದರಾಮಯ್ಯ ಅಧಿಕಾರದಲ್ಲಿ ಇರಲಿಲ್ಲ ಮತ್ತು ತರಾತುರಿಯನ್ನೂ ಮಾಡಿಲ್ಲ.
ಸಕ್ಷಮ ಪ್ರಾಧಿಕಾರ 2020ರಲ್ಲಿ ಭೂಮಿಗೆ ಪರಿಹಾರವಾಗಿ ನಿವೇಶನಗಳನ್ನು ಹಂಚಿದೆ. 2022ರಲ್ಲಿ ನಿವೇಶನಗಳನ್ನು ನೀಡಿದೆ ಎಂದು ದಾಖಲೆಗಳ ಸಮೇತ ಪೀಠದ ಮುಂದೆ ವಾದ ಮಂಡಿಸಿದರು.
ಬಿಜೆಪಿ ಆಡಳಿತದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕೆಲವು ಸಚಿವರ ವಿರುದ್ಧ ರಾಜಭವನಕ್ಕೆ ದೂರುಗಳು ಹೋಗಿದ್ದರೂ ಅದರ ಬಗ್ಗೆ ರಾಜಭವನ ಯಾವುದೇ ಕ್ರಮ ಕೈಗೊಂಡಿಲ್ಲ.
ಖಾಸಗಿ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ನೋಟಿಸ್ ನೀಡಲಾಗಿದೆ. ಸರ್ಕಾರ ನೀಡಿರುವ ಸ್ಪಷ್ಟನೆಗಳನ್ನು ತಿರಸ್ಕರಿಸಿ, ಬಿಎನ್‌ಎಸ್‌ಎಸ್ ಕಾಯಿದೆ ಅಡಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ.
17ಎ ಅಡಿ ಯಾವುದೇ ಪೋಲಿಸ್ ಅಧಿಕಾರಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿಲ್ಲ. ಮುಖ್ಯಮಂತ್ರಿ ಅವರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ನಿವೇಶನ ಹಂಚಿಕೆ ಮಾಡಿಲ್ಲ ಹಾಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.
ವಿವೇಚನಾರಹಿತವಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆ ಮೂಲಕ ಸಂವಿಧಾನದ 163ನೇ ವಿಧಿಯನ್ನು ಉಲ್ಲಂಘನೆ ಮಾಡಿದ್ದಾರೆ.
ಸಿಂಘ್ವಿ ನಂತರ ಪ್ರತಿವಾದಿಗಳ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ವಾದ ಮಂಡಿಸಿ, ರಾಜ್ಯ ಸಚಿವ ಸಂಪುಟ ತೆಗೆದುಕೊಂಡಿರುವ ನಿರ್ಣಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಕ್ಷಿಸುವ ಉದ್ದೇಶ ಇರಬಹುದು. ಹೀಗಾಗಿ ಈ ವಿಚಾರದಲ್ಲಿ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ವಹಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ ಎಂದು ದಾಖಲೆಗಳು ಮತ್ತು ರಾಷ್ಟ್ರದ ವಿವಿಧ ನ್ಯಾಯಾಲಯಗಳ ತೀರ್ಪುಗಳನ್ನು ಪೀಠದ ಗಮನಕ್ಕೆ ತಂದರು.
ಈ ಹಿಂದೆ ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ ಇಂತಹ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ತೀರ್ಮಾನಿಸಿದ್ದಾರೆ. ಹೀಗಾಗಿ ಯಾವುದೇ ಮಧ್ಯಂತರ ತಡೆಯಾಜ್ಞೆ ನೀಡಬಾರದು. ಪ್ರಕರಣದ ಮುಂದಿನ ವಾದಕ್ಕೆ ಗುರುವಾರಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿಗಳು, ಎಲ್ಲಾ ಪ್ರತಿವಾದಿಗಳಿಗೂ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದರು.